Advertisement
ಪಂಪ್‌ಸೆಟ್‌ಗೆ ಬೇಕಿದೆ ಕಡಿವಾಣ: ತಾಲೂಕಿನ ಜೀವನದಿ ತುಂಗಾ ಮತ್ತು ಮಾಲತಿ ನದಿಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದ್ದು, ನದಿ ದಡದ ಪ್ರದೇಶಗಳಲ್ಲಿ ಸದ್ಯದ ಸ್ಥಿತಿ ಸಮಾಧಾನಕರವಾಗಿದೆ. ಈ ನದಿಗಳಿಗೆ ಹಾಕಿರುವ ಸಾವಿರಾರು ಕೃಷಿ ಪಂಪ್ ಸೆಟ್‌ಗಳು ಅಗತ್ಯಕ್ಕಿಂತ ಹೆಚ್ಚಾಗಿ ಬಳಕೆಯಾಗುತ್ತವೆ. ಇಂತಹ ಕೃಷಿ ಪಂಪ್‌ಗ್ಳಿಗೆ ನಿಯಂತ್ರಣ ಹಾಕಿದಲ್ಲಿ ಈ ನದಿಗಳನ್ನು ಅವಲಂಬಿಸಿರುವ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇಲ್ಲವೇ ಇಲ್ಲ. ಕೃಷಿ ಪಂಪ್‌ಗ್ಳಿಗೆ ಉಚಿತ ವಿದ್ಯುತ್ ನೀಡುತ್ತಿರುವ ಕಾರಣ ಹೆಚ್ಚಿನ ರೈತರು ಸರ್ಕಾರದ ಈ ಸವಲತ್ತನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತು ರೈತರಿಂದಲೇ ವ್ಯಕ್ತವಾಗುತ್ತಿದೆ. ಪಂಪ್ ಸೆಟ್‌ಗಳಿಗೆ ಆಟೋ ಸ್ಟಾರ್ಟರ್ ಬಳಸಿ ವಿದ್ಯುತ್ ಇರುವಷ್ಟು ಹೊತ್ತು ಅನಗತ್ಯವಾಗಿ ತೋಟಕ್ಕೆ ನೀರು ಹಾಯಿಸಲಾಗುತ್ತಿದೆ. ಅಲ್ಲದೆ ರಾತ್ರಿ ವೇಳೆ ವಿಪರೀತವಾಗಿ ನೀರು ಪೋಲಾಗುತ್ತಿರುತ್ತದೆ. ಇದರಿಂದ ಕಡುಬೇಸಿಗೆಯಲ್ಲಿ ನೀರಿನ ಕೊರತೆ ತಂದೊಡ್ಡಿದರೂ ಆಶ್ಚರ್ಯವಿಲ್ಲ.
Related Articles
Advertisement
ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆಜಾರಿಮಾಡಿದ್ದರೂ ಒಂಟಿಯಾಗಿರುವ ಪ್ರತಿ ಮನೆಗಳಿಗೆ ಪೈಪ್ ಅಳವಡಿಸಿ ನೀರನ್ನು ಒದಗಿಸಲು ಲಕ್ಷಾಂತರ ರೂ. ಅನುದಾನ ಬೇಕಾಗುತ್ತದೆ. ಇಂತಹ ನೂರಾರು ಮನೆಗಳಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟ ಎಂಬಂತಾಗಿದೆ.
ಕೊಳವೆ ಬಾವಿಗಳಲ್ಲಿ ಕ್ಲೋರೈಡ್ ಅಂಶದ ಸಮಸ್ಯೆ: ತಾಲೂಕಿನ ನೊಣಬೂರು ಹಾಗೂ ಅರಳಸುರುಳಿ ಗ್ರಾಪಂ ವ್ಯಾಪ್ತಿಯ ಕೆಲವೆಡೆ ಬೋರ್‌ವೆಲ್ ನೀರಿನಲ್ಲಿ ಕ್ಲೋರೈಡ್ ಅಂಶ ಕಂಡು ಬಂದಿದೆ. ಈ ಗ್ರಾಪಂ ವ್ಯಾಪ್ತಿಯ ಹುಲಿಸರ, ಮಲ್ಲೇಸರ ಮತ್ತು ಹೊಸಗದ್ದೆ ಈ ಭಾಗದಲ್ಲಿ ಈ ಸಮಸ್ಯೆ ಕಂಡು ಬಂದಿದ್ದು ಇಲ್ಲಿ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹೋಬಳಿಯಲ್ಲಿ ವಾಡಿಕೆಯ ಶೇ.31ಅಧಿ ಕ ಮಳೆ ಬಿದ್ದಿದ್ದರೂ ಕೆಲವೆಡೆ ನೀರಿನ ಸಮಸ್ಯೆ ಇದೆ.
