ಆಂಧ್ರಪ್ರದೇಶ: ತಿರುಪತಿ ಲಡ್ಡು ಪ್ರಸಾದ(Tirupati Laddu Prasadam) ಪ್ರಕರಣದ ಕುರಿತ ವಿಶೇಷ ತನಿಖಾ ತಂಡದ (Special Investigation Team’s) ತನಿಖೆಯನ್ನು ಅಕ್ಟೋಬರ್ 3ರವರೆಗೆ ತಡೆಹಿಡಿಯಲಾಗಿದೆ ಎಂದು ಆಂಧ್ರಪ್ರದೇಶ ಡಿಜಿಪಿ(Director General Of Police) ದ್ವಾರಕಾ ತಿರುಮಲ ರಾವ್ ಮಂಗಳವಾರ (ಅ.01) ಘೋಷಿಸಿದ್ದಾರೆ.
ಯಾವುದೇ ಆಧಾರವಿಲ್ಲದೇ ತಿರುಪತಿ ಲಡ್ಡು ತಯಾರಿಕೆಯಲ್ಲಿ ದನ, ಹಂದಿ ಕೊಬ್ಬು ಬಳಸಿದ್ದಾರೆಂಬ ಸಾರ್ವಜನಿಕ ಆರೋಪದ ಬಗ್ಗೆ ಸುಪ್ರೀಂಕೋರ್ಟ್ ಆಂಧ್ರಪ್ರದೇಶ ಸರ್ಕಾರಕ್ಕೆ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡ ನಂತರ ಈ ಬೆಳವಣಿಗೆ ನಡೆದಿದೆ.
“ಪ್ರಾಮಾಣಿಕ ತನಿಖೆಗಾಗಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಸುಪ್ರೀಂಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಕೆಲಕಾಲದವರೆಗೆ ತನಿಖೆಯನ್ನು ನಿಲ್ಲಿಸಲಾಗುವುದು. ನಮ್ಮ ಪೊಲೀಸ್ ತಂಡ ವಿವಿಧ ರೀತಿಯ ಪರಿಶೀಲನೆ, ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದಾಗಿ ದ್ವಾರಕಾ ತಿರುಮಲ ತಿಳಿಸಿದ್ದಾರೆ.
ಕಳೆದ ವಾರ ಲಡ್ಡು ತಯಾರಿಕೆಗೆ ಬಳಸುವ ತಿರುಮಲ ತುಪ್ಪದ ಸಂಗ್ರಹ ಕೊಠಡಿಯನ್ನು ಎಸ್ ಐಟಿ ಪರಿಶೀಲನೆ ನಡೆಸಿತ್ತು. ಸೆಪ್ಟೆಂಬರ್ 25ರಂದು ಎಫ್ ಐಆರ್ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸೆ.26ರಂದು ಎಸ್ ಐಟಿ ರಚನೆ ಮಾಡಲಾಗಿತ್ತು.