ನವದೆಹಲಿ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶವನ್ನಾಗಿ ಬದಲಾಯಿಸಲು ಹೊರಟಿದೆ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಸುವೇಂದು ಅಧಿಕಾರಿ ಸೋಮವಾರ(ಫೆ.15, 2021) ಆರೋಪಿಸಿದ್ದಾರೆ.
ಬಾಂಗ್ಲಾದೇಶದ ರಾಜಕಾರಣಿ ಶಮೀಮ್ ಉಸ್ಮಾನ್ ಅವರ “ಖೇಲಾ ಹೋಬೆ” ಘೋಷಣೆಯನ್ನು ತೃಣಮೂಲ ಕಾಂಗ್ರೆಸ್ “ಜೈ ಬಾಂಗ್ಲಾ” ಹೆಸರಿನಲ್ಲಿ ಆಮದು ಮಾಡಿಕೊಂಡಿರುವುದಾಗಿ ಅಧಿಕಾರಿ ವಾಗ್ದಾಳಿ ನಡೆಸಿದರು.
ಬಾಂಗ್ಲಾದೇಶದ ನಾರಾಯಣ್ ಗಂಜ್ ಸಂಸದ ಶಮೀಮ್ ಉಸ್ಮಾನ್ ಅವರು ನಾಲ್ಕು ವರ್ಷಗಳ ಹಿಂದೆಯೇ ಖೇಲಾ ಹೋಬೆ ಘೋಷಣೆಯನ್ನು ಚಾಲ್ತಿಗೆ ತಂದಿದ್ದರು. ತೃಣಮೂಲ ಕಾಂಗ್ರೆಸ್ ಕೂಡಾ ಜೈ ಬಾಂಗ್ಲಾ ಘೋಷಣೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶವನ್ನಾಗಿ ಬದಲಾಯಿಸಲು ಹೊರಟಿದೆ. ನಮ್ಮ ಘೋಷಣೆ “ಭಾರತ್ ಮಾತಾ ಕೀ ಜೈ” ಮತ್ತು ಜೈ ಶ್ರೀ ರಾಮ್” ಎಂಬುದಾಗಿ ಅಧಿಕಾರಿ ತಿಳಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ:
ಪಶ್ಚಿಮಬಂಗಾಳದ ಮತದಾರರು ಡಬಲ್ ಎಂಜಿನ್ ಪಕ್ಷವಾದ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಪಕ್ಷ ಭರ್ಜರಿ ಬಹುಮತದೊಂದಿಗೆ ಪಶ್ಚಿಮಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಸುವೇಂದು ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದೆ? ಪಶ್ಚಿಮಬಂಗಾಳದ ಜನ ಬಿಜೆಪಿಗೆ ಮತ ನೀಡಲು ನಿರ್ಧರಿಸಿದ್ದಾರೆ. ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಲಿದೆ ಎಂದು ಅಧಿಕಾರಿ ಹೇಳಿದರು.