Advertisement

ಮಂಗಗಳ ಹಾವಳಿ ತಡೆಗೆ ಹುಲಿಯಾದ ನಾಯಿ!

01:36 PM Nov 28, 2019 | Naveen |

„ರಾಂಚಂದ್ರ ಕೊಪ್ಪಲು
ತೀರ್ಥಹಳ್ಳಿ:
ಮಲೆನಾಡಿನಲ್ಲಿನ ಕೃಷಿಕರಿಗೆ ತಮ್ಮ ತೋಟ-ಗದ್ದೆಗಳಿಗೆ ದಾಳಿ ಇಡುತ್ತಿರುವ ಮಂಗಗಳು ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ಬೇಸತ್ತಿದ್ದು, ತಾವು ಬೆಳೆದ ಬೆಳೆಗಳನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ತಮ್ಮ ಮನೆಯ ಸಾಕು ನಾಯಿಗೆ ಹುಲಿವೇಷವನ್ನು ಹಾಕಿ ಮಂಗಗಳನ್ನೇ ಮಂಗ ಮಾಡಲು ಕೃಷಿಕರು ತಂತ್ರಗಾರಿಕೆ ನಡೆಸುತ್ತಿದ್ದಾರೆ.

Advertisement

ಮಂಗಗಳ ಹಾವಳಿಯಿಂದ ತಾಲೂಕಿನಾದ್ಯಂತ ಅಡಕೆ ಬೆಳೆಯ ಪ್ರಮಾಣ ಇಳಿಮುಖವಾಗುತ್ತಿದೆ. ರೈತರು ಮಂಗಗಳನ್ನು ಹೆದರಿಸಲು ಕೋವಿಯೊಂದಿಗೆ ಕಾವಲು, ಪಟಾಕಿ ಸಿಡಿಸಿದರೂ ಮಂಗಗಳ ಉಪಟಳ ಕಡಿಮೆಯಾಗಿಲ್ಲ. ತಾಲೂಕಿನ ಅರಳಾಪುರ ಗ್ರಾಮದ ಹಂಗಾರಕೊಡಿಗೆಯ ಕೃಷಿಕ ಎಚ್‌. ಎನ್‌. ನಾಗಭೂಷಣ್‌ ಮಂಗಗಳ ಹಾವಳಿಯನ್ನು ತಡೆಯಲು ತಮ್ಮ ಸಾಕು ನಾಯಿಗೆ ಹುಲಿಯ ಬಣ್ಣ ಬಳಿದು ತೋಟದಲ್ಲಿ ಹಾಗೂ ಮನೆಯ ಸಮೀಪ ನಾಯಿಯನ್ನು ಕಟ್ಟುವ ತಂತ್ರಗಾರಿಕೆ ತೋರಿದ್ದಾರೆ.

ಕಳೆದ ಹಲವು ವರ್ಷಗಳಿಂದ ತಾಲೂಕಿನ ಪ್ರಮುಖ ಬೆಳೆಯಾದ ಅಡಕೆ ಕಾಪಾಡಿಕೊಳ್ಳುವ ಸಂಕಷ್ಟ ಅಡಕೆ ಬೆಳೆಗಾರಾರಿಗೆ ಎದುರಾಗಿದೆ. ಮಳೆಗಾಲದಲ್ಲಿ ಅಡಕೆಗೆ ಅಂಟುವ ಕೊಳೆರೋಗದ ಸಮಸ್ಯೆಯಾದರೆ ಉಳಿದಂತೆ ವಿಪರೀತ ಮಂಗಗಳ ಹಾವಳಿಯಿಂದ ರೈತರು ಬೇಸತ್ತಿದ್ದಾರೆ. ರಾತ್ರಿ ಸಮಯದಲ್ಲಿ ಕಾಡು ಪ್ರಾಣಿಗಳಾದ ಕಾಡುಕೋಣ, ಕಾಡುಹಂದಿಗಳ ಹಾವಳಿ ಹೆಚ್ಚಾಗುತ್ತಲಿದ್ದು, ರೈತರ ಸಮಸ್ಯೆ ಯಾರಿಗೂ ಹೇಳಂತಾಗಿದೆ.

ಅಡಕೆ ತೋಟಗಳಿಗೆ ಕಳೆದ 2 ತಿಂಗಳಿಂದ ಸತತವಾಗಿ ಮಂಗಗಳ ವಿಪರೀತ ದಾಳಿ ಹೆಚ್ಚಾಗುತ್ತಲೆ ಇದೆ. ಪಕ್ಕದ ತಾಲೂಕಿನಲ್ಲಿ ಈಗಾಗಲೆ ಸರ್ಕಾರದ ವತಿಯಿಂದ ಮಂಕಿ ಪಾರ್ಕ್‌ ಸ್ಥಾಪಿಸಲು ಚಿಂತನೆ ನಡೆಸಿದ್ದು, ಇದರಿಂದ ರೈತರಿಗೆ ಯಾವ ರೀತಿ ಉಪಯೋಗವಾಗಲಿದೆ ಎಂಬುದರ ಬಗ್ಗೆ, ಕೃಷಿಕರಲ್ಲಿ ಜಿಜ್ಞಾಸೆ ಉಂಟಾಗಿದೆ.  ಒಟ್ಟಾರೆ ತಾಲೂಕಿನ ಕೃಷಿಕರಿಗೆ ಮಂಗಗಳ ಹಾವಳಿ ಕಿರಿಕಿರಿಯಾಗಿದ್ದು, ಏನು ಮಾಡಬೇಕೆಂಬ ಚಿಂತೆಯಲ್ಲಿ ಕೃಷಿ ಬದುಕಲ್ಲಿ ಸಾಗುವಂತಾಗಿದೆ.

ಮಂಗಗಳನ್ನು ಹಿಡಿದರೆ ಅರಣ್ಯ ಇಲಾಖೆಯವರ ಭಯ. ಹಾಗಾಗಿ ಈ ಮಂಗಗಳ ಹಾವಳಿಯ ಸಮಸ್ಯೆ ಹೆಚ್ಚಾಗುತ್ತಲೆ ಇದ್ದು, ತಾವು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.

Advertisement

ಮಂಗಗಳ ಉಪಟಳ ತಾಳಲಾರದೆ ನಾನು ಸಾಕಿದ ನಾಯಿಗೆ ಹುಲಿವೇಷ ಹಾಕಿದ ಮೇಲೆ ಮಂಗಗಳ ಹಾವಳಿ ನಿಯಂತ್ರಿಸಬಹುದೆಂಬ ನಂಬಿಕೆ ಇತ್ತು. ಆದರೆ ಕೆಲವು ದಿನ ಹುಲಿವೇಷದ ನಾಯಿಗೆ ಹೆದರಿದ ಮಂಗಗಳು ಮತ್ತೆ ಕಾಟ ಆರಂಭಿಸಿವೆ. ಈ ಸಮಸ್ಯೆಗೆ ಎಂದು ಪರಿಹಾರ ಎಂಬುದು ತೋಚದಂತಾಗಿದೆ.
.ಎಚ್‌.ಎನ್‌. ನಾಗಭೂಷಣ್‌,
 ಅಡಕೆ ಬೆಳೆಗಾರರು

Advertisement

Udayavani is now on Telegram. Click here to join our channel and stay updated with the latest news.

Next