Advertisement

ಉಡುಪಿಗೆ ತಿರುಪತಿ, ಶ್ರೀರಂಗ, ಚಿದಂಬರ ರೀತಿ ಸ್ವರ್ಣಗೋಪುರ

11:12 AM Jun 06, 2019 | Lakshmi GovindaRaj |

ಉಡುಪಿ: ಶ್ರೀಕೃಷ್ಣಮಠದ ಗರ್ಭಗುಡಿಗೆ ಸುವರ್ಣ ಗೋಪುರ ಸಮರ್ಪಣಾ ಯೋಜನೆಯ ರೂವಾರಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅದು ಸಾಕಾರಗೊಳ್ಳುತ್ತಿರುವ ಸ್ಥಿತಿಯ ಕುರಿತು “ಉದಯವಾಣಿ’ ಮೂಲಕ ಬೆಳಕು ಚೆಲ್ಲಿದ್ದಾರೆ. ಅವರು ನೀಡಿದ ಸಂದರ್ಶನದ ಭಾಗ ಇಂತಿದೆ:

Advertisement

* ಸುವರ್ಣ ಗೋಪುರ ನಿರ್ಮಾಣದ ಕಲ್ಪನೆ ಹೇಗೆ ಮೂಡಿತು?
ನಾವು ತಿರುಪತಿ, ಶ್ರೀರಂಗ, ಚಿದಂಬರ ದೇವಸ್ಥಾನಗಳ ಸುವರ್ಣ ಗೋಪುರವನ್ನು ನೋಡಿದ್ದೆವು. ಶ್ರೀಕೃಷ್ಣಮಠದಲ್ಲಿಯೂ ಸುವರ್ಣ ಗೋಪುರ ಮಾಡಬಹುದೆಂದು ಸುಮಾರು 10 ವರ್ಷಗಳ ಹಿಂದೆಯೇ ಅನಿಸಿತು. ಕೃಷ್ಣನ ವಿಗ್ರಹ ದ್ವಾರಕೆಯಿಂದ ಬಂದಿರುವ ನಂಬಿಕೆ ಇದೆ. ದ್ವಾರಕೆಯನ್ನು ಬಿಟ್ಟು ಹೋಗುವಾಗ ಎಲ್ಲವನ್ನೂ ನೀರಿನಲ್ಲಿ ಮುಳುಗಿಸಿ ಹೋಗುತ್ತೇನೆಂದು ಶ್ರೀಕೃಷ್ಣ ಹೇಳಿರುವ ಉಲ್ಲೇಖ ಭಾಗವತ ಗ್ರಂಥದಲ್ಲಿದೆ. ದ್ವಾರಕೆಯಲ್ಲಿ ಈಗಿರುವುದು ತ್ರಿವಿಕ್ರಮ ದೇವರ ವಿಗ್ರಹ. ಅಲ್ಲಿದ್ದ ಶ್ರೀಕೃಷ್ಣನ ವಿಗ್ರಹ ಬೇರೆಡೆ ಹೋಯಿತು ಎಂದು ದ್ವಾರಕೆಯಲ್ಲಿರುವ ಹಿರಿಯರು ಇಂದಿಗೂ ಹೇಳುತ್ತಾರೆ. ದ್ವಾರಕೆಗೆ ಸುವರ್ಣಪುರಿ ಎಂಬ ಹೆಸರು ಇತ್ತು. ಅಂದರೆ, ಅವನ ಮನೆ ಸುವರ್ಣಮಯ. ಸುವರ್ಣಪುರಿಯನ್ನು ಬಿಟ್ಟು ಬಂದ ಶ್ರೀಕೃಷ್ಣನಿಗೆ ಸುವರ್ಣಗೋಪುರವನ್ನು ನಿರ್ಮಿಸೋಣ ಎಂದು ಪ್ರೇರಣೆಯಾಯಿತು.

