Advertisement
ನಿರಂತರ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಪ್ರಮುಖ ನದಿಗಳಾದ ತುಂಗೆ, ಮಾಲತಿ ಹಾಗೂ ಕುಶಾವತಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ ಆಗುಂಬೆಯಲ್ಲಿ ದಾಖಲೆಯ ಮಳೆ 321.06 ಮಿಮೀ ಸುರಿದಿದ್ದು, ತೀರ್ಥಹಳ್ಳಿಯಲ್ಲಿ 149ಮಿಮೀ ಮಳೆಯಾಗಿದೆ.
Related Articles
Advertisement
ಪ್ರವಾಹ ಎದುರಿಸಲು ಸೂಚನೆ: ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದೆ. ತುಂಗಾನದಿಯು ಕೂಡ ಏರತೊಡಗಿದ್ದು, ನದಿ ಪಾತ್ರದ ವಾಸಿಗಳು ಜಾಗೃತರಾಗಿರುವಂತೆ ಶಾಸಕ ಅರಗ ಜ್ಞಾನೇಂದ್ರ ವಿನಂತಿಸಿದ್ದಾರೆ. ಹೊಳೆ, ಹಳ್ಳಕೊಳ್ಳ, ಕಿರು ಸೇತುವೆ ಹಾಗೂ ಕಾಲುಸಂಕಗಳ ಮೂಲಕ ಓಡಾಡುವ ಶಾಲಾ ಮಕ್ಕಳು ಹಾಗೂ ಪೋಷಕರು ಎಚ್ಚರಿಕೆ ವಹಿಸಬೇಕು. ಕೂಡಲೇ ತಾಲೂಕು ಆಡಳಿತದ ತಹಶೀಲ್ದಾರ್, ತಾ.ಪಂ ಇಒ, ಪೊಲೀಸ್, ಮೆಸ್ಕಾಂ, ಅರಣ್ಯ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ನೌಕರರು ಕ್ಷೇತ್ರದಲ್ಲಿಯೇ ಇರಬೇಕು ಎಂದು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಭೇಟಿ; ಸಾಂತ್ವನತೀರ್ಥಹಳ್ಳಿ: ತಾಲೂಕಿನ ಕನ್ನಂಗಿ ಸಮೀಪ ಭಾರೀ ಮಳೆಗೆ ಧರೆ ಕುಸಿದು ಮೃತಪಟ್ಟ ರೈತ ರಮೇಶ್ ಅವರ ಮೃತದೇಹವನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಡಿಸಿ ಕೆ.ಎ. ದಯಾನಂದ ಪಟ್ಟಣದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆ ದಿಢೀರ್ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಮೃತ ರೈತನ ಕುಟುಂಬದವರಿಗೆ ಸಾಂತ್ವನ ಹೇಳಿ, ಸರ್ಕಾರದ ವತಿಯಿಂದ ಪ್ರಕೃತಿ ವಿಕೋಪ ಪರಿಹಾರದಡಿ ರೂ.5.ಲಕ್ಷ ಪರಿಹಾರ ವಿತರಿಸುವುದಾಗಿ ತಿಳಿಸಿದರು. ನಂತರ ಆಸ್ಪತ್ರೆಯ ಮೂಲ ಸೌಕರ್ಯಗಳ ಕುರಿತು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಜಿಲ್ಲಾಧಿಕಾರಿಗಳು ಸೋಮವಾರ ಪಟ್ಟಣದ ಸಹ್ಯಾದ್ರಿ ಶಾಲೆಯ ಕಾಂಪೌಂಡ್ ಮೇಲೆ ಭಾರೀ ಮರ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.