Advertisement
ಸುಮಾರು 1903ರಲ್ಲಿ ತಿ.ತಾ. ಶರ್ಮರಿಗೆ ಅಣ್ಣನ ಜತೆ ಉಪನಯನವಾಯಿತು. ಗೋಡೆಗಳ ಬಿರುಕು ಸರಿಪಡಿಸುವುದು, ಸುಣ್ಣ ಬಣ್ಣದ ಕೆಲಸ, ಬೆಕ್ಕು ಮಾಳಿಗೆ (ಪ್ರಾಯಃ ಬೆಕ್ಕುಗಳ ವಾಸ ಸ್ಥಳ), ಕಲ್ಯಾಣವೇದಿಕೆಗಳು, ಪಾಕಶಾಲೆಗಳ ತಯಾರಿಗಳ ವರ್ಣನೆ ಓದುವಾಗ ಸುಮಾರು 100 ವರ್ಷಗಳ ಹಿಂದೆ ಉಪನಯನ, ಮದುವೆಯಂತಹ ಕಾರ್ಯಕ್ರಮಗಳು ನಡೆಯುವುದಿದ್ದರೆ (ಮನೆಗಳಲ್ಲಿ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ) ಈಗ ದೇವಸ್ಥಾನಗಳ ಬ್ರಹ್ಮಕಲಶೋತ್ಸವಕ್ಕೆ ಜೀರ್ಣೋದ್ಧಾರ ನಡೆಸುತ್ತಿರುವ ಭಾವನೆ ಬರುತ್ತದೆ.
Related Articles
Advertisement
ಮನೆಯಲ್ಲಿ ಬೆಳೆದ ಹತ್ತಿ ಹಿಂಜಿ ಬತ್ತಿ ಮಾಡಿ ಸ್ನಾನಾನಂತರ ಮಡಿಯುಟ್ಟು, ಕದರಿನಿಂದ ದಾರ ತೆಗೆಯಬೇಕು. ಅದಕ್ಕೆಲ್ಲ ಒಂದು ಶಾಸ್ತ್ರವಿದೆ. ಹಾಗೆ ತೆಗೆದ ದಾರದಿಂದ ಮಂತ್ರಪೂರ್ವಕವಾಗಿ ಜನಿವಾರ ಹಾಕಬೇಕು. ಚಿನ್ನದಿಂದ ಮಾಡಿಸಿದ ಮಾತ್ರದಿಂದ ಇದು ಯಜ್ಞೋಪವೀತವೆನಿಸುವುದಿಲ್ಲ. ಆ ಪಾವಿತ್ರ್ಯ ಚಿನ್ನದ ಜನಿವಾರಕ್ಕೆ ಹೇಗೆ ಬರಬೇಕು?’. ರೆಡ್ಡಿ ಕೂಡ ಅಷ್ಟಕ್ಕೆ ಮುಗಿಸಲಿಲ್ಲ: “ಶಾಸ್ತ್ರಕ್ಕಾಗಿಯೋ, ಮಡಿಗಾಗಿಯೋ ನೀವು ಹಾಕುವ ಜನಿವಾರ ನೀವು ಹಾಕಿಬಿಡಿ. ಜತೆಗೆ ಅಲಂಕಾರಕ್ಕಾಗಿ, ನಮ್ಮ ತೃಪ್ತಿಗಾಗಿ ಈ ಎಳೆಗಳನ್ನು ಹಾಕಬಹುದಲ್ಲ?’. ತಾತನ ಮರು ಉತ್ತರ ಹೀಗಿತ್ತು: “ಹತ್ತು ಮಂದಿ ವಟುಗಳು ದೀಕ್ಷೆ ವಹಿಸುತ್ತಿದ್ದಾರೆ. ಎಲ್ಲರೂ ಎಳೆ ಮಕ್ಕಳು. ನೀವು ನಮ್ಮ ಮಕ್ಕಳಿಬ್ಬರಿಗೆ ಚಿನ್ನದೆಳೆ ಹಾಕಿದರೆ ಉಳಿದ ಮಕ್ಕಳ ಮನಸ್ಸಿಗೆ ನೋವಾದೀತು. ಮಕ್ಕಳ ತಂದೆತಾಯಿಗಳಿಗಂತೂ ಇದರಿಂದ ಅಪಾರ ದುಃಖವಾಗುತ್ತದೆ. ಅವರು ನಮ್ಮ ಮಕ್ಕಳು ನಿರ್ಭಾಗ್ಯರ ಹೊಟ್ಟೆಯಲ್ಲಿ ಹುಟ್ಟಿದರು ಎಂದು ಮರುಗುವರು. ಇದಕ್ಕೆ ನಾವೇಕೆ ಅವಕಾಶ ಕೊಡಬೇಕು?’. ಲೋಕವ್ಯವಹಾರ ಚೆನ್ನಾಗಿ ತಿಳಿದಿದ್ದ ರೆಡ್ಡಿಯವರು “ನಿಮಗೆ ಹೇಗೆ ಸೂಕ್ತವೋ ಹಾಗೆ ಮಾಡಿ’ ಎಂದರು. ಇದು ನಡೆದದ್ದು 1903ರಲ್ಲಿ…
