ಪಶ್ಚಿಮ ಬಂಗಾಳ : ಕೇಂದ್ರ ಸಚಿವ ವಿ. ಮುರಳೀಧರನ್ ಅವರ ಕಾರಿನ ಮೇಲೆ ಟಿಎಂಸಿ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಗುರುವಾರ ವೆಸ್ಟ್ ಮಿಡ್ನೊಪೋರ್ ನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರದ ದಿನಗಳಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ತನಿಖೆ ನಡೆಸಲು ಕೇಂದ್ರ ಗೃಹ ಇಲಾಖೆ ರಚಿಸಿರುವ ನಾಲ್ಕು ಸದಸ್ಯರುಳ್ಳ ಸತ್ಯಶೋಧನಾ ಸಮಿತಿಯು, ಪಶ್ಚಿಮ ಬಂಗಾಳದ ವೆಸ್ಟ್ ಮಿಡ್ನೊಪೋರ್ಗೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಘಟನೆ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮುರಳೀಧರನ್, ತಮ್ಮ ಕಾರಿನ ಮೇಲೆ ಕಲ್ಲುಗಳನ್ನು ಎಸೆದು, ಕೋಲು ಹಿಡಿದು ಹಲ್ಲೆ ನಡೆಸಲು ಮುಂದಾಗಿರುವ ಜನರ ದೃಶ್ಯಗಳಿರುವ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ ಟಿಎಂಸಿ ಗೂಂಡಾಗಳು ನಮ್ಮ ನಿಯೋಗದ ಸದಸ್ಯರಿದ್ದ ಕಾರಿನ ಮೇಲೆ ದಾಳಿ ಮಾಡಿ, ಕಾರಿನ ಕಿಟಕಿಯ ಗಾಜು ಒಡೆದು, ಬೆಂಗಾವಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಸಚಿವ ಮುರಳೀಧರನ್, ಈ ಕಾರಣದಿಂದ ತಮ್ಮ ಬಂಗಾಳ ಪ್ರವಾಸವನ್ನು ಮೊಟಕುಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಕಾಶ್ ಜಾವಡೇಕರ್ ಖಂಡನೆ :
ಕೇಂದ್ರ ಸಚಿವರ ಮೇಲಿನ ದಾಳಿ ಘಟನೆ ಖಂಡಿಸಿರುವ ಕೇಂದ್ರ ಸಚಿವರಾದ ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ , ‘ಒಬ್ಬ ಸಚಿವರಗಳನ್ನೊಳಗೊಂಡ ನಿಯೋಗದ ಮೇಲೆ ದಾಳಿ ನಡೆಸುತ್ತಾರೆ ಎಂದರೆ, ಬಂಗಾಳದಲ್ಲಿ ಯಾರು ಸುರಕ್ಷಿತವಾಗಿದ್ದಾರೆ ? ಇದು ಸರ್ಕಾರ ಪ್ರಾಯೋಜಿಸುತ್ತಿರುವ ಹಿಂಸಾಚಾರವಾಗಿದೆ. ನಾವು ಬಂಗಾಳದಲ್ಲಿ ನಡೆಯುತ್ತಿರುವ ಹಿಂಸೆಯನ್ನು ಖಂಡಿಸುತ್ತೇವೆ. ತಪ್ಪಿತಸ್ಥರನ್ನು ದಂಡಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದಿದ್ದಾರೆ.