Advertisement
ಮಳೆಗಾಲದಲ್ಲಿ ಅಣೆಕಟ್ಟೆಯ ಹಿನ್ನೀರಿನಿಂದಾಗಿ ಶೆಟ್ಟಿಹಳ್ಳಿಯ ರೋಸರಿ ಚರ್ಚ್, ಮುಳುಗಡೆಗೊಂಡು ತನ್ನ ಸೌಂದರ್ಯವನ್ನೂ, ಸ್ವರೂಪವನ್ನೂ ಕಳಕೊಳ್ಳುತ್ತದೆ. ಆದರೆ, ಜನರಿಗೆ ಇದರೊಂದಿಗಿನ ಅಪಾರ ನೆನಪುಗಳು ಮಾತ್ರ ಎಂದಿಗೂ ಮುಳುಗುವುದಿಲ್ಲ. ಬೇಸಿಗೆ ಬಂದಾಗ ಪುನಃ ಎದ್ದು ನಿಂತು, ನಗು ಬೀರುವ ಅದರ ಪುನರುತ್ಥಾನದ ಕತೆಯೇ ಒಂದು ರೋಮಾಂಚನ…
ಹಾಸನದಿಂದ 20 ಕಿ.ಮೀ. ದೂರದಲ್ಲಿರುವ ಶೆಟ್ಟಿಹಳ್ಳಿ ಎಂಬ ಗ್ರಾಮದ ಈ ಚರ್ಚ್, ಹಿಂದೊಮ್ಮೆ ಕ್ರೈಸ್ತರ ಹೆಮ್ಮೆಯ ಆರಾಧನಾ ಕೇಂದ್ರ. ಹಾಸನದ ಪ್ರವಾಸಿ ತಾಣಗಳಾದ ಬೇಲೂರು, ಹಳೆಬೀಡು, ಶ್ರವಣ ಬೆಳಗೊಳ ಹಾಗೂ ಸಕಲೇಶಪುರದ ಪೈಕಿ ಇದೂ ಒಂದು ಪ್ರೇಕ್ಷಣೀಯ ಸ್ಥಳ. ಇಂದು ಕಾಲಗರ್ಭದೊಳಗೆ ಅದು ಹೂತು ಹೋಗಿದ್ದರೂ, ಸಹಸ್ರಾರು ಮಂದಿಗೆ ಆ ದಿನಗಳ ಪ್ರಾರ್ಥನೆಯ ನೆನಪುಗಳು ಈಗಲೂ ಕಣ್ಣಿಗೆ ಕಟ್ಟಿವೆ. ಚರ್ಚ್‌ನ ಜಾಗತಿಕ ಕಳೆ
ಜಲಾಶಯದ ನೀರು ಬಂತು ಎಂದರೆ, ಚರ್ಚ್ ಮುಳುಗಿ ಟೈಟಾನಿಕ್ ಹಡಗಿನಂತೆ ತೋರುತ್ತದೆ. ಸಿನಿಮಾ ಮಂದಿಗೆ ಈ ಕಟ್ಟಡ ಅಮರ ಪ್ರೇಮದ ಸ್ಮಾರಕವಾದರೆ, ಊರಿನವರಿಗೆ ಹಾಳು ಕೊಂಪೆ. ನಗರದ ಜಂಜಡದಿಂದ ಬೇಸತ್ತು ಬಂದ ಮಂದಿಗೆ ಇದು ನೆಮ್ಮದಿಯ ತಾಣ. ಚರ್ಚ್‌ನ ಗೋಡೆಗಳು ವಿಕೃತ ಮನದ ಪ್ರೇಮಿಗಳ ಕೈಗೆ ಸಿಲುಕಿ, ನೋಡಬಾರದ ಶಾಸನಗಳಂತಾಗಿವೆ.