ದುರ್ಬಳಕೆ ನಿಲ್ಲಲಿ: ನೀರಿನ ಮೂಲಗಳ ದುರ್ಬಳಕೆಯಾಗದೆ ಕ್ರಮಬದ್ಧವಾಗಿ ಬಳಸಿಕೊಂಡಲ್ಲಿ ಈ ವರ್ಷ ತಾಲೂಕಿನಲ್ಲಿ ನೀರಿಗೆ ಹಾಹಾಕಾರದ ಸ್ಥಿತಿ ಉಂಟಾಗದು. ಆದರೆ ಹಲವೆಡೆ ಕುಡಿಯುವ ನೀರಿನ ಬಾವಿಗಳಿಂದ ಕೆಲವು ಪ್ರಭಾವಿಗಳು ನೇರವಾಗಿ ಮತ್ತೆ ಕೆಲವರು ಅಂಡರ್ ಗ್ರೌಂಡ್ ಪೈಪ್‌ಲೈನ್ ಮೂಲಕ ಗುಟ್ಟಾಗಿ ಜಮೀನಿಗೆ ನೀರು ಹಾಯಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಜನಪ್ರತಿನಿ ಧಿಗಳಿಗೆ ಈ ವಿಚಾರ ತಿಳಿದಿದ್ದರೂ ಅವರು ಮೌನ ವಹಿಸುತ್ತಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಅಂತಹ ಪ್ರಕರಣಗಳನ್ನು ಗುರುತಿಸಿ ಬಿಗಿ ಕ್ರಮ ಕೈಗೊಳ್ಳುವುದು ಅತೀ ಅಗತ್ಯವಾಗಿದೆ ಇಲ್ಲದಿದ್ದಲ್ಲಿ ಕುಡಿಯುವ ನೀರಿನ ಸಮಸ್ಯೆ ತಪ್ಪಿದ್ದಲ್ಲ.
ಮಧ್ಯಾಹ್ನ ನೀರು ಕೊಡಿ: ಮೇಲಿನ ಕುರುವಳ್ಳಿ ಗ್ರಾಪಂನ ಮೇಲಿನ ಕುರುವಳ್ಳಿಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರಿದ್ದು ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಮನೆಗಳಿವೆ. ಕಳೆದ ಬೇಸಿಗೆಯಲ್ಲಿ ಇಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಹೆಚ್ಚಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಇಲ್ಲಿಯವರಲ್ಲಿ ಹೆಚ್ಚಿನವರು ಬಂಡೆ ಒಡೆಯುವ ಕೆಲಸವನ್ನೇ ತಮ್ಮ ಮೂಲ ಕಸುಬಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಬೇಸಿಗೆಯಲ್ಲಿ ತಾಪ ಹೆಚ್ಚಿರುವುದರಿಂದ ಮಧ್ಯಾಹ್ನ ಕೆಲಸ ಮಾಡದೆ ಬೆಳಗ್ಗೆ ಮತ್ತು ಸಂಜೆ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಇವರಿಗೆ ಮಧ್ಯಾಹ್ನದ ಸಮಯದಲ್ಲಿ ನೀರು ಪೂರೈಸಿದಲ್ಲಿ ಒಳ್ಳೆಯದು ಎನ್ನುತ್ತಾರೆ ಮೇಲಿನ ಕುರುವಳ್ಳಿಯ ಹಿರಿಯರಾದ ಮಂಜುನಾಥ್.
ಇದಲ್ಲದೆ ಕಟ್ಟೇಹಕ್ಕಲು-ಶೇಡ್ಗಾರು ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯಾಗದಂತೆ ಈಗಾಗಲೇ ಗ್ರಾಪಂನಿಂದ ತುರ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಪಟ್ಟಣದಲ್ಲಿ ಇಲ್ಲ ಸಮಸ್ಯೆ: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಮೂಲವಾದ ಕೆರೆ ಮತ್ತು ಬಾವಿಗಳಿದ್ದರೂ ಅದರ ನೀರು ಉಪಯೋಗಕ್ಕೆ ಯೋಗ್ಯವಿಲ್ಲ ವಾದ್ದರಿಂದ ಜನ ತುಂಗಾ ನದಿಯ ನೀರನ್ನೇ ಅವಲಂಬಿಸಿದ್ದಾರೆ.
ದಿನದ ಇಪ್ಪತ್ತನಾಲ್ಕು ಗಂಟೆಯೂ ನೀರು ಪೂರೈಕೆ ಮಾಡುತ್ತಿದ್ದು ಪಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದುವರೆಗೆ ತಲೆದೋರಿಲ್ಲ. ತುಂಗಾ ಸೇತುವೆ ಸಮೀಪ ಅತ್ಯಂತ ಆಳವಿರುತ್ತಿದ್ದ ನದಿಯಲ್ಲಿ ಈ ಬಾರಿ ಹೂಳು ತುಂಬಿದ್ದು ಬಂಡೆಗಳು ಕಾಣುವಂತಾಗಿದೆ.
ಶ್ರೀಕಾಂತ್ ವಿ. ನಾಯಕ್