ಸುತ್ತಲೂ ಬೆಟ್ಟ ಗುಡ್ಡ. ಅದರ ನಡುವೆಯೇ ಲೆಕ್ಕಕ್ಕೆ ಸಿಗದಷ್ಟು ಪ್ರಮಾಣದ ಜಲಧಾರೆಯನ್ನು ತನ್ನ ಒಡಲಲ್ಲಿ ಹೊಂದಿರುವ, ಬ್ರಹ್ಮ-ವಿಷ್ಣು-ಮಹೇಶ್ವರನ ಸಂಗಮದ ಅಪರೂಪದ ಶಿಷ್ಟ ಪರಂಪರೆ ಹೊಂದಿರುವ ದೇಗುಲವನ್ನು ಕಣ್ತುಂಬಿಕೊಳ್ಳಬೇಕಾದರೆ ನೀವು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಗ್ರಾಮದ ಹತ್ತಿರವಿರುವ ತೀರ್ಥರಾಮೇಶ್ವರ ದೇವಸ್ಥಾನಕ್ಕೆ ಬರಬೇಕು.
ಹೊನ್ನಾಳಿ ತಾಲೂಕಿನ ನ್ಯಾಮತಿಯ ಮೂಲಕ ಸಾಗಿ ಬೆಳಗುತ್ತಿಯಿಂದ 3 ಕಿ.ಮೀ. ಸಾಗಿದ ಬಳಿಕ, ಗುಡ್ಡದ ಮೇಲಿರುವ ದೇವಸ್ಥಾನ ಕಾಣುತ್ತದೆ. ಸೌಳಂಗದಿಂದ ಶಿಕಾರಿಪುರ ತಾಲೂಕಿನ ಖಳೂರುವರೆಗೆ ಹಬ್ಬಿರುವ ಬೆಟ್ಟದಲ್ಲಿ ರಾಮೇಶ್ವರ ನೆಲೆಸಿದ್ದಾನೆ. ಈ ಸ್ಥಳಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ರಾಮಾಯಣದಲ್ಲಿ ಈ ಸ್ಥಳದ ಪ್ರಸ್ತಾಪವಿದೆಯಂತೆ. ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ ಈ ಬೆಟ್ಟದ ಮೇಲೆ ತಂಗಿದ್ದನಂತೆ. ಸೀತಾಮಾತೆ ಬಾಯಾರಿಕೆಯಿಂದ ಬಳಲಿದಾಗ ನೀರು ಸಿಗುವುದಿಲ್ಲ. ಆಗ ಶ್ರೀರಾಮಚಂದ್ರ ಬತ್ತಳಿಕೆಯಿಂದ ಬಾಣ ಬಿಟ್ಟಾಗ ಬಂಡೆಯಿಂದ ನೀರು ಚಿಮುತ್ತದೆ. ಅದೇ ನೀರನ್ನು ರಾಮ- ಸೀತೆ- ಲಕ್ಷ್ಮಣರು ಕುಡಿದು ತಮ್ಮ ದಾಹ ನೀಗಿಸಿಕೊಳ್ಳುತ್ತಾರೆ. ನಂತರ ಮುಂದೆ ಸ್ವಲ್ಪ ದೂರ ಸಾಗಿದ ಬಳಿಕ ಅವರಿಗೆ ಶಿವಲಿಂಗ ಗೋಚರಿಸಿತು. ಅದನ್ನು ಪೂಜೆ ಮಾಡಿ ಲಿಂಗಾನುಗ್ರಹ ಪಡೆದರು.
ರಾಮ ಬಿಟ್ಟ ಬಾಣದಿಂದ ಬಂದ ನೀರು ಕಾಶಿಯಿಂದ ಬಂದಿದ್ದಂತೆ ! ಮುಂದೆ ಅದು ‘ಕಾಶಿತೀರ್ಥ’ ಎಂದಾಯಿತು. ಹಾಗೆಯೇ, ರಾಮ ನೆಲೆಸಿದ್ದರಿಂದ ಅಲ್ಲಿ ಲಿಂಗ ಪ್ರತ್ಯಕ್ಷವಾದ್ದರಿಂದ ಕ್ಷೇತ್ರಕ್ಕೆ ತೀರ್ಥರಾಮೇಶ್ವರ ಎಂಬ ಹೆಸರೂ ಬಂತು. ಈ ಕೊಳದಲ್ಲಿ ಮಿಂದರೆ ಪಾಪಗಳು ಪರಿಹಾರವಾಗುತ್ತವೆ ಎಂಬ ಪ್ರತೀತಿ ಇದೆ.
