ಕೃಷಿ ಸಾಲ ಮರುಪಾವತಿಸಲಾಗದೆ, ಅವತಾರ ಸಿಂಗ್ ಆತ್ಮಹತ್ಯೆ ಮಾಡಿಕೊಂಡದ್ದು ಎಂಟು ವರ್ಷಗಳ ಮುಂಚೆ. ನಲುಗಿದ ಆ ಕುಟುಂಬ ಮತ್ತೆ ತತ್ತರಿಸಿದ್ದು, ಅವರ ಇಬ್ಬರು ಪುತ್ರರೂ ರೂಪ್‌ಸಿಂಗ್ (40) ಮತ್ತು ಬಸಂತ್‌ಸಿಂಗ್(32) ಭಾಕ್ರಾ ಕಾಲುವೆಗೆ ಹಾರಿ ಪ್ರಾಣತ್ಯಾಗ ಮಾಡಿದಾಗ.
Advertisement
ಇವರೆಲ್ಲರೂ ಪಂಜಾಬಿನ ಪಾಟಿಯಾಲ ಜಿÇÉೆಯ ನಿವಾಸಿಗಳು. ಅಣ್ಣತಮ್ಮಂದಿರು. ತಮ್ಮ ಒಂದು ಹೆಕ್ಟೇರ್ ಕೃಷಿ ಜಮೀನಿನ ಜೊತೆಗೆ ಇನ್ನೂ 12 ಹೆಕ್ಟೇರ್ ಜಮೀನನ್ನು ಕೃಷಿಗಾಗಿ ಲೀಸ್‌ಗೆ ಪಡೆದಿದ್ದರು. ಆದರೂ ಅವರಿಗೆ ಲಾಭ ಗಳಿಸಲು ಸಾಧ್ಯವಾಗುತ್ತಿರಲಿಲ್ಲ; ಹಾಗಾಗಿ ಅವರು ಬಾಕಿ ಮಾಡಿಕೊಂಡ ಸಾಲ ಹೆಚ್ಚುತ್ತಲೇ ಇತ್ತು. ಅವರಾದರೂ ಬೇರೆಬೇರೆ ಮೂಲಗಳಿಂದ ಎಷ್ಟು ಸಾಲ ಪಡೆಯಲು ಸಾಧ್ಯ? ಕೊನೆಗೆ, ಸಾಲದ ಹೊರೆಯ ವಿಷಚಕ್ರದ ಹೊಡೆತಕ್ಕೆ, ಒಂದೇ ಕುಟುಂಬದ ಎರಡು ತಲೆಮಾರುಗಳು ಬಲಿಯಾದವು.
Related Articles
Advertisement
ಕೇಂದ್ರ ಸರಕಾರವು ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗಕ್ಕೆ ನೀಡಿರುವ ಆದೇಶ: ಕೃಷಿಕರ ಫಸಲಿಗೆ ನಿಶ್ಚಿತ ಬೆಲೆ ಒದಗಿಸುವುದು ಮತ್ತು ಇದರಿಂದಾಗಿ ಹಣದುಬ್ಬರದ ಒತ್ತಡ ಹೆಚ್ಚಾಗದಂತೆ ಮಾಡುವುದು. ಆದ್ದರಿಂದ, ಕೃಷಿಕರ ಫಸಲಿನ ಬೆಲೆಗಳನ್ನು ಉದ್ದೇಶಪೂರ್ವಕವಾಗಿಯೇ ಕಡಿಮೆ ಮಾಡಲಾಗುತ್ತಿದೆ; ಹಲವು ಕೃಷಿ ಉತ್ಪನ್ನಗಳ ಬೆಲೆಗಳು ಅವುಗಳ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಯಾಗಿವೆ. ಈ ಆರ್ಥಿಕ ಧೋರಣೆ ಭಾರತಕ್ಕೆ ಮಾತ್ರ ಸೀಮಿತವಲ್ಲ; ಇದು ಇಡೀ ಜಗತ್ತಿನಲ್ಲಿ ಜಾರಿಯಲ್ಲಿರುವ ಧೋರಣೆ.
ನಿಜ ಹೇಳಬೇಕೆಂದರೆ, ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿರುವ ಎಲ್ಲ ಸರಕಾರಗಳೂ, ಆಹಾರದ ಬೆಲೆಗಳನ್ನು ಕಡಿಮೆ ಹಂತದಲ್ಲಿಡುವ ಜವಾಬ್ದಾರಿಯನ್ನು ನಾಜೂಕಿನಿಂದ ಕೃಷಿಕರಿಗೆ ದಾಟಿಸಿವೆ. ಅಂದರೆ, ಗ್ರಾಹಕರಿಗೆ ರಿಯಾಯ್ತಿ ಬೆಲೆಯಲ್ಲಿ ಆಹಾರ ಒದಗಿಸುವ ವೆಚ್ಚವನ್ನೆಲ್ಲ ಭರಿಸುತ್ತಿರುವವರು ಕೃಷಿಕರು. ಅವರ ಕೃಷಿ ಉತ್ಪನ್ನಗಳಿಗೆ ತಿಳಿದುತಿಳಿದೇ ಕಡಿಮೆ ಬೆಲೆ ಪಾವತಿಸಿ, ಅವರನ್ನು ಕಡುಬಡತನಕ್ಕೆ ತಳ್ಳಲಾಗಿದೆ. ಆದರೂ, ಕೃಷಿಯಲ್ಲಿ ತೊಡಗಿದಾಗೆಲ್ಲ ತಾವು ನಷ್ಟದ ಬೆಳೆ ಬೆಳೆಯುತ್ತಿದ್ದೇವೆ ಎಂಬುದು ಕೃಷಿಕರಿಗೆ ಅರ್ಥವಾಗುತ್ತಿಲ್ಲ. ಈಗ ರೈತರ ಕೃಷಿಯ ಆದಾಯ ಕುಸಿಯುತ್ತಿದೆ ಅಥವಾ ಕೃಷಿಯ ವೆಚ್ಚ ಸರಿದೂಗಿಸಲು ಸಾಕಾಗುವಷ್ಟಿದೆ; ಅಂದರೆ, ಕೃಷಿಯಲ್ಲಿ ಲಾಭವೇ ಇಲ್ಲ ಎಂಬಂತಾಗಿದೆ.
ಈ ಧೋರಣೆಯ ಮೂಲದಲ್ಲಿ, ಕೃಷಿಯಲ್ಲಿ ತೊಡಗಿರುವ ಜನರ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸುವ ಹುನ್ನಾರವಿದೆ. ವಿಶ್ವಬ್ಯಾಂಕ್ 1996ರಲ್ಲಿ ನಮ್ಮ ದೇಶಕ್ಕೆ ನೀಡಿದ್ದ ಸೂಚನೆ ಹೀಗಿದೆ: 2015ರ ಹೊತ್ತಿಗೆ ಭಾರತದ ಗ್ರಾಮೀಣ ಪ್ರದೇಶಗಳಿಂದ 40 ಕೋಟಿ ಜನರನ್ನು ನಗರಗಳಿಗೆ ಸ್ಥಳಾಂತರಿಸಬೇಕು. ವಿಶ್ವಬ್ಯಾಂಕ್ ನೀಡುವ ಪ್ರತಿಯೊಂದು ಸಾಲಕ್ಕೆ ವಿಧಿಸುವ ಷರತ್ತುಗಳ ಸಂಖ್ಯೆ 140 150. ಪ್ರತಿಯೊಂದು ಸಾಲ ಕೊಡುವಾಗಲೂ ಈ ಸ್ಥಳಾಂತರಿಸುವ ಷರತ್ತಿಗೆ ಒತ್ತು ನೀಡಲಾಗಿದೆ. ಮಾಜಿ ಪ್ರಧಾನಮಂತ್ರಿಯೊಬ್ಬರು ಇದೇ ಷರತ್ತನ್ನು ಮತ್ತೆಮತ್ತೆ ಹೇಳುತ್ತಿದ್ದುದನ್ನು ನೆನಪು ಮಾಡಿಕೊಳ್ಳಿ. ಈಗ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಲಿ ಕೂಡ, ಕೃಷಿಯಲ್ಲಿ ತೊಡಗಿರುವ ಶೇ.52 ಜನಸಂಖ್ಯೆಯನ್ನು 2022ರ ಹೊತ್ತಿಗೆ ಶೇ.38ಕ್ಕೆ ಇಳಿಸುವ ಬಗ್ಗೆ ಯೋಜನೆಗಳನ್ನು ರೂಪಿಸಿದೆ.