* ವಾದಿರಾಜ ಸ್ವಾಮಿಗಳ ಕಾಲದಲ್ಲಿ ಸುವರ್ಣ ಗೋಪುರ ಮಾಡುವುದು ಬೇಡವೆಂಬ ಸಂದೇಶ ಬಂದಿತ್ತು ಎಂಬ ಮಾತು ಇದೆಯಲ್ಲ?
ಈ ಯೋಜನೆ ಆರಂಭಿಸುವ ಪೂರ್ವದಲ್ಲಿ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಬಳಿ ಹೇಳಿದೆ. ತನಗೂ ಈ ಯೋಜನೆ ಮಾಡಬೇಕೆಂಬ ಹಂಬಲವಿತ್ತು. ಆದರೆ ವಾದಿರಾಜ ಸ್ವಾಮಿಗಳಿಗೆ ಇದು ಬೇಡವೆಂಬ ಸೂಚನೆ ಬಂದಿತ್ತು ಎಂದು ತಿಳಿದಾಗ ಕೈಬಿಟ್ಟೆ ಎಂದರು. ಹಾಗಾದರೆ ನಾವೇನು ಮಾಡೋಣ ಎಂದು ಚಿಂತಿಸಿ ವಾದಿರಾಜರ ಸನ್ನಿಧಾನದಲ್ಲಿ ಪ್ರಸಾದ ನೋಡಿದೆವು. ಒಳ್ಳೆಯ ಸೂಚನೆ ಬಂತು. ಅವರೇ ಈ ಕೆಲಸ ಮಾಡಿಸುತ್ತಿದ್ದಾರೆಂಬ ಅನುಸಂಧಾನದಲ್ಲಿ ನಾವಿದಕ್ಕೆ ಕೈಹಾಕಿದೆವು.

* ಹಾಗಿದ್ದರೆ ವಾದಿರಾಜ ಸ್ವಾಮಿಗಳಿಗೆ ಏಕೆ ಸೂಚನೆ ಬಂದಿದ್ದಿರಬಹುದು? ಈಗೇಕೆ ಒಪ್ಪಿಗೆ ಕೊಟ್ಟಿದ್ದಿರಬಹುದು?
ಉತ್ತರ ಭಾರತದ ರಾಜನೊಬ್ಬ ಬಂಗಾರವನ್ನು ಕೊಟ್ಟ ಎಂದು ವಾದಿರಾಜರ ಗುರು ಚರಿತೆಯಲ್ಲಿ ಉಲ್ಲೇಖವಿದೆ. ದೇವಸ್ಥಾನ ನಿರ್ಮಾಣ ಒಬ್ಬನ ಹಣದಲ್ಲಿ ಆಗಬಾರದೆಂದು ಶಾಸ್ತ್ರದಲ್ಲಿದೆ. ಅದರಂತೆ ಅದು ಒಬ್ಬನ ಹಣವಾಗಿದ್ದರಿಂದ ಬೇಡವೆಂದು ಸೂಚನೆ ಬಂದಿರಬಹುದು. ಈಗ ಹತ್ತು ಜನರಿಂದ ಈ ಕೆಲಸ ಆಗುತ್ತಿದೆ.

* ಹಿಂದೆ ವಾದಿರಾಜ ಸ್ವಾಮಿಗಳಿಗೆ ಸೂಚನೆ ಬಂದಾಗ ಆ ಚಿನ್ನವನ್ನು ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ (ತಕ್ಷಕ ಪೊಟರೆ), ಸೋದೆ ಮಠದ ಭೂತರಾಜ, ನಾಗನ ಸನ್ನಿಧಿಯಲ್ಲಿ ಇರಿಸಿದರೆಂಬ ಮಾತಿದೆಯಲ್ಲ?
ಇದು ಅಸಂಭವನೀಯವಲ್ಲ. ನಿಧಿ ರಕ್ಷಣೆಗಾಗಿ ನಾಗನ ಕಲ್ಲುಗಳನ್ನು ಪ್ರತಿಷ್ಠೆ ಮಾಡುವ ಕ್ರಮವಿದೆಯಲ್ಲ?

