Advertisement

ಮಾತಿನ ಮಂಟಪದಲ್ಲಿ ತಿಥಿ ಮತ್ತು ಪ್ರಸ್ಥ

10:25 AM Aug 06, 2017 | Team Udayavani |

ಕೆಲವು ಕಥೆಗಳು ತುಂಬಾ ಕಾಡುತ್ತವೆ, ಆ ಕಾರಣಕ್ಕಾಗಿ ಸಿನಿಮಾಗಳಾಗುತ್ತವೆ. ಇನ್ನು ಎಲ್ಲೋ ನಡೆದ ಘಟನೆ ಸಿನಿಮಾಕ್ಕೆ ಪ್ರೇರಣೆಯಾಗುತ್ತದೆ. ಈ ತರಹದ ಕಾರಣಗಳಿಗಾಗಿಯೂ ಅನೇಕ ಸಿನಿಮಾಗಳು ಬಂದಿವೆ. ಆದರೆ, “ತಾತನ ತಿಥಿ ಮೊಮ್ಮಗನ ಪ್ರಸ್ಥ’ ಸಿನಿಮಾವಾಗಲು ತುಂಬಾ ಕಾಡಿರುವ ಅಂಶವೆಂದರೆ ಬಹುಶಃ ಪ್ರಸ್ಥ ಇರಬೇಕು. ಮೊಮ್ಮಗನ ಪ್ರಸ್ಥವನ್ನು ಊರಿಗೆಲ್ಲಾ ತೋರಿಸಬೇಕು ಎಂಬ ತಾತನ ಆಸೆಯ ಒನ್‌ಲೈನ್‌ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಹಾಗಾಗಿ, ಪ್ರಸ್ಥ ಒಂದು ಸಿನಿಮಾಕ್ಕೆ ವಿಷಯವಾಗಬಲ್ಲದು ಎಂಬುದನ್ನು ತಮ್ಮ ಮೊದಲ ನಿರ್ದೇಶನದಲ್ಲಿ ತೋರಿಸಿಕೊಟ್ಟಿದ್ದಾರೆ ನಿರ್ದೇಶಕ ಕೃಷ್ಣ ಚಂದ್ರ.

