Advertisement

ಕೋವಿಡ್ ಲಾಕ್ ಡೌನ್ ನಿಂದಾಗಿ ತಿರುಪತಿ ತಿಮ್ಮಪ್ಪನಿಗೂ ಹಣಕಾಸು ಮುಗ್ಗಟ್ಟು

11:38 PM Aug 29, 2020 | Team Udayavani |

ಹೈದರಾಬಾದ್‌: ಕೋವಿಡ್ ಲಾಕ್‌ಡೌನ್‌ ಬಳಿಕ ತಿರುಮಲದ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರಿಂದ ಸಂಗ್ರಹವಾಗುತ್ತಿದ್ದ ಕಾಣಿಕೆಯ ಮೊತ್ತವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಕಾರಣ ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳಲ್ಲಿ ಇಟ್ಟಿರುವ 12,000 ಕೋಟಿ ರೂ.ಗಳ ಠೇವಣಿಯ ಮಾಸಿಕ ಬಡ್ಡಿ ದರವನ್ನು ವಿತ್‌ಡ್ರಾ ಮಾಡಲು ಟಿಟಿಡಿ ನಿರ್ಧರಿಸಿದೆ.

Advertisement

ಶುಕ್ರವಾರ ಬೆಳಗ್ಗೆ ನಡೆದ ಟಿಟಿಡಿ ಟ್ರಸ್ಟ್‌ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈವರೆಗೆ ಟ್ರಸ್ಟ್‌ ಮೂರು ತಿಂಗಳಿಗೊಮ್ಮೆ, 6 ತಿಂಗಳಿಗೊಮ್ಮೆ ಮತ್ತು ವರ್ಷಕ್ಕೊಮ್ಮೆ ನಗದನ್ನು ಬ್ಯಾಂಕುಗಳಲ್ಲಿ ಠೇವಣಿ ರೂಪದಲ್ಲಿ ಇಡುತ್ತಾ ಬಂದಿದೆ. ಠೇವಣಿಯ ಮೆಚ್ಯುರಿಟಿ ಅವಧಿ ಮುಗಿದ ಬಳಿಕವೇ ಬಡ್ಡಿಯನ್ನು ಪಡೆಯುತ್ತಿತ್ತು. ಆದರೆ, ಈಗ ಈ ಎಲ್ಲ ಠೇವಣಿಯ ಬಡ್ಡಿಯನ್ನು ಮಾಸಿಕವಾಗಿ ಪಡೆಯಲು ಟ್ರಸ್ಟ್‌ ನಿರ್ಧರಿಸಿದೆ. ಈ ಮೊತ್ತವನ್ನು ದೇವಸ್ಥಾನದ ಸಿಬಂದಿಗೆ ವೇತನ ಪಾವತಿಸಲು, ತಿರುಪತಿ ತಿಮ್ಮಪ್ಪನ ಪೂಜೆ-ಪುನಸ್ಕಾರದಂಥ ವಿಧಿವಿಧಾನಗಳನ್ನು ನೆರವೇರಿಸಲು ಹಾಗೂ ಇತರ ಖರ್ಚು ವೆಚ್ಚಗಳನ್ನು ಭರಿಸಲು ವ್ಯಯಿಸಲಾಗುತ್ತದೆ ಎಂದು ಟ್ರಸ್ಟ್‌ ಮಂಡಳಿ ಮುಖ್ಯಸ್ಥರಾದ ವೈ.ವಿ. ಸುಬ್ಟಾರೆಡ್ಡಿ ತಿಳಿಸಿದ್ದಾರೆ.

ಕಳೆದ ವರ್ಷದ ಅಂದಾಜಿನ ಪ್ರಕಾರ, ಟಿಟಿಡಿ ಬ್ಯಾಂಕ್‌ಗಳಲ್ಲಿ 12 ಸಾವಿರ ಕೋಟಿ ರೂ.ಗೂ ಅಧಿಕ ಠೇವಣಿಯನ್ನು ಹೊಂದಿದೆ. ಪ್ರಸಕ್ತ ವರ್ಷ ಈ ಠೇವಣಿ ಮೇಲೆ ಬಡ್ಡಿಯ ರೂಪದಲ್ಲಿ 706 ಕೋಟಿ ರೂ. ಆದಾಯ ಬರಲಿದೆ ಎಂದು ಟ್ರಸ್ಟ್‌ನ 2020-21ರ ವಾರ್ಷಿಕ ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದೆ. ಹುಂಡಿ ಆದಾಯ(ವಾರ್ಷಿಕ 1,313 ಕೋಟಿ ರೂ.)ವನ್ನು ಹೊರತುಪಡಿಸಿದರೆ ಟಿಟಿಡಿಗೆ ಅತಿಹೆಚ್ಚು ಆದಾಯ ಬರುತ್ತಿರುವುದೇ ಈ ಠೇವಣಿ ಮೇಲಿನ ಬಡ್ಡಿಯಿಂದ.

ದೀರ್ಘಾವಧಿ ಠೇವಣಿಗೆ ನಿರ್ಧಾರ
ತಿಮ್ಮಪ್ಪನ ಚಿನ್ನದ ಠೇವಣಿಯನ್ನು ಅಲ್ಪಾವಧಿ ಯಿಂದ ದೀರ್ಘಾವಧಿ ಠೇವಣಿಯಾಗಿ ಮಾರ್ಪಾಟು ಮಾಡುವ ಮೂಲಕ ಹೆಚ್ಚು ಬಡ್ಡಿ ಯನ್ನು ಪಡೆಯುವ ನಿರ್ಧಾರವನ್ನೂ ಟ್ರಸ್ಟ್‌ ಕೈ ಗೊಂಡಿದೆ. ಪ್ರಸ್ತುತ ಚಿನ್ನದ ಠೇವಣಿಯು ಶೇ.2.5ರ ಆದಾಯ ಗಳಿಸುತ್ತಿದೆ. 12 ವರ್ಷಕ್ಕಿಂತ ಹೆಚ್ಚಿನ ಅವ ಧಿಗೆ ಇದನ್ನು ವಿಸ್ತರಿಸಿದರೆ ಬಡ್ಡಿಯ ದರವೂ ಹೆಚ್ಚು ತ್ತದೆ ಎನ್ನುವುದು ಟ್ರಸ್ಟ್‌ ಸದಸ್ಯರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next