ಈ ಪ್ರದೇಶವನ್ನು ಆಳುತ್ತಿದ್ದ ಚಲುವರಂಗಪ್ಪರಾಯ ವಿಜಯನಗರ, ಆನೆಗೊಂದಿ ಅರಸರ ಸವಿನೆನಪಿಗಾಗಿ. ಊರಿನವರ ಸಹಕಾರದಿಂದ ದೇಗುಲವನ್ನು ಶಿಲೆಯಿಂದ ನಿರ್ಮಿಸಿದರಂತೆ. ಕಂಬಗಳ ಮೇಲ್ಚಾವಣಿಯಲ್ಲಿ ವಿಜಯನಗರ ಅರಸರ ಸಂಕೇತವಾಗಿ ಎರಡು ಆನೆಗಳಿವೆ. ಕಂಬ ಮತ್ತು ಗೋಡೆಯ ಮೇಲೆ ಮೃದಂಗ ಬಾರಿಸುವ ನಾಟ್ಯ ಸ್ತ್ರೀಯರು. ಮುಂದಿನ ದ್ವಾರದ ಬಾಗಿಲಿನಲ್ಲಿ ಗಜಲಕ್ಷಿ$¾ಯ ಚಿತ್ರವಿದೆ. ಒಳಾಂಗಣದಲ್ಲಿ ಬೃಹತ್ ಗಾತ್ರದ ನಾಲ್ಕು ಕಲ್ಲಿನ ಕಂಬಗಳಿವೆ. ಜಲಕನ್ಯೆಯರ ವಸ್ತ್ರಾಪಹರಣ ಮಾಡುತ್ತಿರುವ ಕೃಷ್ಣ, ಋಷಿ ಕನ್ಯೆ, ಕೆರಳಿದ ಹುಲಿ, ಆನೆಮುಖದ ಹಂಸ, ಸರ್ಪರಂಗೋಲಿ ಈ ದೇವಾಲಯದ ಅಂದ ಹೆಚ್ಚಿಸುತ್ತಿವೆ. ಹೊರಭಾಗದಲ್ಲಿ ಲಿಂಗಕ್ಕೆ ಹಸು ಹಾಲುಣಿಸುತ್ತಿರುವುದು ಜೋಡಿ ಆನೆ ಕಾಳಗ ಮತ್ತಿತರ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತವೆ.
ದೇವಸ್ಥಾನದ ಎಡಗಡೆ ಬೆಟ್ಟದ ಮೇಲಿಂದ ಬರುವ ಜಲಧಾರೆ ನಿರಂತರವಾಗಿ ಹರಿಯುತ್ತಿರುತ್ತದೆ. ಇದು ಕಾಶಿಯಿಂದ ಹರಿದು ಬರುತ್ತಿದೆ ಎನ್ನುವುದು ಬಹು ಕಾಲದ ನಂಬಿಕೆ. ಈ ನೀರು ಹರಿದು ಬರುವ ಸ್ಥಳದಲ್ಲಿ ಒಂದು ಚಿಕ್ಕ ಕೊಳ ಕಟ್ಟಿಸಲಾಗಿದೆ. ನೀರು ಕೊಳಕ್ಕೆ ಬೀಳುತ್ತದೆ. ಅಲ್ಲಿನ ಸಿಬ್ಬಂದಿಗಷ್ಟೇ ಕೊಳದಲ್ಲಿ ಇಳಿಯಲು ಅವಕಾಶ. ಬೇರೆಯವರಿಗೆ ಕೊಳದಲ್ಲಿ ಇಳಿಯಲು ಬಿಡುವುದಿಲ್ಲ.
ಈ ಕೊಳಕ್ಕೆ ಎಂಥ ಬೇಸಿಗೆ ಇದ್ದರೂ ಸಹ ನೀರು ಮಾತ್ರ ಬರುವುದು ನಿಲ್ಲುವುದಿಲ್ಲ. ಕೊಳದ ಮೇಲಾºಗದಲ್ಲಿ ಮೊಸಳೆ ಮೇಲೆ ಕುಳಿತ ಗಂಗಾಮಾತೆಯ ವಿಗ್ರಹ ನಿರ್ಮಾಣ ಮಾಡಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ.ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ತೀರ್ಥರಾಮೇಶ್ವರ ಪುಣ್ಯಕ್ಷೇತ್ರವಾಗಿಯೂ ಹೆಸರಾಗಿದೆ.
ಟಿ.ಶಿವಕುಮಾರ್