ಹತ್ತೆಂಟು ದೇಶಗಳ ಸಮನ್ವಯದ ಸಂಕೇತದಂತಿದ್ದ ಈ ಚರ್ಚ್, ನೂರಾರು ದಾರ್ಶನಿಕರು ಮತ್ತು ಲಕ್ಷಾಂತರ ಜನರ ಭಕ್ತಿ ಕೇಂದ್ರವಾಗಿತ್ತು. ಅಂದಹಾಗೆ, ಇದು ನಿರ್ಮಾಣವಾಗಿದ್ದು, 1810ರಲ್ಲಿ. ಧರ್ಮಗುರು ಅಬ್ಬೆ ದುಬಾಯ್ಸ ಅವರ ಕಲ್ಪನೆಯ ಸಾಕಾರವಿದು. ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಯುರೋಪ್‌ನ ಹಲವು ದೇಶಗಳ ರಾಯಭಾರಿಗಳು ಇಲ್ಲಿಗೆ ಭೇಟಿ ನೀಡಿದ್ದರಂತೆ.
Related Articles
ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಯ ಭಾಗಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು 1960ರಲ್ಲಿ, ಹೇಮಾವತಿ ನದಿಗೆ ಗೊರೂರು ಬಳಿ ಅಣೆಕಟ್ಟು ನಿರ್ಮಾಣ ಪ್ರಾರಂಭವಾಯಿತು. ಆಗ ಶೆಟ್ಟಿಹಳ್ಳಿ ಸೇರಿದಂತೆ ಸುಮಾರು 28 ಗ್ರಾಮಗಳು ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾದವು. ಈ ಪೈಕಿ ಶತಮಾನದ ಕವಿತೆಯಂತಿದ್ದ ಚರ್ಚ್ ಕೂಡ ಹೇಮಾವತಿಯ ಅಣೆಕಟ್ಟೆಯೊಡಲು ಸೇರಿತು!
Advertisement
ಅದು ಮಾನವೀಯ ಕವಿತೆ1960ರಲ್ಲಿ ಈ ಕಟ್ಟಡದಲ್ಲಿ ಧರ್ಮಗುರು ದೇಶಾಂತ್ ಅವರು ಆಸ್ಪತ್ರೆ ಆರಂಭಿಸಿದ್ದರು. ನಂತರ ಮುಳುಗಡೆ ಆಗುವವರೆಗೂ ಅದು, ಇಲ್ಲಿನ ಸಹಸ್ರಾರು ಮಂದಿಯ ಆರೋಗ್ಯ ಕಾಪಾಡಿತ್ತು. ಸಿಡುಬು, ಪ್ಲೇಗ್, ಕಾಲರಾ ರೋಗಕ್ಕೆ ಚರ್ಚ್‌ನ ವೈದ್ಯರು ಲಸಿಕೆ ಹಾಕಿ, ಜನರ ಸಂಕಷ್ಟ ನಿವಾರಿಸಿದ್ದರು. 1823ರ ಭೀಕರ ಬರಗಾಲದಲ್ಲಿ, ಇದು ನಿರ್ಗತಿಕರಿಗೆ ಆಶ್ರಯ ತಾಣವಾಗಿಯೂ, ಮಾನವೀಯತೆ ಮೆರೆದಿತ್ತು.
