Advertisement

ಟೈಟಲ್‌ ಥರ್ಡ್‌ ಕ್ಲಾಸ್‌, ಸಬ್ಜೆಕ್ಟ್ ಫ‌ಸ್ಟ್‌ ಕ್ಲಾಸ್‌

10:08 AM Feb 08, 2020 | Lakshmi GovindaRaj |

“ಥರ್ಡ್‌ ಕ್ಲಾಸ್‌’ ಅನ್ನೋ ಪದವನ್ನ ಬೈಗುಳಕ್ಕೆ ಬಳಸುವುದನ್ನು ನೀವೆಲ್ಲ ಕೇಳಿರುತ್ತೀರಿ. ಈಗ ಇದೇ ಪದವನ್ನು ಇಲ್ಲೊಂದು ಚಿತ್ರತಂಡ ತಮ್ಮ ಸಿನಿಮಾಕ್ಕೆ ಟೈಟಲ್‌ ಆಗಿ ಇಟ್ಟುಕೊಂಡು ಈ ವಾರ ಆ ಸಿನಿಮಾವನ್ನು ತೆರೆಗೆ ತರುತ್ತಿದೆ. ನಮ್‌ ಜಗದೀಶ್‌, ರೂಪಿಕಾ, ಅವಿನಾಶ್‌, ರಮೇಶ ಭಟ್, ಸಂಗೀತಾ, ಮಜಾ ಟಾಕೀಸ್‌ ಪವನ್‌, ಹರೀಶ್‌, ದಿವ್ಯಾ ರಾವ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಶೋಕ ದೇವ್‌ ಈ “ಥರ್ಡ್‌ ಕ್ಲಾಸ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement

ಹಾಗಾದ್ರೆ “ಥರ್ಡ್‌ ಕ್ಲಾಸ್‌’ ಅಂದ್ರೇನು? ತಮ್ಮ ಚಿತ್ರಕ್ಕೆ ಇಂಥದ್ದೊಂದು ಹೆಸರಿಡಲು ಕಾರಣವೇನು? ಚಿತ್ರದಲ್ಲಿ ಏನೇನು ವಿಷಯಗಳಿವೆ, ವಿಶೇಷತೆಗಳಿವೆ ಎನ್ನುವುದರ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ ಎಲ್ಲವನ್ನೂ ಸವಿಸ್ತಾರವಾಗಿ ತೆರೆದಿಟ್ಟಿತು. ಚಿತ್ರದ ಬಗ್ಗೆ ಮೊದಲು ಮಾತಿಗಿಳಿದ ನಾಯಕ ನಟ ಕಂ ನಿರ್ಮಾಪಕ ನಮ್‌ ಜಗದೀಶ್‌, “ಆರಂಭದಲ್ಲಿ ಈ ಕಥೆಯನ್ನು ನಮ್ಮ ಬ್ಯಾನರ್‌ನಲ್ಲಿ ಬೇರೆ ಹೀರೋ ಮೂಲಕ ಸಿನಿಮಾ ಮಾಡಲು ಪ್ಲಾನ್‌ ಮಾಡಿಕೊಂಡಿದ್ದೆವು.

ಆರಂಭದಲ್ಲಿ ಕಥೆಯನ್ನು ಕೇಳಿದ ಆ ಹೀರೋ ಕೂಡ ಈ ಸಿನಿಮಾ ಮಾಡಲು ಒಪ್ಪಿಕೊಂಡಿದ್ದರು. ಕೊನೆಗೆ ಸಿನಿಮಾದ ಟೈಟಲ್‌ “ಥರ್ಡ್‌ ಕ್ಲಾಸ್‌’ ಅಂತ ಹೇಳಿದಾಗ, ಈ ಟೈಟಲ್‌ ಬದಲಾಯಿಸಿದರೆ ಮಾತ್ರ ತಾನು ಈ ಸಿನಿಮಾ ಮಾಡುವುದಾಗಿ ಹೇಳಿದರು. ಆದರೆ ಈ ಟೈಟಲ್‌ ಸಬ್ಜೆಕ್ಟ್ಗೆ ಹೊಂದಾಣಿಕೆಯಾಗುತ್ತಿದ್ದರಿಂದ, ನಮ್ಮ ತಂಡಕ್ಕೆ ಈ ಟೈಟಲ್‌ ಬದಲಾಯಿಸಲು ಇಷ್ಟವಿರಲಿಲ್ಲ. ಅಂತಿಮವಾಗಿ ನಮ್ಮ ನಿರ್ದೇಶಕರು ನೀವೆ ಈ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿ ಎಂದು ಒತ್ತಾಯಿಸಿದ್ದರಿಂದ, ನಾನು ಈ ಕ್ಯಾರೆಕ್ಟರ್‌ ಮಾಡಬೇಕಾಯ್ತು’ ಎಂದು ಚಿತ್ರದಲ್ಲಿ ತಾನು ಹೀರೋ ಆದ ಹಿನ್ನೆಲೆ ತೆರೆದಿಟ್ಟರು.