Advertisement

* ಸುವರ್ಣ ಗೋಪುರ ಭಕ್ತರಿಗೆ ಸುತ್ತು ಬರುವಾಗ ಸರಿಯಾಗಿ ತೋರುವುದಿಲ್ಲ. ಇದಕ್ಕೇನಾದರೂ ಮಾಡುತ್ತೀರಾ?
ಮಳೆ ನೀರು ಬೀಳಬಾರದೆಂದು ಹಾಕಿರುವ ಪ್ಲಾಸ್ಟಿಕ್‌ ಶೀಟುಗಳನ್ನು ಸ್ವಲ್ಪ ಎತ್ತರಕ್ಕೆ ಹಾಕುತ್ತೇವೆ. ಆಗ ಕೆಳಗೆ ಸುತ್ತಿನಲ್ಲಿ ನಿಂತಾಗ ಗೋಪುರ ತೋರುತ್ತದೆ. ಮಠವನ್ನು ಪ್ರವೇಶ ಮಾಡಿ ಮುಂದೆ ಬರುವಾಗ ಒಳಕೊಟ್ಟಾರ ಎಂಬ ಜಾಗವಿದೆ. ಅಲ್ಲಿ ತಾರಸಿ ನಿರ್ಮಿಸಿ ಅದರಲ್ಲಿ ನಿಂತು ಗೋಪುರವನ್ನು ನೋಡುವಂತೆ ಮಾಡುತ್ತೇವೆ.

* ತಾವು ಚಿಕ್ಕವರಿರುವಾಗ ನಡೆಯಲು ಅಸಾಧ್ಯವಾಗಿತ್ತು. ತಾಯಿ ತಮ್ಮ ಉಪನಯನ ಮಾಡುವಾಗ ತಿರುಮಲ ತಿರುಪತಿ ಬೆಟ್ಟ ಹತ್ತಿಸಿಕೊಂಡು ಹೋಗುವುದಾಗಿ ಹರಕೆ ಹೊತ್ತು ಆಗ ಮಾಡಿಸಿದರಂತೆ. ಈಗ ಅದೇ ಶ್ರೀನಿವಾಸ ತನಗಿರುವಂತಹ ಸ್ವರ್ಣಗೋಪುರವನ್ನು ಶ್ರೀಕೃಷ್ಣನಿಗೂ ತಮ್ಮನ್ನು ನಿಮಿತ್ತವಾಗಿರಿಸಿಕೊಂಡು ಮಾಡಿಸಿದನೆಂದು ಅನಿಸುತ್ತದೆಯೆ?
ಹಾಗೆ ಅನಿಸುತ್ತದೆ. ಶ್ರೀನಿವಾಸ ಈ ತೆರನಾಗಿ ಸಂಬಂಧವನ್ನು ಹೆಚ್ಚಿಸಿಕೊಂಡಿರಬಹುದು.

* ಅಖಂಡ ಭಜನೆಯ ಕಲ್ಪನೆ ಹಿಂದಿರುವ ಪ್ರೇರಣೆ ಏನು?
ಕರಾವಳಿ ಪ್ರಾಂತ್ಯದಲ್ಲಿ ಭಜನೆಯ ಪರಿಪಾಠವನ್ನು ಹಿಂದಿನಿಂದಲೂ ನೋಡುತ್ತಿದ್ದೇವೆ. ವಾರ, ದಿನ, 48, 108 ದಿನಗಳ ಅಖಂಡ ಭಜನೆ ಬೇರೆ ಬೇರೆ ಕಡೆ ನಡೆಯುತ್ತಿದೆ. ತಿರುಪತಿ ತಿರುಮಲದಲ್ಲಿ ನಡೆದ ಪುರಂದರದಾಸರ ಆರಾಧನೆಗೆ ಹೋಗಿರುವಾಗ ಅಲ್ಲಿನ ವ್ಯವಸ್ಥಾಪಕರು ಆರು ಭಜನಾ ಮಂಡಳಿಗಳನ್ನು ನಿತ್ಯ ಕಳುಹಿಸಿಕೊಡುತ್ತೇವೆ ಎಂದರು. ಇದನ್ನೇ ಶ್ರೀನಿವಾಸನ ಸಂಕಲ್ಪ ಎಂದು ತಿಳಿದು ಮುಂದಡಿ ಇಟ್ಟೆವು.

