ನವದೆಹಲಿ:ಪಶ್ಚಿಮಬಂಗಾಳದ ಆಡಳಿತಾರೂಢ ತೃಣಮೂಲ ಪಕ್ಷದ ಜತೆ ಮುನಿಸಿಕೊಂಡಿದ್ದ ಟಿಎಂಸಿ ಹಿರಿಯ ನಾಯಕ ಸುವೇಂದು ಅಧಿಕಾರಿ ತಮ್ಮ ಸಾರಿಗೆ ಖಾತೆ ಸಚಿವ ಸ್ಥಾನಕ್ಕೆ ಶುಕ್ರವಾರ(ನವೆಂಬರ್ 27, 2020) ರಾಜೀನಾಮೆ ನೀಡಿದ್ದಾರೆ. ಅಧಿಕಾರಿ ಅವರು ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗ್ ದೀಪ್ ಧಾನ್ ಖಾರ್ ಅವರಿಗೆ ಫ್ಯಾಕ್ಸ್ ಮೂಲಕ ಕಳುಹಿಸಿರುವುದಾಗಿ ವರದಿ ತಿಳಿಸಿದೆ.
ನಾನು ಸಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕೂಡಲೇ ನನ್ನ ರಾಜೀನಾಮೆಯನ್ನು ಸ್ವೀಕರಿಸಲು ನಿರ್ಧಾರ ತೆಗೆದುಕೊಳ್ಳಬೇಕು. ಈ ಸಂದರ್ಭದಲ್ಲಿ ನಾನು ನನ್ನ ರಾಜೀನಾಮೆ ಪತ್ರವನ್ನು ಪಶ್ಚಿಮಬಂಗಾಳದ ರಾಜ್ಯಪಾಲರಿಗೆ ಇ ಮೇಲ್ ಮೂಲಕ ರವಾನಿಸಿರುವುದಾಗಿ ಸುವೇಂದು ತಿಳಿಸಿದ್ದಾರೆ.
ರಾಜ್ಯದ ಜನತೆಗೆ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿರುವುದಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಾನು ಪ್ರಾಮಾಣಿಕವಾಗಿ, ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಿರುವುದಾಗಿ ಅಧಿಕಾರಿ ಮಮತಾ ಬ್ಯಾನರ್ಜಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:ಅಬ್ಬರಿಸಿದ ಆಸೀಸ್ ಆಟಗಾರರು ; ಭಾರತಕ್ಕೆ 375 ರ ಬೃಹತ್ ಸವಾಲು
ಇತ್ತೀಚೆಗಷ್ಟೇ ಪಶ್ಚಿಮಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಸುವೇಂದು ಅಧಿಕಾರಿ ಅವರು ಶೀಘ್ರದಲ್ಲಿಯೇ ಬಿಜೆಪಿ ಪಕ್ಷ ಸೇರಲಿದ್ದಾರೆ. ಅವರ ಜತೆ ಟಿಎಂಸಿಯ ಹಿರಿಯ ನಾಯಕರು ಕೂಡಾ ಟಿಎಂಸಿ ತೊರೆಯಲಿದ್ದಾರೆ ಎಂದು ತಿಳಿಸಿದ್ದರು.