Advertisement

ಸಾಧನೆಯ ಶಿಲ್ಪಿಗಳಾಗಬೇಕಿದೆ

12:30 AM Feb 24, 2020 | Sriram |

ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ. ತನ್ನ ನೆನಪುಗಳೆಂಬ ಕಸ,ಧೂಳುಗಳನ್ನು ಕೊಡವಿ ಶುಚಿಮಾಡಿದರೇನೇ ಮುಂದಿನ ಶುದ್ಧವಾದ ಹಾದಿಗೆ ಹೂವು ಸುರಿದಂತೆ ಆಗುವುದು.ಅದು ಹೊರತು ಇದ್ದ ಕಸದ ರಾಶಿಗೆ ಹೂವಿನ ಅಲಂಕಾರ ಮಾಡಿದರೆ ಎಷ್ಟು ಸೊಗಸಾದೀತು?

Advertisement

ಮನುಷ್ಯನು ಅತಿಯಾದ ನಿರೀಕ್ಷೆಗಳನ್ನಿಟ್ಟು ಬದುಕಿದಾಗಲೇ ನೋವು ಕೂಡಾ ಜಾಸ್ತಿಯಾಗುವುದು. ತಮ್ಮ ಪಾಡಿಗೆ ತಾವು ಏನೊಂದೂ ನಿರೀಕ್ಷಿಸದೇ ಶ್ರದ್ಧೆಯಿಂದ ಕಾರ್ಯವನ್ನು ಮಾಡುತ್ತಿದ್ದರೆ,ಅದರ ಫ‌ಲಾಫ‌ಲಗಳನ್ನು ಪರಮಾತ್ಮನಿಗೇ ಒಪ್ಪಿಸಿದರೆ ನೋವು, ಬೇಸರಗಳೆಂಬ ಕಸ ಕೊಳೆಗಳು ದೂರಾಗಿ ಸ್ವತ್ಛವಾಗಿ ಗುಡಿಸಿದ ರೀತಿಯಲ್ಲಿ ಶುದ್ಧವಾಗುತ್ತವೆ. ಒಂದೆಡೆ ರಾಶಿ ಹಾಕಿದ ಕಸವು ದಿನ ಸರಿಯುತ್ತ ಹೋದಂತೆ ಹೇಗೆ ನಾತ ಬೀರುವುದೋ, ಮನದಲ್ಲಿ ತುಂಬಿದ ಬೇಡದ ವಿಚಾರಗಳೂ ಕೂಡಾ ನಿರುಪಾಯವಾಗಿ ನಮ್ಮನ್ನು ಆಕ್ರಮಿಸಿ, ಸುಗಂಧ ಹರಡುವ ಬದಲು, ನೆಮ್ಮದಿಯನ್ನು ಕಳೆದುಕೊಂಡು ವಿಲಿ ವಿಲಿ ಒದ್ದಾಡುವ ಪರಿಸ್ಥಿತಿ ತರಬಹುದು. ಹಾಗಾಗದಿರಲು ಬದುಕಿನಲ್ಲಿ ಫ‌ಲಾಫ‌ಲಗಳ ಅಪೇಕ್ಷೆಯನ್ನು ನಿರಾಕಾರನಾದ, ನಿರಂತರವಾದ, ಅಗೋಚರವಾದ, ಅಮಿತವಾದ ಆ ದೇವರಿಗೆ ತಲುಪಿಸಿಬಿಡಿ.

ಬದುಕು ನಾವೆಣಿಸಿದಂತೆ ಸಾಗುವುದಿಲ್ಲ. ನಮ್ಮೊಳಗಿನ ಆತ್ಮ ಅದು ಮಾಡು, ಇದು ಮಾಡು ಎಂದು ಪ್ರೇರೇಪಿಸುತ್ತದೆ. ಒಳ್ಳೆಯ ಕಾರ್ಯ ವಾದರೆ ಮುಂದಡಿಯಿಡುತ್ತೇವೆ. ಪ್ರತಿಫ‌ಲ ಸಿಕ್ಕಾಗ ಸಂತೋಷಿಸುತ್ತೇವೆ, ಅಥವಾ ವಿರುದ್ಧವೂ ಸಂಭವಿಸಬಹುದು. ಆಗ ಬೇಸರಿಸುತ್ತೇವೆ. ಹಾಗಾಗಿ ಬುದ್ಧಿವಂತನಾಗಿರುವ ಮನುಷ್ಯ ತಿಳಿದೂ ತಿಳಿದು ತಪ್ಪನ್ನೆಸಗುವುದು ಮಹಾದಡ್ಡತನ. ಈ ಬದುಕು ದೇವರ ವರ. ಅದನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಬೇಕು. ಈ ಪ್ರಪಂಚದ ಆಗುಹೋಗುಗಳನ್ನು ಅರಿತು ಯೋಗ ಚಿತ್ತವುಳ್ಳವರಾಗಿ ಬಾಳಬೇಕು.ಬಾಳುವುದು ಎಂದರೆ ದಿನ ಕಳೆಯುವುದಲ್ಲ , ದಿನ ಹೇಗೆ ಸಾಗಿತು ಎಂಬ ಚಿಂತನೆಯನ್ನು ಮನದಲ್ಲಿ ಮಾಡಿಕೊಳ್ಳಬೇಕು. ಒಳಿತು ಕೆಡುಕುಗಳ ಕಡೆಗೆ ನಿಗಾವಿಡಬೇಕು.ಒಳಿತಾದರೆ ಅಪ್ಪಬೇಕು, ಒಪ್ಪಬೇಕು. ಕೆಡುಕಾಗುವುದಾದರೆ ವರ್ಜಿಸಬೇಕು, ಹಿಂತೆಗೆಯಬೇಕು.

ಮಲ್ಲಿಕಾ ಜೆ. ರೈ., ಗುಂಡ್ಯಡ್ಕ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next