ತೀರ್ಥಹಳ್ಳಿ: ತಾಲೂಕಿನ ಕೋಣಂದೂರಿನ ಹೃದಯ ಭಾಗದಲ್ಲಿರುವ ಕೋಟ್ಯಂತರ ರೂ. ಬೆಲೆ ಬಾಳುವ ಜಾಗದ ಭೂ ಪರಿವರ್ತನೆಗೆ ಶಿಫಾರಸ್ಸು ಮಾಡಿರುವ ತಹಶೀಲ್ದಾರ್ ಭಾಗ್ಯ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮಂಗಳವಾರ ನಡೆದ ತಾಪಂ ತ್ತೈಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆ ಆರಂಭವಾಗುತ್ತಿದ್ದಂತೆ ಸರ್ಕಾರಿ ಜಾಗವನ್ನು ಭೂ ಪರಿವರ್ತನೆಗೆ ಶಿಫಾರಸು ಮಾಡಿರುವ ತಹಶೀಲ್ದಾರ್ ಭಾಗ್ಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಕುಕ್ಕೆ ಪ್ರಶಾಂತ್ ಮತ್ತು ಅಪೂರ್ವ ಶರಧಿ ಪೂರ್ಣೇಶ್ ಅವರು ಸರ್ವೆ ನಂ. 186ರಲ್ಲಿ ಮಠದ ಹೆಸರಿನಲ್ಲಿರುವ ಭೂಮಿಯ ಬಗ್ಗೆ ಈಗಾಗಲೇ ಹಲವು ದೂರುಗಳಿದ್ದು ಯಾವುದೇ ಕಾರಣಕ್ಕೂ ಪರಬಾರೆ ಮಾಡಬಾರದು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಸೇರಬೇಕಾದ ಈ ಭೂಮಿಯ ಬಗ್ಗೆ ಲೋಕಾಯುಕ್ತದಲ್ಲೂ ಪ್ರಕರಣ ದಾಖಲಾಗಿದೆ. ನೇಕ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ವಿವಾದವಿದ್ದರೂ ಆ ಭೂ ಪರಿವರ್ತನೆಗೆ ಹೇಗೆ ಶಿಫಾರಸ್ಸು ಮಾಡಿದ್ದಾರೆ ಎಂದು ತಹಶೀಲ್ದಾರ್ ಭಾಗ್ಯ ಅವರನ್ನು ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಪ್ರಶ್ನಿಸಿದರು. ಶಾಸಕರ ಪ್ರಶ್ನೆಗೆ ಖಡಕ್ ಆಗಿಯೇ ಉತ್ತರಿಸಿದ ತಹಶೀಲ್ದಾರ್ ವಿರುದ್ಧ ಕೋಪಗೊಂಡ ಶಾಸಕರು ಸರ್ಕಾರದ ಆಸ್ತಿ ಕಾಪಾಡಬೇಕಾದ ನೀವೇ ಭೂ ಕಬಳಿಕೆದಾರರೊಂದಿಗೆ ಶಾಮೀಲಾಗಿದ್ದೀರಿ.
ಕಡತ ಪರಿಶೀಲಿಸದೇ ಭೂ ಪರಿವರ್ತನೆಗೆ ಅವಕಾಶ ನೀಡುವಂತಹ ಅಧಿಕಾರಿ ಈ ಸಭೆಯಲ್ಲಿ ಇರುವುದಕ್ಕೆ ಯೋಗ್ಯವಲ್ಲ. ನೀವು ಸಭೆಯಿಂದ ಹೊರನಡೆಯಿರಿ ಎಂದು ಏರು ದನಿಯಿಂದ ತಿಳಿಸಿದರು. ಈ ವೇಳೆ ಇಬ್ಬರ ನಡುವೆ ಸ್ವಲ್ಪ ಕಾಲ ಮಾತಿನ ಚಕಮಕಿಯೂ ನಡೆಯಿತು. ಮರಳು ಅಕ್ರಮಕ್ಕೆ ಅಧಿಕಾರಿಗಳೇ ಕಾರಣ: ತಾಲೂಕಿನಲ್ಲಿ ಮರಳು ಅಕ್ರಮ ಎಗ್ಗಿಲ್ಲದೆ ಸಾಗಿದೆ. ಬಡಪಾಯಿಗಳನ್ನು ಹಿಡಿದು ಶಿಕ್ಷಿಸಲಾಗುತ್ತಿದೆ. ಆದರೆ ಎಲ್‌ಪಿ ಲಾರಿಗಳಲ್ಲಿ ದೂರದ ಊರುಗಳಿಗೆ ಮರಳು ಸಾಗಿಸುವವರನ್ನು ಕೇಳುವವರೇ ಇಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಚಂದವಳ್ಳಿ ಸೋಮಶೇಖರ್ ದೂರಿದರು. ಮರಳು ಕ್ವಾರಿಗಳನ್ನು ಹರಾಜು ಮಾಡಿರುವುದು
ಅಧಿ ಕಾರಿಗಳ ಮರ್ಜಿಗಲ್ಲ. ಹರಾಜಾಗಿರುವ ಮರಳು ಕ್ವಾರಿಗಳನ್ನು ಕೂಡಲೇ ಆರಂಭಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಸೂಚಿಸಿದರು. ಹುಣಸವಳ್ಳಿ ಕ್ವಾರೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಕಾಯ್ದಿರಿಸಿದ್ದ ಮರಳನ್ನು ಸಾಗಿಸಲಾಗಿದೆ.
ಮರಳು ಕ್ವಾರೆಯಲ್ಲಿ ಅಕ್ರಮ ನಡೆಯುವುದಕ್ಕೆ ಅಧಿಕಾರಿಗಳೇ ಕಾರಣ. ಈ ಬಾರಿ ಅಂತಹ ಪ್ರಯತ್ನ ನಡೆದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಕೂಡಲೇ ಫ್ಲೈಯಿಂಗ್ ಸ್ಕ್ವ್ಯಾಡ್ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು. ಸಭೆಯಲ್ಲಿ ತಾಪಂ ಅಧ್ಯಕ್ಷೆ ನವಮಣಿ, ಉಪಾದ್ಯಕ್ಷೆ ಯಶೋಧ ಮಂಜುನಾಥ್, ಜಿಪಂ ಸದಸ್ಯ ಶ್ರೀನಿವಾಸ್ ಕಾಸರವಳ್ಳಿ ಮತ್ತಿತರರು ಇದ್ದರು.