ಚೆನ್ನೈ: ನಡುರಸ್ತೆಯಲ್ಲೇ ಗುಂಪೊಂದು ಘೋಷಣೆ ಕೂಗುತ್ತಾ ಮೇಕೆಯೊಂದನ್ನು ಬಲಿ ನೀಡಿದ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಬಲಿಯಾದ ಮೇಕೆಯ ಕುತ್ತಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಫೋಟೋವನ್ನು ಕಟ್ಟಲಾಗಿದ್ದು ತಮಿಳುನಾಡು ಘಟಕ ಗುರುವಾರ ತೀವ್ರವಾಗಿ ಖಂಡಿಸಿದೆ.
ಘಟನೆ ಎಲ್ಲಿ ನಡೆದಿದೆ ಅಥವಾ ಅದನ್ನು ಪೋಸ್ಟ್ ಮಾಡಿದವರು ಯಾರು ಎಂಬುದು ತತ್ ಕ್ಷಣಕ್ಕೆ ತಿಳಿದಿಲ್ಲ. ವಿಡಿಯೋದ ಸತ್ಯಾಸತ್ಯತೆಯನ್ನು ತತ್ ಕ್ಷಣವೇ ಕಂಡುಹಿಡಿಯಲು ಸಾಧ್ಯವಾಗಿಲಿಲ್ಲ.
ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಮತ್ತು ವಕ್ತಾರ ನಾರಾಯಣನ್ ತಿರುಪತಿ ಅವರು ಎಕ್ಸ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿ ಖಂಡಿಸಿದ್ದಾರೆ. ರಾಜ್ಯ ಬಿಜೆಪಿಯೂ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಅದನ್ನು ಮರು ಪೋಸ್ಟ್ ಮಾಡಿದೆ.
“ನಡುರಸ್ತೆಯಲ್ಲಿ ಮೇಕೆಯನ್ನು ಕೊಂದು ಅಣ್ಣಾಮಲೈ ವಿರುದ್ಧ ಘೋಷಣೆ ಕೂಗುವುದು ಮತ್ತು ಅವರ ಸೋಲನ್ನು ಸಂಭ್ರಮಿಸುವುದು ತಮಿಳುನಾಡಿನಲ್ಲಿ ಬಿಜೆಪಿ ಬೆಳವಣಿಗೆಗೆ ರಾಜಕೀಯ ಪಕ್ಷಗಳು ಹೆದರುತ್ತಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ, ಇದು ಅತ್ಯಂತ ಕೆಳಮಟ್ಟದ ರಾಜಕೀಯ. ಚಿಕ್ಕ ಮಕ್ಕಳನ್ನೂ ಅಣ್ಣಾಮಲೈ ವಿರುದ್ಧ ಘೋಷಣೆಗಳನ್ನು ಕೂಗುವಂತೆ ಮಾಡಿರುವುದು ಕಾಣಬಹುದು. ಮಕ್ಕಳಲ್ಲಿ ದ್ವೇಷ ಮತ್ತು ಕೋಪವನ್ನು ಪ್ರಚೋದಿಸುವುದು ಅತ್ಯಂತ ಖಂಡನೀಯ. ಪ್ರತಿಪಕ್ಷಗಳ ಮೂರ್ಖ, ಹೊಲಸು ರಾಜಕೀಯವಿದು. ಅಪರಾಧಿಗಳ ವಿರುದ್ಧ ಕಠಿನ ಕ್ರಮ ಮತ್ತು ಬಂಧನವನ್ನು ನಾವು ನಿರೀಕ್ಷಿಸುತ್ತೇವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ನೇತೃತ್ವದ ಇಂಡಿಯಾ ಬಣ ರಾಜ್ಯದ ಎಲ್ಲಾ 39 ಸ್ಥಾನಗಳನ್ನು ಮತ್ತು ನೆರೆಯ ಪುದುಚೇರಿಯ ಏಕೈಕ ಸ್ಥಾನವನ್ನೂ ಗೆದ್ದಿದೆ. ತ ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಮುನ್ನಡೆಸಿದ್ದ ಅಣ್ಣಾಮಲೈ ಕೊಯಮತ್ತೂರಿನಲ್ಲಿ ಡಿಎಂಕೆಯ ಗಣಪತಿ ಪಿ ರಾಜ್‌ಕುಮಾರ್ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದರು.