ಯಾವುದೇ ಚಿತ್ರವಿರಲಿ ಅದಕ್ಕೊಂದು ಕಥೆ ಇರುತ್ತದೆ. ಆ ಕಥೆ ಮತ್ತು ಚಿತ್ರಕ್ಕೆ ಹೊಂದುವಂಥ ಹೆಸರನ್ನು ಕೊನೆಗೆ ಚಿತ್ರದ ಶೀರ್ಷಿಕೆ ಆಗಿ ಇಡಲಾಗುತ್ತದೆ. ಆದರೆ ಕನ್ನಡದಲ್ಲಿ ಕೆಲವೊಂದು ಚಿತ್ರಗಳ ಶೀರ್ಷಿಕೆಯಲ್ಲೇ “ಕಥೆ’ ಸೇರಿಕೊಂಡಿರುತ್ತದೆ. ಹೌದು, ಕನ್ನಡದಲ್ಲಿ ಚಿತ್ರದ ಟೈಟಲ್‌ನಲ್ಲಿ “ಕಥೆ’ ಎಂದು ಸೇರಿಕೊಂಡ ಚಿತ್ರಗಳ ದೊಡ್ಡ ಸಂಖ್ಯೆಯೇ ಸಿಗುತ್ತದೆ. ಇನ್ನು ತಮ್ಮ ಚಿತ್ರದ ಟೈಟಲ್‌ನಲ್ಲಿ “ಕಥೆ’ ಎಂದು ಹೆಸರು ಸೇರಿಸಿಕೊಂಡು ಬರುತ್ತಿರುವುದಕ್ಕೂ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಇತಿಹಾಸವೇ ಇದೆ.
ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳನ್ನು ತೆರೆಯುತ್ತ ಹೋದರೆ, ಇಂಥ ಶೀರ್ಷಿಕೆಗಳ ಸಾಲಿನಲ್ಲಿ “ಒಂದು ಹೆಣ್ಣಿನ ಕಥೆ’ ಚಿತ್ರ ಮೊದಲಿಗೆ ಸಿಗುತ್ತದೆ. 1972ರಲ್ಲಿ ಬಿ.ಆರ್ ಪಂತುಲು ನಿರ್ದೇಶನದಲ್ಲಿ “ಒಂದು ಹೆಣ್ಣಿನ ಕಥೆ’ ಚಿತ್ರದಲ್ಲಿ ಎಂ.ವಿ ರಾಜಾ ರಾಮಣ್ಣ, ಜಯಂತಿ, ಬಿ.ವಿ ರಾಧಾ, ರಾಜೇಶ್, ಸುದರ್ಶನ್, ನರಸಿಂಹರಾಜು, ಪದ್ಮಾ, ಇಂದ್ರಾಣಿ ಮೊದಲಾದ ಕಲಾವಿದರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಆನಂತರ ವಿಷ್ಣುವರ್ಧನ್, ದ್ವಾರಕೀಶ್ ಕಾಂಬಿನೇಶನ್‌ನ “ಮನೆ ಮನೆ ಕಥೆ’, ಶಂಕರ್ ನಾಗ್ ನಿರ್ದೇಶನದ “ಒಂದು ಮುತ್ತಿನ ಕಥೆ’, ಗಿರೀಶ್ ಕಾಸರವಳ್ಳಿ ನಿರ್ದೇಶನದ “ತಬರನ ಕಥೆ’ ಚಿತ್ರಗಳು 80ರ ದಶಕದಲ್ಲಿ ಇಂಥ ಶೀರ್ಷಿಕೆ ಚಿತ್ರಗಳ ಪೈಕಿ ಸಾಕಷ್ಟು ಜನಪ್ರಿಯತೆ ಪಡೆದಿದ್ದವು.
