ರಾಮದುರ್ಗ: ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಕನ್ನಡ ಭಾಷಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಆ ನಿಟ್ಟಿನಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮುಂದಾಗಬೇಕು ಎಂದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಾಡಳಿತದ ನೇತೃತ್ವದಲ್ಲಿ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ನಾಡಿನ ಭವ್ಯ, ಪರಂಪರೆ, ಇತಿಹಾಸಕ್ಕೆ ತಾಲೂಕಿನ ಕೊಡುಗೆ ಅಪಾರವಾಗಿದೆ. ಈ ಬಾರಿಯು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಕನ್ನಡದ ಹಿತ ಕಾಯುವಲ್ಲಿ ಹೋರಾಡಿದ ಡಾ| ರಾಜಕುಮಾರ ಅವರ ಪುತ್ರ, ಹೆಸರಾಂತ ಚಿತ್ರನಟ ಪುನೀತ್ ರಾಜಕುಮಾರ ಅವರ ನಿಧನದಿಂದ ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು ಎಂದು ಹೇಳಿದರು.
ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಪುರಸಭೆ ಅಧ್ಯಕ್ಷ ಶಂಕರ ಬೆನ್ನೂರ ಮಾತನಾಡಿದರು. ಕಟಕೋಳ ಪಪೂ ಕಾಲೇಜು ಉಪನ್ಯಾಸಕ ರಮೇಶ ಬಾರಕೇರಿ ಉಪನ್ಯಾಸ ನೀಡಿದರು.
ತಾಲೂಕಾ ಆಡಳಿತದಿಂದ ಶಾಸಕ ಮಹಾದೇವಪ್ಪ ಯಾದವಾಡ, ಟಿಎಚ್‌ಓ ಡಾ| ಸತೀಶ ಪೋತದಾರ, ಪ್ರಸ್ ಕ್ಲಬ್ ಅಧ್ಯಕ್ಷ ಈರನಗೌಡ ಪಾಟೀಲ, ಉಪನ್ಯಾಸಕ ರಮೇಶ ಬಾರಕೇರಿ, ಕರವೇ ಅಧ್ಯಕ್ಷ ವಿನಯ ಚಂದರಗಿ ಅವರನ್ನು ಸನ್ಮಾನಿಸಲಾಯಿತು. ಎಪಿಎಂಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಉಪಾಧ್ಯಕ್ಷ ಪ್ರಕಾಶ ಬರದೇಲಿ, ಪುರಸಭೆ ಉಪಾಧ್ಯಕ್ಷ ರಾಘವೇಂದ್ರ ದೊಡಮನಿ, ತಾ.ಪಂ ಇಒ ಮುರಳಿಧರ ದೇಶಪಾಂಡೆ, ಕರವೇ
ಅಧ್ಯಕ್ಷ ವಿನಯ ಚಂದರಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.