ತೀರ್ಥಹಳ್ಳಿ: ಮನುಷ್ಯರಿಗೆ ಭೂದಾಹ ಮಿತಿ ಮೀರುತ್ತಿದೆ. ಇಲ್ಲಿಯ ತನಕ ಭೂ ಒತ್ತುವರಿ ಪ್ರಕರಣಗಳನ್ನು ನೋಡುತ್ತಿದ್ದೆವು. ಆದರೆ ಈಗ ನದಿಯನ್ನೇ ಒತ್ತುವರಿ ಮಾಡಿದ ಪ್ರಕರಣ ಒಂದು ಮಲೆನಾಡಿನಲ್ಲಿ ಬೆಳಕಿಗೆ ಬಂದಿದೆ. ತಾಲೂಕಿನ ಹೆದ್ದೂರು, ಹೊಸಳ್ಳಿ ಗ್ರಾಮದಲ್ಲಿ ಪ್ರಭಾವಿಗಳು ತುಂಗಾ ನದಿ ಹರಿವಿನ ಜಾಗಕ್ಕೆ ಮಣ್ಣು ತುಂಬಿ ಆಕ್ರಮಿಸಿದ್ದು ಕಂಡು ಬಂದಿದೆ.
ಹೆದ್ದೂರು ಹೊಸಳ್ಳಿ ಗ್ರಾಮದಲ್ಲಿ ಹರಿಯುವ ತುಂಗಾನದಿ ಪಾತ್ರದ ಪಕ್ಕದಲ್ಲಿದ್ದ ದಲಿತ ಕುಟುಂಬಗಳ ಒಡೆತನದ ಭೂಪ್ರದೇಶವು ದಬ್ಟಾಳಿಕೆಗೆ ಬಲಿಯಾಗಿದೆ. ಈ ಭಾಗದಲ್ಲಿ ನಿರಂತರವಾಗಿ ತುಂಗಾನದಿ ಪಾತ್ರದಲ್ಲಿ ನೀರಿನ ಹರಿವು ಬದಲಾಗುವಂತಹ ರೀತಿಯಲ್ಲಿ ನದಿ ಹರಿವಿನ ಜಾಗವನ್ನು ಕಬಳಿಸಲಾಗಿದೆ. ಹೆದ್ದೂರು ಹೊಸಳ್ಳಿಯ ಸರ್ವೆ ನಂ. 146ರಲ್ಲಿ ತುಂಗಾನದಿ ಪಾತ್ರದ ಪ್ರದೇಶ ಒತ್ತುವರಿಯಾಗಿದೆ. ಈ ಜಾಗಕ್ಕೆ ಸಾವಿರಾರು ಸಾರಿ ಲೋಡು ಮಣ್ಣನ್ನು ತಂದು ನದಿ ಪಾತ್ರದ ಮರಳುಗಳ ಮೇಲೆ ಸುರಿದು ಜಾಗ ಒತ್ತುವರಿ ಮಾಡಿರುವ ಪ್ರಕರಣದ ಬಗ್ಗೆ ಅಲ್ಲಿನ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕೆಲವು ಪ್ರಭಾವಿ ರಾಜಕೀಯ ಬೆಂಬಲಿತ ವ್ಯಕ್ತಿಗಳ ದುರಾಸೆಗೆ ತುಂಗಾನದಿಯನ್ನೇ ಒತ್ತುವರಿ ಮಾಡಿದ ಬಗ್ಗೆ ಆ ಭಾಗದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಅಲ್ಲಿನ ಮುಂಡುವಳ್ಳಿ ಅರಣ್ಯ ಪ್ರದೇಶದ ಮಣ್ಣುಗಳನ್ನು ಅಗೆದು ಒತ್ತುವರಿ ಮಾಡಿದ ತುಂಗಾನದಿ ಪಾತ್ರಕ್ಕೆ ಸುರಿಯಲಾಗಿದೆ. ಈ ವಿಚಾರದ ಬಗ್ಗೆ ಗಮನಹರಿಸಬೇಕಾದ ಅರಣ್ಯ ಇಲಾಖೆ ಯಾಕೆ ಮೌನ ವಹಿಸಿದೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಇಲ್ಲಿನ ತುಂಗಾನದಿಯ ಒತ್ತುವರಿಯಿಂದ ನೀರಿನ ಹರಿವು ಬದಲಾಗುವ ಧಾರುಣ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಈ ಒತ್ತುವರಿಯಿಂದ ತುಂಗಾನದಿಯನ್ನು ಕಾಪಾಡುವವರು ಯಾರು ಎಂಬ ಪ್ರಶ್ನೆ ಗ್ರಾಮಸ್ಥರಿಂದ ಉದ್ಬವಾಗಿದ್ದು ಇದಕ್ಕೆ ಉತ್ತರಿಸದ ತಾಲೂಕು ಆಡಳಿತದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ತುಂಗಾನದಿ ಪಾತ್ರದಲ್ಲಿ ಸಾವಿರಾರು ಲೋಡು ಮಣ್ಣನ್ನು ತಂದು ಮರಳು ಹಾಸಿನ ಮೇಲೆ ಸುರಿಯಲಾಗಿದ್ದು ಜೊತೆಗೆ ರಾಶಿ ರಾಶಿ ಮಣ್ಣುಗಳನ್ನು ಸಮತಟ್ಟ ಮಾಡಲು ಸಂಗ್ರಹಿಸಲಾಗಿದೆ. ನದಿ ಪ್ರದೇಶದ ಸಂರಕ್ಷಿಸುವ ಕಂದಾಯ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಮೀನುಗಾರಿಕೆ ಇಲಾಖೆಯವರು ಈ ನದಿ ಒತ್ತುವರಿ ವಿಚಾರದ ಬಗ್ಗೆ ಉತ್ತರಿಸಬೇಕಾಗಿದೆ. ಈ ಭಾಗದಲ್ಲಿನ ಪರಿಸರ ಹಾನಿಯ ಕೃತ್ಯ ಕೆಲವು ದಿನಗಳ ಹಿಂದಿನಿಂದ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಮಾತ್ರ ಪ್ರಭಾವಿಗಳಿಗೆ ಮಣಿದು ಜಾಣ ಮೌನ ಪ್ರದರ್ಶಿಸಿರುವ ಬಗ್ಗೆ ಗ್ರಾಮಸ್ಥರಲ್ಲಿ ಅನುಮಾನ ಮೂಡಿದೆ.