ತೀರ್ಥಹಳ್ಳಿ: ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ವ್ಯಾಪ್ತಿಗೆ ಸೇರುವ ಗ್ರಂಥಾಲಯಗಳು ಓದುಗರ ಕೊರತೆಯಿಂದ ಬಳಲುತ್ತಿವೆ.
ಸುಸಜ್ಜಿತ ಕಟ್ಟಡ ಹಾಗೂ ಪುಸ್ತಕಗಳಿದ್ದರೂ ಸಹ ಇಂದಿನ ಪೀಳಿಗೆಯವರು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ಇಂದಿನ ಯುವಕರು, ಮಕ್ಕಳು ಹೆಚ್ಚು ಸಾಮಾಜಿಕ ಜಾಲತಾಣದ ಮೊರೆ ಹೋಗುತ್ತಿದ್ದು, ತಮ್ಮ ಊರಿನಲ್ಲಿ ಗ್ರಂಥಾಲಯ ಇದೆ ಎಂಬುದನ್ನೇ ಮರೆತಿರುವುದು ವಿಷಾದನೀಯ.
ತಾಲೂಕಿನ ಕೋಣಂದೂರು ಹಾಗೂ ಮೇಲಿನಕುರುವಳ್ಳಿಯ ಗ್ರಾಪಂ ವ್ಯಾಪ್ತಿಗೆ ಸೇರಿದ ಈ ಎರಡೂ ಗ್ರಂಥಾಲಯಗಳು 2017ರಲ್ಲಿ ಆರಂಭಗೊಂಡಿದೆ.
ಕೋಣಂದೂರು ಗ್ರಂಥಾಲಯ: ತಾಲೂಕಿನ ಕೋಣಂದೂರು ಗ್ರಾಪಂ ವ್ಯಾಪ್ತಿಗೆ ಬರುವ ಈ ಗ್ರಂಥಾಲಯ ಕಳೆದ ತಿಂಗಳು ರೂ.15 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡದೊಂದಿಗೆ ಉದ್ಘಾಟನೆಗೊಂಡಿದ್ದು ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದೆ. ಆದರೆ ಓದುಗರು ಮಾತ್ರ ಬೆರಳೆಣಿಕೆಯಷ್ಟು ಇದ್ದಾರೆ. ಈ ಗ್ರಂಥಾಲಯದಲ್ಲಿ 3650 ಪುಸ್ತಕಗಳಿವೆ. ಇದಲ್ಲದೇ ಗ್ರಂಥಾಲಯಕ್ಕೆ ಒಂದು ರಾಜ್ಯ ಮಟ್ಟದ ದಿನಪತ್ರಿಕೆ ಹಾಗೂ 3-4 ವಾರಪತ್ರಿಕೆಗಳು ಲಭ್ಯವಾಗಲಿವೆ.
ಪತ್ರಿಕೆಗಳಿಗೆ ತಿಂಗಳಿಗೆ ರೂ.400-00 ಮೀಸಲಿಟ್ಟಿದ್ದು, ಆ ಹಣದಲ್ಲಿಯೇ ಬೇಕಾದ ಪತ್ರಿಕೆಗಳನ್ನು ತರಿಸಿಕೊಳ್ಳುವ ಸ್ಥಿತಿ ಗ್ರಂಥಾಲಯಕ್ಕೆ ಒದಗಿದೆ. ಇಲ್ಲಿಯ ತನಕ ಜಿಲ್ಲಾ ಕೇಂದ್ರಾಲಯದಿಂದ ಇಲ್ಲಿ ಕಾರ್ಯ ನಿರ್ವಹಿಸುವ ಗ್ರಂಥಪಾಲಕರಿಗೆ ತಿಂಗಳ ವೇತನ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಪಂ ಮೂಲಕ ಇವರಿಗೆ ವೇತನ ನೀಡುತ್ತಾರೆ ಎಂದು ಅಲ್ಲಿನ ಗ್ರಂಥಪಾಲಕಿ ಲಕ್ಷ್ಮೀ ಹೇಳುತ್ತಾರೆ.
ಮೇಲಿನಕುರುವಳ್ಳಿ ಗ್ರಂಥಾಲಯ: ತಾಲೂಕಿನ ಮೇಲಿನಕುರುವಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಈ ಗ್ರಂಥಾಲಯವು ಸೂಕ್ತ ಕಟ್ಟಡದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇಲ್ಲಿಯೂ ಕೂಡ ಓದುಗರ ಕೊರತೆ ಇದೆ. ಈ ಗ್ರಂಥಾಲಯದಲ್ಲಿ 1800 ಪುಸ್ತಕಗಳಿದ್ದು, 2 ರಾಜ್ಯಮಟ್ಟದ ದಿನಪತ್ರಿಕೆ ಹಾಗೂ 3 ವಾರಪತ್ರಿಕೆಗಳು ಲಭ್ಯವಿದೆ.
ಇಲ್ಲಿಯ ತನಕ ಗ್ರಂಥಾಲಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ವೇತನ ಹಾಗೂ ಬೇರೆ ವಿಚಾರಗಳ ಬಗ್ಗೆ ಇಲಾಖೆ ಸ್ಪಂದಿಸುತ್ತಿದೆ ಎಂದು ಗ್ರಂಥಪಾಲಕಿ ಗಾಯತ್ರಿ ಎನ್. ತಿಳಿಸಿದ್ದಾರೆ.