ಈಗಿನ ಸಾಮೂಹಿಕ ಉಪನಯನ-ವಿವಾಹ ಸ್ಥಿತಿಸಾಮೂಹಿಕ ಉಪನಯನ-ವಿವಾಹಗಳು ಈಗ ಮನೆಗಳಿಂದ ಮಂಟಪಗಳಿಗೆ ಸ್ಥಳಾಂತರವಾಗಿವೆ. ಇಲ್ಲಿ ಆಯೋಜಕರು ಮತ್ತು ಫಲಾನುಭವಿಗಳ ಅಂತಸ್ತು ವ್ಯತ್ಯಾಸ ಹೇಗಿರುತ್ತದೆ? ಆಯೋಜಕ ಘಟಾನುಘಟಿಗಳು ಫಲಾನುಭವಿಗಳ ಜತೆ ಸಾಮಾಜಿಕ ಅಂತಸ್ತಿನಲ್ಲಿ ಸಮಾನರಾಗಿರಲು ಸಿದ್ಧರೆ? ಉಚಿತ ಸಾಮೂಹಿಕ ವಿವಾಹಗಳಲ್ಲಿ ಪಾಲ್ಗೊಂಡು ಸಾಲ ಮಾಡಿ ಮೆಹಂದಿಗೆ ಖರ್ಚು ಮಾಡುವುದೂ ಸಾಮಾಜಿಕ ಅಂತಸ್ತನ್ನು ಕಾಪಾಡಿಕೊಳ್ಳಲು. ಇದು ಸಮಗ್ರ ಸಮಾಜವನ್ನು ಮತ್ತಷ್ಟು ಆರ್ಥಿಕ ದಿವಾಳಿತನಕ್ಕೆ ಕೊಂಡೊಯ್ಯುತ್ತದೆ. ಇದರ ಮೂಲ ಇರುವುದು ಆರ್ಥಿಕ ಬಲಾಡ್ಯರು ಮತ್ತು ದುರ್ಬಲರ ನಡುವೆ ಎದ್ದು ಕಾಣುವ ಸಾಮಾಜಿಕ ಅಂತರದಲ್ಲಿ. ಗಾಂಧೀಜಿಯವರು 1934ರ ಫೆ. 25ರಂದು ಉಡುಪಿಗೆ ಬಂದಾಗ ಚಿನ್ನವನ್ನು ಸಮರ್ಪಿಸಿದ 10ರ ಬಾಲೆ ಪಾಂಗಾಳ ನಿರುಪಮಾ ನಾಯಕ್ ಅವಳಿಗೆ ಹೇಳಿದ ಮಾತು ಇದು: “ನೀನು ಆಭರಣಗಳನ್ನು ಪ್ರದರ್ಶನಕ್ಕಾಗಿ ಹಾಕಬಾರದು. ಭಾರತ ಬಡವರ ದೇಶ. ಇದರಿಂದ ಇಲ್ಲದವರ ಮನಸ್ಸಿಗೆ ನೋವಾಗುತ್ತದೆ’. ನಿರುಪಮಾ ಜೀವನದ ಕೊನೆಯವರೆಗೂ ತೀರಾ ಕನಿಷ್ಠ ಪ್ರಮಾಣದ ಚಿನ್ನ ಮಾತ್ರ ಧರಿಸುತ್ತಿದ್ದರು. ಗಾಂಧೀಜಿಗೆ ಮುನ್ನವೇ ಅವರ ಮಾತಿನ ಸಾರ ತಿ.ತಾ.ಶರ್ಮರ ತಾತನ ಬಾಯಿಂದ ಹೊರಬಿದ್ದಿತ್ತು. 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ತಿ.ತಾ.ಶರ್ಮ 20ರ ಯುವಕನಾಗಿದ್ದಾಗ ತಾನು ಆರಂಭಿಸುವ ಹೊಸ ಪತ್ರಿಕೆಗೆ ಗಾಂಧೀಜಿಯವರಲ್ಲಿ ಸಂದೇಶವನ್ನು ಕೇಳಿದರು. ಆಗ ಗಾಂಧೀಜಿ ಕೊಟ್ಟ ಸಂದೇಶ “ಕರೇಜ್ ಆ್ಯಂಡ್ ಕ್ಯಾರೆಕ್ಟರ್’ (ಧೈರ್ಯ ಮತ್ತು ಚಾರಿತ್ರ್ಯ). 1934ರ ಫೆ. 25ರಂದು ಉಡುಪಿ ನಾಗರಿಕರಿಗೆ ಕೊನೆಯಲ್ಲಿ ಕೊಟ್ಟ ಸಂದೇಶ “ಸ್ಟಾಂಡ್ ಅಪ್ ಫಾರ್ ಟ್ರಾತ್ ಎಟ್ ಎನಿ ಕಾಸ್ಟ್’ (ಏನೇ ಆದರೂ ಸತ್ಯದ ಪರವಾಗಿರಬೇಕು). ಚಾರಿತ್ರ್ಯವಿದ್ದಾಗಲೇ ನಿರ್ಭಯತೆ (ಧೈರ್ಯ) ಬರುತ್ತದೆ, ಸತ್ಯವೂ ಇದನ್ನೇ ಕೊಡುತ್ತದೆ ಎನ್ನುವುದು ಗಾಂಧೀಜಿ ನೀತಿ ಎನ್ನುವುದಕ್ಕಿಂತ ಲಾಗಾಯ್ತಿನಿಂದ ಬಂದ ತಣ್ತೀಶಾಸ್ತ್ರದ ಸಂದೇಶ ಎನ್ನಬಹುದು. ತಿ.ತಾ.ಶರ್ಮರ ತಾತನ ಮಾತು ಮೊಮ್ಮಗನಿಗೆ ಮಾತ್ರವಲ್ಲ, ಗಾಂಧೀಜಿ ಮಾತು ಕೇವಲ ತಿ.ತಾ.ಶರ್ಮ, ನಿರುಪಮಾಗೆ ಮಾತ್ರವಲ್ಲ, ಎಲ್ಲರಿಗೂ… ಆದರೆ ಈಗ ಕಾಣುತ್ತಿರುವುದು…? -ಮಟಪಾಡಿ ಕುಮಾರಸ್ವಾಮಿ