* ನಿತ್ಯ ಲಕ್ಷ ತುಳಸಿ ಅರ್ಚನೆ ಕುರಿತು…
ಹಿಂದಿನ ಪರ್ಯಾಯದಲ್ಲಿ ವಾರಕ್ಕೊಮ್ಮೆ ಲಕ್ಷಾರ್ಚನೆ ಮಾಡಿದ್ದೆವು. ನಿತ್ಯ ಮಾಡುವ ಧೈರ್ಯ ಬರಲಿಲ್ಲ. ಈ ಬಾರಿ ವಿವಿಧ ಕಡೆಗಳಿಂದ ಬರುತ್ತಿರುವ ತುಳಸಿಯ ಪ್ರಮಾಣದಿಂದ ನಿತ್ಯ ಲಕ್ಷ ತುಳಸಿ ಅರ್ಚನೆ ಮಾಡುವಂತಾಯಿತು. ಅರ್ಚನೆಗೊಂಡ ತುಳಸಿಯೂ ಧರ್ಮಸ್ಥಳ ಆಯುರ್ವೇದ ಕಾಲೇಜಿನಲ್ಲಿ ಔಷಧಕ್ಕಾಗಿ ಬಳಕೆಯಾಗುತ್ತಿದೆ. ಒಂದು ಧಾರ್ಮಿಕ ಪ್ರಕ್ರಿಯೆ ವೈದ್ಯಕೀಯವಾಗಿಯೂ ಪ್ರಯೋಜನಗೊಳ್ಳುತ್ತಿದೆ.

* ಇಷ್ಟೊಂದು ದೊಡ್ಡ ಯೋಜನೆ ಕೈಗೆತ್ತಿಕೊಳ್ಳುವ ಧೈರ್ಯ ಹೇಗೆ ಬಂತು? ಜನರ ಸ್ಪಂದನೆ ಹೇಗಿದೆ?
ಸುಮಾರು 100 ಕೆ.ಜಿ.ಸುವರ್ಣದ ಯೋಜನೆ ಇದು. ಒಂದು ಲಕ್ಷ ಜನರು ಒಂದು ಗ್ರಾಂ ಚಿನ್ನ ನೀಡಿದರೆ ಯೋಜನೆ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡೆವು. ಈಗ ಶೇ.20ರಷ್ಟು ಚಿನ್ನದ ಕೊರತೆ ಇದೆ. ಈ ಚಿನ್ನವನ್ನು ಬೇರೆಯವರಿಂದ ತರಿಸಿಕೊಂಡಿದ್ದೇವೆ. ಅವರಿಗೆ ಚಿನ್ನವನ್ನು ವಾಪಸ್‌ ಕೊಟ್ಟರಾಯಿತು. ಇನ್ನೂ ಆರು ತಿಂಗಳು ಪೂಜಾವಧಿ ಇದೆ. ಅಷ್ಟರೊಳಗೆ ಇದು ಆಗುತ್ತದೆ ಎಂಬ ನಂಬಿಕೆ ಇದೆ.

ಜೂ.6, 9- ಕಲಶಾಭಿಷೇಕ: ಶ್ರೀಕೃಷ್ಣ ಮಠದಲ್ಲಿ ನಿರ್ಮಿಸಿದ ಸುವರ್ಣಗೋಪುರ ಸಮರ್ಪಣೋತ್ಸವದ ಅಂಗವಾಗಿ ಜೂ.6ರಂದು ಸುವರ್ಣ ಗೋಪುರ ಪ್ರತಿಷ್ಠೆ, ಅಷ್ಟಮಠಾಧೀಶರಿಂದ ಸಹಸ್ರ ಕಲಶಾಭಿಷೇಕ, ಜೂ.9ರಂದು ಶ್ರೀಕೃಷ್ಣನಿಗೆ 108 ಕಲಶಗಳ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಅಟ್ಟಳಿಗೆ ಕಟ್ಟಿ ಶಿಖರಕ್ಕೆ ಸಹಸ್ರ ಕಲಶಾಭಿಷೇಕ ನಡೆಸಲಾಗುವುದು.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next