Advertisement

ಮೊಮ್ಮಗನಿಗೆ ಮದುವೆ ಮಾಡಿಸುವುದನ್ನು ಎಷ್ಟೆಲ್ಲಾ ಡಬಲ್‌ ಮೀನಿಂಗ್‌ನೊಂದಿಗೆ ಕಟ್ಟಿಕೊಡಬಹುದೋ ಅವೆಲ್ಲವನ್ನು ಇಲ್ಲಿ ಮಾಡಿದ್ದಾರೆ. ಹಾಗಾಗಿ, ಇದನ್ನು ಕಾಮಿಡಿ ಸಿನಿಮಾ ಎಂದು ಏಕಾಏಕಿ ಕರೆಯೋದು ಕೂಡಾ ಕಷ್ಟ. ಏಕೆಂದರೆ, ಸಿನಿಮಾದಲ್ಲಿ ಕಾಮಿಡಿಗಿಂತ ಡಬಲ್‌ ಮೀನಿಂಗ್‌ ಸಂಭಾಷಣೆಗಳೇ ಹೆಚ್ಚು. ನೀವು ಬೇಕಾದರೆ ಅದನ್ನು ಸಿಂಗಲ್‌ ಮೀನಿಂಗ್‌ನಿಂದ ನೋಡಬಹುದು. ಈ ಚಿತ್ರದಲ್ಲಿ ನಾಯಕ-ನಾಯಕಿ ಬಿಟ್ಟರೆ ಮುಖ್ಯ ಪಾತ್ರಧಾರಿಗಳು ಸೆಂಚುರಿ ಗೌಡ, ಗಡ್ಡಪ್ಪ ಹಾಗೂ ತಮ್ಮಣ್ಣ. “ತಿಥಿ’ ನಂತರ ಏಕಾಏಕಿ ಜನಪ್ರಿಯತೆ ಪಡೆದ ಅವರು ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಹುತೇಕ ಅವರ ಪಾತ್ರಗಳು ರಿಪೀಟ್‌ ಆಗುತ್ತಲೇ ಬಂದಿವೆ. ಅವರ ಬಾಯಿಂದ ಒಂದಷ್ಟು ಲೋಕಲ್‌ ಡೈಲಾಗ್ಸ್‌, ಪೋಲಿ ಮಾತುಗಳನ್ನು ಹೇಳಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಪ್ರಯತ್ನ ಇಲ್ಲೂ ಮುಂದುವರೆದಿದೆ. ಹಾಗಾಗಿಯೇ ನಾಯಕನಿಗಿಂತ ಹೆಚ್ಚಾಗಿ ಆ ಮೂವರೇ ತೆರೆಯನ್ನು ಆಕ್ರಮಿಸಿಕೊಂಡಿದ್ದಾರೆ. ಹಾಗಾಗಿ, ಅವರ ಪೋಲಿ ಸಂಭಾಷಣೆಗಳಲ್ಲೇ ಬಹುತೇಕ ಸಿನಿಮಾ ಮುಗಿದು ಹೋಗುತ್ತದೆ. ಮೊಮ್ಮಗನ ಪ್ರಸ್ಥ ನೋಡಿಯೇ ತನ್ನ ಆತ್ಮಕ್ಕೆ ತೃಪ್ತಿ, ಊರ ಜನರನ್ನೆಲ್ಲಾ ಪ್ರಸ್ಥಕ್ಕೆ ಕರೆಯಬೇಕು ಎಂಬ ಸತ್ತು ಹೋದ ನಂತರವೂ ಆಗಾಗ ಬಂದು ಕಾಡುತ್ತಿರುವ ಸೆಂಚುರಿ ಗೌಡ ಅವರ ಆಸೆಯಂತೆ ಅವರ ಮೊಮ್ಮಗನಿಗೆ ಹುಡುಗಿ ಹುಡುಕುವ ಕಾರ್ಯ ಆರಂಭವಾಗುತ್ತದೆ.

ಸಖತ್‌ ಬೋಲ್ಡ್‌ ಹುಡುಗಿಯೇ ಸಿಗುತ್ತಾಳೆ, ಸಿಗುತ್ತಾಳೆ ಅನ್ನೋದಕ್ಕಿಂತ ಮೊಮ್ಮಗನೇ ಹುಡುಕಿಕೊಳ್ಳುತ್ತಾನೆ. ಆ ನಂತರ ನಡೆಯೋದು ಮದುವೆ ಡ್ರಾಮಾ. ಇಷ್ಟರಲ್ಲಿ ಇಡೀ ಸಿನಿಮಾ ಮುಗಿಸಿದ್ದಾರೆ. ಆರಂಭದಿಂದ ಕೊನೆವರೆಗೆ ಇಲ್ಲಿ ನಿಮಗೆ ಒಂದೇ ದಿನ ಗಂಭೀರ ದೃಶ್ಯಗಳು ಕಾಣಸಿಗೋದಿಲ್ಲ. ಇಡೀ ಸಿನಿಮಾವನ್ನು ಡಬಲ್‌ ಮೀನಿಂಗ್‌ ಹಿನ್ನೆಲೆಯಲ್ಲಿ ಕಾಮಿಡಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರಷ್ಟೇ. ಹಾಗಾಗಿ, ಇಲ್ಲಿ ಹೊಸದೇನನ್ನು ನೀವು ನಿರೀಕ್ಷಿಸುವಂತಿಲ್ಲ. ಯಾವುದೇ ಲಾಜಿಕ್‌ ಇಲ್ಲದೇ, ಕಥೆಯ ಹಂಗಿಗೆ ಹೋಗದೇ ಇದ್ದರೆ ಒಂದು ಸಿನಿಮಾವನ್ನು ಎಷ್ಟು “ಸುಲಭ’ವಾಗಿ ಮಾಡಬಹುದೆಂಬುದಕ್ಕೆ “ತಾತನ ತಿಥಿ ಮೊಮ್ಮಗನ ಪ್ರಸ್ಥ’ ಒಂದು ಒಳ್ಳೆಯ ಉದಾಹರಣೆ ಎಂದರೆ ತಪ್ಪಿಲ್ಲ.

