ಹಾನಗಲ್ಲ: ಸುಮಾರು 800 ಜಾತಿಗಳ ಹೆಸರಿನಲ್ಲಿ ಗುರುತಿಸಿಕೊಳ್ಳುವ ಬುಡಕಟ್ಟು ಜನಾಂಗದ ಜನಸಂಖ್ಯೆ ದೇಶದಲ್ಲಿ 12 ಕೋಟಿಗೂ ಅಧಿ ಕವಾಗಿದೆ. ಕರ್ನಾಟಕದಲ್ಲಿ 51 ಪ್ರಕಾರದ ಬುಡಕಟ್ಟು ಜನರಿದ್ದಾರೆ. ಇವರ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಬದ್ಧವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.
ಇಲ್ಲಿನ ಕುಮಾರೇಶ್ವರ ಮಂಗಲ ಭವನದಲ್ಲಿ ನಡೆದ ಹಾವೇರಿ ಜಿಲ್ಲಾ ಮಟ್ಟದ ಗಿರಿಜನ ಸುರಕ್ಷಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಿರಿಜನರು ಎಲ್ಲ ರಂಗದಲ್ಲಿ ಹಿಂದುಳಿದಿದ್ದಾರೆ. ಮನುಷ್ಯರಂತೆ ಬದುಕುವ ಎಲ್ಲ ಸವಲತ್ತುಗಳಿಂದ ವಂಚಿತ ರಾಗಿ ಕನಿಷ್ಟ ಸ್ಥಿತಿಯಲ್ಲಿದ್ದಾರೆ ಎಂದರು.
ಆರ್ಥಿಕ, ಸಾಮಾಜಿಕ ದೌರ್ಬಲ್ಯವನ್ನು ಬಳಸಿಕೊಂಡು ನಡೆಯುತ್ತಿರುವ ಮತಾಂತರ ಕದಂಬ ಬಾಹುಗಳಿಂದ ಬುಡಕಟ್ಟು ಜನಾಂಗವನ್ನು ರಕ್ಷಿಸಬೇಕಾಗಿದೆ. ಗಿರಿಜನರ ಹಕ್ಕುಗಳು ಸುರಕ್ಷಿತಗೊಳ್ಳಬೇಕಾಗಿದೆ ಎಂದರು.
ಒಗ್ಗಟ್ಟು ಛಿದ್ರಗೊಳಿಸಲು ಬ್ರಿಟಿಷರು ಹೂಡಿದ್ದ ಜನಗಣತಿ ಸಂಚು ಇಂದಿಗೂ ನಿಂತಿಲ್ಲ. ಇತರೆ ಮತಾವಲಂಬಿ ಕಾಲಂ ಬಳಸಿಕೊಂಡು ಬುಡಕಟ್ಟು ಜನರನ್ನು ಸರಳವಾಗಿ ಮತಾಂತರಗೊಳಿಸುವ ಹುನ್ನಾರ ತಡೆಯಬೇಕು. ಮುಂದಿನ ದಿನಗಳಲ್ಲಿ ನಡೆಯುವ ಜನಗಣತಿ ವೇಳೆ ಗಿರಿಜನರು ತಮ್ಮ ಧರ್ಮ ನಮೂದಿಸುವ ಸಂದರ್ಭದಲ್ಲಿ ಇತರೆ ಮತಾವಲಂಬಿ ಕಾಲಂ ಆಯ್ಕೆ ಬೇಡ ಎಂಬ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಅಟಲ್ ಜಿ ಅವಧಿಯಲ್ಲಿ ಬುಡಕಟ್ಟು ಸಮುದಾಯದ ಸುಧಾರಣೆಗಾಗಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಬುಡಕಟ್ಟು ಜನರನ್ನು ಕಾಡಿನ ಒಂದು ಭಾಗವಾಗಿ ಪರಿಗಣಿಸಬೇಕು. ಅರಣ್ಯ ಅಭಿವೃದ್ಧಿಯಲ್ಲಿನ ಎಲ್ಲ ಸೌಲಭ್ಯಗಳು ಬುಡಕಟ್ಟು ಜನರಿಗೆ ದಕ್ಕಬೇಕು ಎಂದು ಸಿದ್ಧಿ ಆಗ್ರಹಿಸಿದರು. ಸಮ್ಮೇಳನ ಉದ್ಘಾಟಿಸಿದ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಬುಡಕಟ್ಟು ಜನಾಂಗ ಸರಕಾರದ ಅನುಕಂಪ ನಿರೀಕ್ಷಿಸುತ್ತಿಲ್ಲ. ಗಿರಿಜನರ ಹಕ್ಕುಗಳ ರಕ್ಷಣೆ ಸಾಧ್ಯವಾಗಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದರು.
ಆರ್ಥಿಕ, ಸಾಮಾಜಿಕವಾಗಿ ನಿರ್ಲಕ್ಷಿತ ಕಾಡು ವಾಸಿ ಜನಾಂಗ ಮತಾಂತರಕ್ಕೆ ಗುರಿಯಾಗುತ್ತಿದೆ. ಗಿರಿಜನ ಸುರಕ್ಷಾ ವೇದಿಕೆ ಮೂಲಕ ಬುಡಕಟ್ಟು ಜನಾಂಗವನ್ನು ಅಭಿವೃದ್ಧಿ ಪಥದತ್ತ ತರಬೇಕು. ಬುಡಕಟ್ಟು ಜನಾಂಗ ಮತಾಂತರಕ್ಕೆ ಒಳಗಾಗದಂತಹ ವಾತಾವರಣ ನಿರ್ಮಾಣಗೊಳ್ಳಬೇಕು ಎಂದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಜಾಗೃತಿ ಅಗತ್ಯವಾಗಿದೆ ಎಂದರು. ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕಾಡು ವಾಸಿಗಳಿಂದ ಅರಣ್ಯ ಅತಿಕ್ರಮಣವಾಗಲಿಲ್ಲ. ಬದಲಾಗಿ, ವನಸಿರಿ ನಾಡಿನಲ್ಲಿರುವ ಸ್ವಾರ್ಥಿಗಳ ಪಾಲಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು. ಗಿರಿಜನ
ಸುರಕ್ಷಾ ವೇದಿಕೆ ತಾಲೂಕು ಅಧ್ಯಕ್ಷ ಗಿರೀಶ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ನಾಗಪ್ಪ ಸವದತ್ತಿ, ಎಪಿಎಂಸಿ ಸದಸ್ಯ ರಾಮಣ್ಣ ಮಾದಪ್ಪನವರ ವೇದಿಕೆಯಲ್ಲಿದ್ದರು.