“ಥರ್ಡ್‌ ಕ್ಲಾಸ್‌’ ಚಿತ್ರದಲ್ಲಿ ನಾಯಕಿ ರೂಪಿಕಾ ಅವರದ್ದು ಹೋಂ ಮಿನಿಸ್ಟರ್‌ ಮಗಳ ಪಾತ್ರವಂತೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರೂಪಿಕಾ, “ಸಿನಿಮಾದ ಟೈಟಲ್‌ “ಥರ್ಡ್‌ ಕ್ಲಾಸ್‌’ ಅಂತಿದ್ರೂ, ಇದು ಫ‌ಸ್ಟ್‌ ಕ್ಲಾಸ್‌ ಕಥೆ ಇರುವ ಸಿನಿಮಾ. ಮನೆಯಲ್ಲಿ ತುಂಬ ಮುದ್ದಿನಿಂದ ಬೆಳೆದ, ಅಷ್ಟೇ ಪ್ರಬುದ್ಧತೆಯಿರುವ ಹುಡುಗಿಯ ಪಾತ್ರ ನನ್ನದು. ಈ ಪಾತ್ರದಲ್ಲಿ ನನ್ನ ನಟನೆ, ಡ್ಯಾನ್ಸ್‌ ಎಲ್ಲದಕ್ಕೂ ಸಾಕಷ್ಟು ಸ್ಕೋಪ್‌ ಇದೆ. ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಆಡಿಯನ್ಸ್‌ಗೂ ಸಿನಿಮಾ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅಶೋಕ ದೇವ್‌, “ಇದೊಂದು ಕೌಟುಂಬಿಕ ಕಥಾಹಂದರವಿರುವ ಚಿತ್ರ. ತಂದೆ-ಮಗಳ ನಡುವಿನ ಸಂಬಂಧವನ್ನು ವರ್ಣಿಸುವ ಚಿತ್ರ. ಇದರಲ್ಲಿ ಮುಗ್ಧ ಮನಸ್ಸಿನ ಪ್ರೇಮಕಥೆಯಿದೆ. ಸ್ನೇಹ-ಹಾಸ್ಯದ ಸುಂದರ ಚಿತ್ರಣವಿದೆ. ಮನರಂಜನೆಗೆ ಏನೇನು ಇರಬೇಕೋ ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ’ ಎಂದು ಚಿತ್ರದ ಕಥಾಹಂದರವನ್ನು ತೆರೆದಿಟ್ಟರು.

Advertisement

“ಸೆವೆನ್‌ ಹಿಲ್ಸ ಸ್ಟುಡಿಯೋ’ ಬ್ಯಾನರನಲ್ಲಿ ನಿರ್ಮಾಣವಾಗಿರುವ “ಥರ್ಡ್‌ ಕ್ಲಾಸ್‌’ ಚಿತ್ರಕ್ಕೆ ಬಿ.ಕೆ ಶ್ಯಾಂ ರಾಜ್‌ ಛಾಯಾಗ್ರಹಣ, ಶ್ರೀಕಾಂತ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಟೈಟಲ್‌ಗೆ “ಹಣೆ ಬರಹಕ್ಕೆ ಹೊಣೆಯಾರು’ ಎಂಬ ಅಡಿ ಬರಹವಿದ್ದು, ಅದು ಚಿತ್ರದ ಟೈಟಲ್‌ಗೆ ಹೇಗೆ ಸಂಬಂಧಿಸಿದೆ ಅನ್ನೋದು ತೆರೆಮೇಲೆ ನೋಡಿದಾಗಲೇ ಗೊತ್ತಾಗಲಿದೆಯಂತೆ.

ಇನ್ನೊಂದು ವಿಶೇಷವೆಂದರೆ, ಚಿತ್ರದ ಪ್ರಚಾರ ಕಾರ್ಯವನ್ನು ವಿಭಿನ್ನವಾಗಿ ಮಾಡಲು ಪ್ಲಾನ್‌ ಮಾಡಿಕೊಂಡಿದ್ದ ಚಿತ್ರತಂಡ, ಕಳೆದ ಬಾರಿ ಅತಿವೃಷ್ಟಿಯಿಂದ ಹಾನಿಗೀಡಾಗ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮೂಲಸೌಕರ್ಯವನ್ನು ಅಭಿವೃದ್ದಿಪಡಿಸುವ ಮೂಲಕ ಚಿತ್ರದ ಪ್ರಚಾರವನ್ನು ನಡೆಸಿದೆ. ಅಂದಹಾಗೆ, “ಥರ್ಡ್‌ ಕ್ಲಾಸ್‌’ ಚಿತ್ರ ಇಂದು ರಾಜ್ಯದಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next