Advertisement

ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ಹರಸಾಹಸ

09:23 PM Jul 20, 2019 | Lakshmi GovindaRaj |

ಗುಡಿಬಂಡೆ: ಸರ್ಕಾರ 6 ರಿಂದ 16 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ನೀಡಬೇಕೆಂದು ಅನೇಕ ಆಂದೋಲನಗಳನ್ನು ಹಮ್ಮಿಕೊಂಡರೂ ಸಹ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ಶಿಕ್ಷಕರು ಹರಸಹಾಸ ಪಡುತ್ತಿರುವ ಘಟನೆ ತಾಲೂಕಿನಲ್ಲಿ ಎದುರಾಗಿದೆ.

Advertisement

ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದು, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ ಪುಸ್ತಕ, ಬಿಸಿಯೂಟ, ಬೈಸಿಕಲ್‌, ವಿದ್ಯಾರ್ಥಿ ವೇತನ ಸೇರಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಆದರೂ ನಾನಾ ಕಾರಣಗಳಿಂದಾಗಿ ಶಾಲೆಯಿಂದ ಮಕ್ಕಳು ಹೊರಗುಳಿಯುವುದು ಕಂಡುಬರುತ್ತಿದೆ.

ಇಂತಹ ಪ್ರಕರಣ ಪತ್ತೆಗೆ ಶಿಕ್ಷಕರು ಶಾಲಾ ಸಮೀಕ್ಷೆ ನಡೆಸಿದ್ದು, ಮನೆ ಮನೆಗೆ ತೆರಳಿ ಕುಟುಂಬ ಸಮೀಕ್ಷೆ ನಡೆಸಿ ಇದಕ್ಕಾಗಿಯೇ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಇಷ್ಟೆಲ್ಲ ಸಿದ್ಧತೆಗಳನ್ನು ಕೈಗೊಂಡರೂ ಸಹ ಮಕ್ಕಳು ಶಾಲೆಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದು ಶಿಕ್ಷಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಮನೆಗೆ ಬೀಗ: ಗುಡಿಬಂಡೆ ತಾಲೂಕಿನಲ್ಲಿ ಒಟ್ಟು 56 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದು, ಪ್ರತಿ ದಿನವು ಸಹ ಶಿಕ್ಷಕರು, ಸಿಆರ್‌ಪಿ ಮತ್ತು ಬಿ.ಆರ್‌.ಪಿ ಅಧಿಕಾರಿಗಳ ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಯೂ ಸಹ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡೋಣ ಎಂದು ಹೋದಾಗ ಮಾಹಿತಿ ತಿಳಿದ ಕೂಡಲೇ ಪೋಷಕರು, ಮಕ್ಕಳು ಮನೆಗೆ ಬೀಗ ಹಾಕಿಕೊಂಡು ಹೋಗಿ ನಂತರ ಅಧಿಕಾರಿಗಳು ಗ್ರಾಮದಿಂದ ಹೋದ ಮೇಲೆ ಮತ್ತೆ ಮನೆಗೆ ಬರುತ್ತಿದ್ದಾರೆ.

56 ವಿದ್ಯಾರ್ಥಿಗಳು: ತಾಲೂಕಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 21 ಮತ್ತು ಪ್ರೌಢಶಾಲೆಯಲ್ಲಿ 36 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದರಲ್ಲಿ ಗ್ರಾಮೀಣ 28 ಮತ್ತು ಪಟ್ಟಣದ ವಿದ್ಯಾರ್ಥಿಗಳು 28 ವಿದ್ಯಾರ್ಥಿಗಳಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಶಾಲೆಗೆ ಬರೋದೇ ಇಲ್ಲ: ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆತರಲು ಮನೆಗೆ ಭೇಟಿ ನೀಡಿದಾಗ ಮಕ್ಕಳು ಶಾಲೆಗೆ ಬರುವುದಿಲ್ಲ, ಕೂಲಿ ಕೆಲಸಕ್ಕೆ ಹೋಗುತ್ತೇವೆಂದು ಕೆಲ ವಿದ್ಯಾರ್ಥಿಗಳು ಉತ್ತರಿಸಿದರೆ, ಕೆಲ ಪೋಷಕರು ನಮ್ಮನ್ನು ಸಾಕುವವರು ಯಾರು ಇಲ್ಲ. ಮಕ್ಕಳು ಕೆಲಸಕ್ಕೆ ಹೋಗಿ ನಮ್ಮನ್ನು ಸಾಕುತ್ತಿದ್ದಾರೆ. ನಮಗೆ ಈ ಶಿಕ್ಷಣ ಅಚ್ಚುಬಂದಿಲ್ಲ. ನಮ್ಮನ್ನು ಬಿಟ್ಟು ಬಿಡಿ, ಇಲ್ಲಾಂದ್ರೆ ನಾವು ಸಹ ಮಕ್ಕಳ ಜೊತೆ ಶಾಲೆಗೆ ಬರುತ್ತೇವೆ. ನಮಗೂ ಸಹ ಶಾಲೆಯಲ್ಲೇ ಊಟ ಹಾಕಿ ಎಂಬ ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ.

ಮೃತ ಮಕ್ಕಳ ಹೆಸರು ಪಟ್ಟಿಯಲ್ಲಿ: ತಾಲೂಕಿನಲ್ಲಿ 4 ವಿದ್ಯಾರ್ಥಿಗಳು ಗುಡಿಬಂಡೆ ಅಮಾನಿಬೈರಸಾಗರ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಆ ವಿದ್ಯಾರ್ಥಿಗಳ ಹೆಸರುಗಳು ಸಹ ಶಾಲೆ ಬಿಟ್ಟ ಮಕ್ಕಳ ಪಟ್ಟಿಗೆ ಸೇರಿದೆ. ಇದು ಎಸ್‌ಟಿಎಸ್‌ನಲ್ಲಿ ಸರಿಪಡಿಸಲು ಆಗುತ್ತಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ವಾರಗಟ್ಟಲೇ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪೋಷಕರಿಗೆ ಮತ್ತು ಮಕ್ಕಳಿಗೆ ಶಾಲೆಗೆ ಬರುವಂತೆ ಮನವೊಲಿಸುತ್ತಿದ್ದೇವೆ ಹಾಗೂ ಸರ್ಕಾರದ ಎಲ್ಲಾ ಸವಲತ್ತುಗಳ ಬಗ್ಗೆ ಸಹ ತಿಳಿಸಿದ್ದೇವೆ. ಆದರೆ ಕೆಲ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಕರೆ ತರಲು ಸಾಧ್ಯವಾಗುತ್ತಿಲ್ಲ.
-ಬಿ.ಆರ್‌.ಮಂಜುನಾಥ್‌, ತಿರುಮಣಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ

* ವೆಂಕಟೇಶ್‌.ಎನ್‌.ವಿ. ಗುಡಿಬಂಡೆ

Advertisement

Udayavani is now on Telegram. Click here to join our channel and stay updated with the latest news.

Next