ತಿರುಮಲ: ತಿರುಮಲದ ತಿಮ್ಮಪ್ಪನ ಸನ್ನಿಧಾನದಲ್ಲಿ ವೈಭವಯುತ ನವರಾತ್ರಿ ಆಚರಣೆಗಳು ಜರಗಿದ ಬೆನ್ನಲ್ಲೇ ಟಿಟಿಡಿಗೆ ಹಗರಣವೊಂದು ಸುತ್ತಿಕೊಂಡಿದೆ. ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದವನ್ನು ಟಿಟಿಡಿ ಸಿಬಂದಿಯೇ ಕಾಳಸಂತೆಯಲ್ಲಿ ಮಾರಿದ್ದಾರೆಂಬ ಆರೋಪಗಳು ಕೇಳಿಬಂದಿವೆ. ಪ್ರತಿಬಾರಿಯಂತೆ ಈ ಬಾರಿಯೂ ಜರಗುವ “ಗರುಡ ಸೇವೆ’ಯನ್ನು ನೋಡಲು ಅಪಾರ ಭಕ್ತರು ಆಗಮಿಸುವುದನ್ನು ಮೊದಲೇ ಮನಗಂಡಿದ್ದ ತಿರುಪತಿ ತಿರುಮಲ ದೇವಸ್ಥಾನಂ ಅ. 14, 15, 16ರಂದು ಭಕ್ತರಿಗೆ ಅಂದಾಜು 30,000 ಲಡ್ಡುಗಳ ಹಂಚಿಕೆಗಾಗಿ 100 ರೂ. ಮತ್ತು 50 ರೂ. ಮುಖಬೆಲೆಯ ಎರಡು ಮಾದರಿಯ ಟೋಕನ್‌ಗಳನ್ನು ವಿತರಿಸುವಂತೆ ಸಿಬಂದಿಗೆ ಸೂಚಿಸಿತ್ತು. ಆದರೆ, ಟಿಕೆಟ್ ವಿತರಣ ಕೌಂಟರ್‌ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರ ಪೈಕಿ ಕೆಲವರು ಈ ಟೋಕನ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಆ ಮೂಲಕ ಸುಮಾರು 14,000 ಲಡ್ಡುಗಳನ್ನು ಅಕ್ರಮವಾಗಿ ಹಂಚಿದ್ದಾರೆಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಭದ್ರತಾ ಅಧಿಕಾರಿ ಹಲವರ ವಿಚಾರಣೆ ನಡೆಸಿದ್ದಾರೆ.