ಚರ್ಚ್‌ನ ಸುಂದರ ಕಮಾನುಗಳು, ಗೋಪುರ, ಎತ್ತರದ ಬಾಗಿಲುಗಳು, ಮಿನಾರುಗಳು ನೋಡುಗರ ಕಣ್ಣಿಗೆ ಈಗಲೂ ಹಬ್ಬವನ್ನುಂಟು ಮಾಡುತ್ತವೆ. ಹಲವು ದಶಕಗಳಿಂದ ನೀರಿನಲ್ಲಿ ಮುಳುಗೇಳುತ್ತಿರುವ ಚರ್ಚ್‌ನ ಮೂಲ ಹಾಗೂ ಸದ್ಯದ ಸ್ವರೂಪಕ್ಕೂ ಅಜಗಜಾಂತರವಿದೆ. ಏಕೆಂದರೆ, ವರ್ಷದಿಂದ ವರ್ಷಕ್ಕೆ ಚರ್ಚ್‌ನ ಗೋಡೆ ಕಮಾನು ಹಾಗೂ ಗೋಪುರಗಳು ಕುಸಿಯುತ್ತಾ, ಹಿನ್ನೀರಿನ ಒಡಲಲ್ಲಿ ಮಣ್ಣಾಗುತ್ತಿವೆ. ಏಸುವಿನ ಶಿಲುಬೆ ಇಡುತ್ತಿದ್ದ ಜಾಗವೊಂದನ್ನು ಹೊರತುಪಡಿಸಿದರೆ, ಗೋಪುರದಂತಿರುವ ಕಟ್ಟಡದ ಹಿಂಭಾಗ ಕುಸಿತದಿಂದಾಗಿ, ಅದು ಚರ್ಚ್‌ನ ಪ್ರತ್ಯೇಕ ಭಾಗವೇನೋ ಎಂಬಂತೆ ನೋಡುಗರ ಕಣ್ಣಿಗೆ ಮೋಸ ಮಾಡುತ್ತದೆ. ಹಿನ್ನೀರು ನುಂಗಿದ ನಾಡಿನ ಇತರೆ ಸೌಂದರ್ಯಗಳು….
1. ಕೆ.ಆರ್.ಎಸ್. ಜಲಾಶಯದಿಂದ ಹೊಯ್ಸಳರ ನಿರ್ಮಾಣದ ವೇಣುಗೋಪಾಲ ಸ್ವಾಮಿ, ಕನ್ನೇಶ್ವರ ಮತ್ತು ಕಾಳಮ್ಮ ದೇಗುಲಗಳು.
2. ಕಬಿನಿ ಹಿನ್ನೀರಿನಲ್ಲಿ ಮಾಂಕಾಳಮ್ಮ ಮತ್ತು ಭವಾನಿಶಂಕರ ದೇಗುಲಗಳು.
3. ಸಾಗರದ ಹತ್ತಿರವಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಹಳೆಯ ಮುಡೆನೋರ ಅಣೆಕಟ್ಟು ನೀರಿನಲ್ಲಿ ಮುಳುಗಿ, ನೀರು ಕಡಿಮೆಯಾದಾಗ ಗೋಚರವಾಗುತ್ತದೆ. ಕಟ್ಟಡದ “ವಿಶ್ವ’ ಸೌಂದರ್ಯ
ಈ ಚರ್ಚ್‌ನ ಅಂದಚೆಂದದ ವಿನ್ಯಾಸದ ಹಿಂದೆ, ಜಗತ್ತಿನ ಪ್ರತಿಭಾವಂತ ವಾಸ್ತುಶಿಲ್ಪಿಗಳ ಕೈಚಳಕವಿದೆ. ಅದು ಧರ್ಮಗುರು ಬೊಯೆ ಅವರ ವಿನ್ಯಾಸದ ಪರಿಕಲ್ಪನೆ. ಒಂದು ಮಹಡಿ ಕಟ್ಟಡದಲ್ಲಿ ಎರಡು ಗಂಟೆಗಳ ಗೋಪುರವಿದೆ. ಜರ್ಮನ್ ವಿನ್ಯಾಸ, ಫ್ರೆಂಚ್ ಶೈಲಿ, ಹಿಂದೂ ಶೈಲಿಯ ಒಳಾಂಗಣದಿಂದ ಇದು ಕಳೆಗಟ್ಟಿತ್ತು. ಈಜಿಪ್ಟ್ನ ಜಿಪ್ಸಮ್, ಬೆಲ್ಜಿಯಂನ ಗಾಜು, ಸ್ಕಾಟ್ಲೆಂಡ್‌ನ ಚಿತ್ರಗಳು, ಇಟಲಿ ಬ್ರೆಜಿಲ್‌ನ ಅಲಂಕಾರಿಕ ವಸ್ತುಗಳು, ಮಲೇಷ್ಯಾದ ತಾಳೆ ಮರಗಳನ್ನು ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿತು. ಚಿತ್ರ - ಲೇಖನ: ಟಿ. ಶಿವಕುಮಾರ್