ತಿರುಪತಿ:ದೇಶಾದ್ಯಂತ ಸಂಭ್ರಮದ ನವರಾತ್ರಿ ಹಬ್ಬ ಕಳೆಕಟ್ಟುತ್ತಿರುವಂತೆಯೇ ಜಗತ್ತಿನ ಶ್ರೀಮಂತ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಮಂಗಳವಾರದಿಂದ 9 ದಿನಗಳ ಕಾಲ ಬ್ರಹ್ಮೋತ್ಸವ ನಡೆಯಲಿದೆ. ಸಂಪ್ರದಾಯ ಪ್ರಕಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರು ಹೊಸ ವಸ್ತ್ರಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಬ್ರಹ್ಮೋತ್ಸವ ಅದ್ಧೂರಿಯಾಗಿ ಆಚರಿಸಲು ಅವಕಾಶ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಅದ್ಧೂರಿಯಾಗಿ ಬ್ರಹ್ಮೋತ್ಸವ ಆಚರಿಸಲಾಗುತ್ತದೆ.
ಹೀಗಾಗಿ, ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ತಿರುಪತಿಗೆ ಆಗಮಿಸುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ತಿರುಪತಿ ತಿರುಮಲ ದೇವಸ್ಥಾನಮ್ಸ್(ಟಿಟಿಡಿ) ಆಡಳಿತ ಮಂಡಳಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಹ್ಮೋತ್ಸವ ಕಾರ್ಯಕ್ರಮ ಅ.5ರಂದು ಮುಕ್ತಾಯಗೊಳ್ಳಲಿದೆ.
ಭದ್ರತಾ ವ್ಯವಸ್ಥೆಗಾಗಿ ದೇಗುಲ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಏಳು ಸಾವಿರ ಮಂದಿಯನ್ನು ನಿಯೋಜಿಸಿದೆ. ಗರುಡ ಸೇವಾ ದಿನ ತಿರುಮಲದಲ್ಲಿ ಹೆಚ್ಚುವರಿಯಾಗಿ 2 ಸಾವಿರ ಮಂದಿ ಭದ್ರತಾ ಸಿಬ್ಬಂದಿ ಇರಲಿದ್ದಾರೆ.
ಬ್ರಹ್ಮೋತ್ಸವಕ್ಕೆ ಪೂರ್ವಭಾವಿಯಾಗಿ ಭಾನುವಾರ ತಿರುಮಲದಲ್ಲಿ “ಸರ್ವ ಭೂಪಾಲ ವಾಹನಂ’ನ ಪ್ರಯೋಗಾರ್ಥ ಸಂಚಾರ ಆಯೋಜಿಸಲಾಗಿತ್ತು.