ಇಲ್ಲಿ ನಿರ್ದೇಶಕರು ಕೂಡಾ ಹೆಚ್ಚು ರಿಸ್ಕ್ ತಗೊಂಡಿಲ್ಲ. ಏಕೆಂದರೆ, ಸಿನಿಮಾ ನಿಂತಿರೋದು ಕಥೆ, ನಿರೂಪಣೆಗಿಂತ ಹೆಚ್ಚಾಗಿ ಡೈಲಾಗ್‌ ಮೇಲೆ ಎನ್ನಬಹುದು. ಆ ಜವಾಬ್ದಾರಿಯನ್ನು ಮಳವಳ್ಳಿ ಸಾಯಿಕೃಷ್ಣ ವಹಿಸಿಕೊಂಡಿದ್ದಾರೆ. ನಿರ್ದೇಶಕರ “ಕಲ್ಪನೆ’ಗೆ ತಕ್ಕಂತೆ ಅವರ ಸಂಭಾಷಣೆಗಳಿವೆ. ಚಿತ್ರದಲ್ಲಿ ನಟಿಸಿದ ಹಿರಿಯ ನಟರು ಕೂಡಾ “ಲೀಲಾಜಾಲ’ವಾಗಿ ಡಬಲ್‌ ಮೀನಿಂಗ್‌ ಡೈಲಾಗ್‌ಗಳನ್ನು ಹೇಳಿದ್ದಾರೆ. ಚಿತ್ರದಲ್ಲಿ ಬರುವ ಕೆಲವು ದೃಶ್ಯಗಳಿಗೆ ಅರ್ಥವಿಲ್ಲ. ಅವೆಲ್ಲದಕ್ಕೆ ಕತ್ತರಿ ಹಾಕುವ ಅವಕಾಶ ನಿರ್ದೇಶಕರಿಗಿತ್ತು.

Advertisement

ಚಿತ್ರದಲ್ಲಿ ಲೋಕಿ ನಾಯಕ. ಇಲ್ಲೇನು ಅವರು ನಟನೆಗೆ ಹೆಚ್ಚಿನ ಸ್ಕೋಪ್‌ ಇಲ್ಲ. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ನಾಯಕಿ ಶುಭಾ ಪೂಂಜಾ ಮತ್ತೂಮ್ಮೆ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಈ ಮೂಲಕ ಪಡ್ಡೆಗಳಿಗೆ ಇಷ್ಟವಾಗುತ್ತಾರೆ. ಉಳಿದಂತೆ ಓಂ ಪ್ರಕಾಶ್‌ ರಾವ್‌, ಮಳವಳ್ಳಿ ಸಾಯಿಕೃಷ್ಣ, ಶ್ರೀನಿವಾಸ್‌ ಮೂರ್ತಿ, ಪದ್ಮಾವಾಸಂತಿ, ಸೆಂಚುರಿ ಗೌಡ, ಗಡ್ಡಪ್ಪ, ತಮ್ಮಣ್ಣ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್‌ ಸಂಭ್ರಮ್‌ ಸಂಗೀತ ನೀಡಿದ್ದಾರೆ. 

ಚಿತ್ರ: ತಾತನ ತಿಥಿ ಮೊಮ್ಮಗನ ಪ್ರಸ್ಥ
ನಿರ್ಮಾಣ: ಮಧುಕುಮಾರ್‌, ಮಂಜುನಾಥ್‌
ನಿರ್ದೇಶನ: ಕೃಷ್ಣ ಚಂದ್ರ
ತಾರಾಗಣ: ಲೋಕಿ, ಶುಭಾ ಪೂಂಜಾ, ಸೆಂಚುರಿ ಗೌಡ, ಗಡ್ಡಪ್ಪ, ತಮ್ಮಣ್ಣ, ಓಂ ಪ್ರಕಾಶ್‌ ರಾವ್‌, ಮಳವಳ್ಳಿ ಸಾಯಿಕೃಷ್ಣ, ಶ್ರೀನಿವಾಸ್‌ ಮೂರ್ತಿ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next