Advertisement

Tirupati Laddu Controversy;ಆಂಧ್ರ ಸಿಎಂ ನಾಯ್ಡುಗೆ ತರಾಟೆ: ಸಾಕ್ಷ್ಯ ಕೇಳಿದ ಸುಪ್ರೀಂ

01:22 AM Oct 01, 2024 | Team Udayavani |

ಹೊಸದಿಲ್ಲಿ: “ಮೇಲ್ನೋಟಕ್ಕೆ ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆಯ ತುಪ್ಪವನ್ನೇ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಧರ್ಮ ಮತ್ತು ರಾಜಕೀಯವನ್ನು ಯಾವತ್ತೂ ಬೆರೆಯಲು ಬಿಡಬಾರದು. ಕನಿಷ್ಠಪಕ್ಷ ದೇವರನ್ನಾದರೂ ನಿಮ್ಮ ರಾಜಕೀಯದಿಂದ ದೂರವಿಡಿ.’

Advertisement

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನಂಶವಿರುವ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಆಂಧ್ರ ಸರಕಾರವನ್ನು ಸುಪ್ರೀಂಕೋರ್‌r ತರಾಟೆಗೆ ತೆಗೆದುಕೊಂಡ ಪರಿಯಿದು.
ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಕೋರ್ಟ್‌ ಮೇಲ್ವಿಚಾರಣೆಯ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ 3 ಅರ್ಜಿಗಳನ್ನು ನ್ಯಾ| ಬಿ.ಆರ್‌.ಗವಾಯಿ ಮತ್ತು ನ್ಯಾ| ಕೆ.ವಿ.ವಿಶ್ವನಾಥನ್‌ ನೇತೃತ್ವದ ಪೀಠ ವಿಚಾರಣೆ ನಡೆಸಿತು.

ನಿಮ್ಮಲ್ಲಿ ಸಾಕ್ಷ್ಯ ಇದೆಯೇ?

ತುಪ್ಪ ಕಲಬೆರಕೆಯಾಗಿದೆ ಎಂಬುದಕ್ಕಾಗಲೀ, ಕಲಬೆರಕೆಯಾಗಿದೆ ಎನ್ನಲಾದ ತುಪ್ಪದಿಂದಲೇ ಲಡ್ಡು ತಯಾರಿಸಲಾಗಿದೆ ಎಂಬುದಕ್ಕಾಗಲೀ ಸೂಕ್ತ ಪುರಾವೆಗಳಿಲ್ಲದ ಬಗ್ಗೆಯೂ ನ್ಯಾಯಪೀಠ ಆಕ್ಷೇಪ ವ್ಯಕ್ತಪಡಿಸಿದೆ. “ತನಿಖಾ ವರದಿ ಬರುವ ಮುನ್ನವೇ ಮಾಧ್ಯಮಗಳ ಮುಂದೆ ಹೋಗುವ ಆವಶ್ಯಕತೆ ಏನಿತ್ತು? ನೀವು ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು. ರಾಜಕೀಯದಿಂದ ದೇವರನ್ನು ದೂರವಿಡಬೇಕೆಂದು ನಿರೀಕ್ಷಿಸುತ್ತೇವೆ. ಲ್ಯಾಬ್‌ ವರದಿ ಬಂದಿದ್ದು ಜುಲೈಯಲ್ಲಿ, ನಿಮ್ಮ ಹೇಳಿಕೆ ಬಿಡುಗಡೆಯಾಗಿದ್ದು ಸೆಪ್ಟಂಬರ್‌ನಲ್ಲಿ. ಅಲ್ಲದೆ ಲ್ಯಾಬ್‌ ವರದಿಯೂ ಸ್ಪಷ್ಟವಾಗಿಲ್ಲ. ಇದಕ್ಕೆ ನಿಮ್ಮ ಬಳಿ ಸಾಕ್ಷ್ಯ ಇದೆಯೇ? ಎಂದು ನ್ಯಾಯಪೀಠ ಪ್ರಶ್ನಿಸಿದೆ.

ಟಿಟಿಡಿ ಹೇಳಿಕೆ ಆಧರಿಸಿ ತರಾಟೆ
ಪೂರೈಕೆದಾರ ಸಂಸ್ಥೆಯು ಜೂನ್‌ನಿಂದ ಜು.4ರ ವರೆಗೆ ಪೂರೈಸಿದ ತುಪ್ಪವನ್ನು ಪರೀಕ್ಷೆಗೆಂದು ಕಳುಹಿಸಿಲ್ಲ ಎಂದು ಟಿಟಿಡಿಯೇ ಹೇಳಿದೆ. ಜು. 6 ಮತ್ತು 12ರಂದು 2 ಟ್ಯಾಂಕರ್‌ಗಳಲ್ಲಿ ಪೂರೈಸಲಾದ ತುಪ್ಪವನ್ನು ಮಾತ್ರ ಲ್ಯಾಬ್‌ಗ ಪರೀಕ್ಷೆಗೆಂದು ಕಳುಹಿಸಲಾಗಿದೆ. ಪರೀಕ್ಷೆಗೆ ಕಳುಹಿಸಿದ ಎಲ್ಲ 4 ಮಾದರಿಗಳಲ್ಲೂ ಕಲಬೆರಕೆಯಾಗಿರುವುದು ದೃಢಪಟ್ಟಿದೆ ಎಂದೂ ಟಿಟಿಡಿ ಹೇಳಿದೆ. ಹೀಗಿರುವಾಗ, ಪ್ರಾಣಿಗಳ ಕೊಬ್ಬು ಬೆರಕೆಯಾದ ತುಪ್ಪದಿಂದಲೇ ಲಡ್ಡು ತಯಾರಿಸಲಾಗಿದೆ ಎಂದು ಹೇಗೆ ಹೇಳುತ್ತೀರಿ? ಅದಕ್ಕೆ ಸಾಕ್ಷಿ ಎಲ್ಲಿದೆ? ಎಂದು ನ್ಯಾಯಪೀಠ ಕೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next