ನಮ್ಮ ದೇಶ ಸ್ವಾತಂತ್ರ್ಯ ಗಳಿಸಿ 70 ವರ್ಷಗಳ ನಂತರವೂ ಆರ್ಥಿಕ ಸ್ವಾತಂತ್ರ್ಯ ಎಂಬುದು ಕೃಷಿಕರಿಗೆ ಕನಸಾಗಿ ಉಳಿದಿದೆ. 2016ರ ಆರ್ಥಿಕ ಸಮೀಕ್ಷೆ ಇದನ್ನು ಸ್ಪಷ್ಟವಾಗಿ ಪ್ರಕಟಿಸಿದೆ: ಅದರ ಅನುಸಾರ, 17 ರಾಜ್ಯಗಳಲ್ಲಿ ಕೃಷಿಕುಟುಂಬಗಳ ವಾರ್ಷಿಕ ಆದಾಯ ರೂ.20,000ಕ್ಕಿಂತ ಕಡಿಮೆ. ಅಂದರೆ, ನಮ್ಮ ದೇಶದ ಅರ್ಧಭಾಗದಲ್ಲಿ ಕೃಷಿಕುಟುಂಬಗಳು ತಿಂಗಳಿಗೆ ರೂ.1,700ಕ್ಕಿಂತ ಕಡಿಮೆ ಆದಾಯದಲ್ಲಿ ಹೇಗೋ ಬದುಕುತ್ತಿವೆ. ಕೃಷಿಕರನ್ನು ಉಳಿಸಲು ಉಳಿದಿರುವುದು ಕೆಲವೇ ದಾರಿಗಳು. ಮೊದಲನೆಯದು, ಸಿಎಸಿಪಿಗೆ ಸ್ಪಷ್ಟ ಆದೇಶ ನೀಡುವುದು: ಅದೇನೆಂದರೆ, ಕೃಷಿಕರ ಕೃಷಿ ಉತ್ಪನ್ನಗಳ ಬೆಲೆ ನಿಗದಿ ಪಡಿಸುವಾಗ, ಕುಟುಂಬದ ಮನೆವೆಚ್ಚ, ವೈದ್ಯಕೀಯ ವೆಚ್ಚ, ಶಿಕ್ಷಣ ವೆಚ್ಚ ಮತ್ತು ಪ್ರಯಾಣ ವೆಚ್ಚ ಇವು ನಾಲ್ಕನ್ನೂ ಸೇರಿಸಿ, ಬೆಲೆ ನಿಗದಿ ಪಡಿಸಬೇಕು (ಸರಕಾರಿ ಉದ್ಯೋಗಿಗಳಿಗೆ 108 ವಿವಿಧ ಭತ್ಯೆಗಳನ್ನು ಸರಕಾರ ಪಾವತಿಸುತ್ತಿದ್ದು, ಕೃಷಿಕರಿಗೆ ಕನಿಷ್ಠ ಇವು 4 ವೆಚ್ಚಗಳ ಭಾಗಶಃ ಪಾವತಿ ಅಗತ್ಯ.) ಕನಿಷ್ಠ ಬೆಂಬಲ ಬೆಲೆಯಿಂದ ಅನುಕೂಲವಾಗುವುದು (2018-19ರ ಕೇಂದ್ರ ಬಜೆಟಿನಲ್ಲಿ ಘೋಷಿಸಿದಂತೆ, ಕೃಷಿ ಬೆಳೆಗಳ ಉತ್ಪಾದನಾ ವೆಚ್ಚದ ಶೇ.50ರಷ್ಟು ಅಧಿಕ ಬೆಲೆ ಪಾವತಿಸಿದಾಗ) ಕೇವಲ ಶೇ.6 ರೈತರಿಗೆ. ಇನ್ನುಳಿದ ಶೇ.94 ರೈತರು ಸ್ಥಳೀಯ ಮಾರುಕಟ್ಟೆಗಳಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಬೇಕಾಗಿದೆ; ಅಲ್ಲಿ ಶೋಷಣೆಯೇ ವ್ಯವಹಾರ ಸೂತ್ರ. ಹಾಗಾಗಿ, ಎರಡನೆಯ ಕ್ರಮ: ಐದು ಕಿಲೋಮೀಟರಿಗೆ ಒಂದರಂತೆ ಖರೀದಿ ಮತ್ತು ಮಾರಾಟ ಕೇಂದ್ರಗಳನ್ನು ಬೇಗನೇ ಆರಂಭಿಸಬೇಕಾಗಿದೆ; ಜೊತೆಗೆ, ಕೃಷಿಕರು ಯಾವುದೇ ಉತ್ಪನ್ನ ತಂದರೂ ಅದನ್ನು ಲಾಭದಾಯಕ ಬೆಲೆಗೆ ಖರೀದಿಸಲು ಈ ಕೇಂದ್ರಗಳಿಗೆ ಆದೇಶ ನೀಡಬೇಕಾಗಿದೆ. ಈ ಎರಡು ಕ್ರಮಗಳ ತುರ್ತು ಜಾರಿಯಿಂದ ಅನ್ನದಾತರ ಬದುಕಿನಲ್ಲಿ ಬೆಳಕಾಗಲು ಸಾಧ್ಯ. – ಅಡ್ಕೂರು ಕೃಷ್ಣ ರಾವ್