80ರ ದಶಕದ ನಂತರವೂ ತಮ್ಮ ಚಿತ್ರದ ಶೀರ್ಷಿಕೆಯಲ್ಲಿ “ಕಥೆ’ ಎಂಬ ಪದವನ್ನು ಇಟ್ಟುಕೊಂಡು ತೆರೆಗೆ ಬಂದ ಚಿತ್ರಗಳ ಸಂಖ್ಯೆಯಲ್ಲಿ ಏನೂ ಕಡಿಮೆ ಇಲ್ಲ. “ಒಂದು ಸಿನಿಮಾ ಕಥೆ’, “ಒಂದು ಪ್ರೀತಿಯ ಕಥೆ’, “ಕಟ್ಟುಕಥೆ’, “ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ’, “ಒಂದು ಮೊಟ್ಟೆಯ ಕಥೆ’, “ಕಥೆಯೊಂದು ಶುರುವಾಗಿದೆ’, “ಅದೇ ಹಳೇ ಕಥೆ’, “ಒಂದ್ ಕಥೆ ಹೇಳಾÉ’, “ಕಥಾ ಸಂಗಮ’, “ಗಿಣಿ ಹೇಳಿದ ಕಥೆ’, “ಮಾತುಕಥೆ’, “ನಮ್ ಕಥೆ ನಿಮ್ ಜೊತೆ’, “ಒಂದು ರೊಮ್ಯಾಂಟಿಕ್ ಕ್ರೈಂ ಕಥೆ’, “ನನ್ನ ನಿನ್ನ ಪ್ರೇಮಕಥೆ’, “ಸ್ಟೋರಿ-ಕಥೆ’, “ನಮ್ ಹುಡುಗ್ರು ಕಥೆ’, “ಒಂದು ಶಿಕಾರಿಯ ಕಥೆ’ ಸದ್ಯ ಬಿಡುಗಡೆಗೆ ರೆಡಿಯಾಗಿರುವ “ಓಬಿರಾಯನ ಕಥೆ’, “ಒಂದು ಗಂಟೆಯ ಕಥೆ’ ಚಿತ್ರದವರೆಗೆ ಹೀಗೆ ಇಂಥ ಶೀರ್ಷಿಕೆ ಹೊತ್ತು ಹೊರಬಂದ ಚಿತ್ರಗಳ ಸಂಖ್ಯೆ ನೂರಾರು ಸಂಖ್ಯೆಯಲ್ಲಿ ಸಿಗುತ್ತವೆ. ಇಷ್ಟೇ ಅಲ್ಲದೆ ವಾಣಿಜ್ಯ ಮಂಡಳಿಯಲ್ಲಿ ತಮ್ಮ ಶೀರ್ಷಿಕೆ ನೊಂದಾಯಿಸಿರುವ ಆದರೆ ಇನ್ನೂ ತೆರೆಗೆ ಬರದ ಚಿತ್ರಗಳನ್ನು ತೆಗೆದುಕೊಂಡರೆ, ಈ ಸಂಖ್ಯೆ ಕೂಡ ಸಾಕಷ್ಟು ದೊಡ್ಡದಿದೆ. ಇಷ್ಟೇ ಅಲ್ಲದೆ “ಕಥೆ’ ಎಂಬ ಪದದ ಇಂಗ್ಲಿಷ್ ಶೀರ್ಷಿಕೆ ಇಟ್ಟುಕೊಂಡು ಬಂದ ಸಾಕಷ್ಟು ಚಿತ್ರಗಳ ಉದಾಹರಣೆಗಳು ಸಿಗುತ್ತವೆ. “ಪೊಲೀಸ್ ಸ್ಟೋರಿ’, “ಪೊಲೀಸ್ ಸ್ಟೋರಿ-2′, “ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, “ಕೃಷ್ಣನ್ ಲವ್ ಸ್ಟೋರಿ’, “ಸಿಂಪಲ್ಲಾಗ್ ಇನ್ನೊಂದು ಲವ್‌ಸ್ಟೋರಿ’, “ಒನ್ ಲವ್ ಟೂ ಸ್ಟೋರಿ’, “ಕಿರಿಕ್ ಲವ್‌ಸ್ಟೋರಿ’ ಹೀಗೆ ಹುಡುಕುತ್ತ ಹೋದರೆ ಇವುಗಳ ಪಟ್ಟಿ ಕೂಡ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿಯೇ ಸಿಗುತ್ತದೆ.
ಈ ತರಹ ಶೀರ್ಷಿಕೆ ಇಡುವುದರಿಂದ ಸಿನಿಮಾಕ್ಕೇನಾದರೂ ಲಾಭವಿದೆಯೇ ಎಂದರೆ ಖಂಡಿತಾ ಇಲ್ಲ. ಸಿನಿಮಾದ ಕಥೆ ಚೆನ್ನಾಗಿದ್ದರಷ್ಟೇ ಟೈಟಲ್‌ನಲ್ಲಿರುವ ಕಥೆ ವಕೌìಟ್ ಆಗುತ್ತದೆಯಷ್ಟೇ.