Advertisement

ಮಳೆಯಲ್ಲಿ ಹರಿದು ಹೋಯ್ತು ತರಕಾರಿ

10:59 AM Aug 31, 2017 | Team Udayavani |

ಅಫಜಲಪುರ: ಕುಂಭದ್ರೋಣ ಮಳೆ ಪ್ರಭಾವದಿಂದ ಪಟ್ಟಣದಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯಿಂದ
ಸೋಮವಾರದ ಸಂತೆಯಲ್ಲಿದ್ದ ತರಕಾರಿ ಹರಿದು ಹೋಗಿ ವ್ಯಾಪಾರಿಗಳು ಕಂಗಾಲಾಗುವಂತೆ ಆಗಿತ್ತು.

Advertisement

ಪಟ್ಟಣದ ಮಳೇಂದ್ರ ಮಠದಿಂದ ಚೌಡಿ, ನಿಚೆಗಲ್ಲಿ ಹಾಗೂ ಹಳೆ ಪುರಸಭೆ ಕಚೇರಿ ವರೆಗೂ ಕಿರಿದಾದ ರಸ್ತೆಗಳಲ್ಲಿ ವಾರದ ಸಂತೆ ನೆರೆಯುತ್ತದೆ. ಈ ರಸ್ತೆಗಳಿಗೆ ದೊಡ್ಡದಾದ ಚರಂಡಿ ವ್ಯವಸ್ಥೆಯೂ ಇಲ್ಲ, ಜನಸಾಮಾನ್ಯರು ಓಡಾಡಲು ಹೆಚ್ಚಿನ ಸ್ಥಳಾವಕಾಶವೂ ಇಲ್ಲ. ಹೀಗಾಗಿ ಈ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ಜಾಗವಿಲ್ಲದಂತಾಗಿದೆ.

ಸೋಮವಾರ ಸುರಿದ ಮಳೆಗೆ ವಾರದ ಸಂತೆಯಲ್ಲಿ ಮಾರಾಟಕ್ಕೆ ತಂದಿದ್ದ ತರಕಾರಿ ಸಂಪೂರ್ಣ ಮಳೆ
ನೀರಲ್ಲಿ ಕೊಚ್ಚಿ ಹೋಯಿತು. ಬೀದಿ ವ್ಯಾಪಾರಿಗಳು, ಸುತ್ತಮುತ್ತಲಿನ ಗ್ರಾಮಗಳ ಸಣ್ಣ ರೈತರು ಇದರಿಂದ
ಸಂಕಷ್ಟ ಅನುಭವಿಸುವಂತೆ ಆಯಿತು. ಪಟ್ಟಣದ ನಿವಾಸಿಗಳು, ಅಕ್ಕಪಕ್ಕದ ಗ್ರಾಮಗಳ ಜನರು ತರಕಾರಿಗಳನ್ನು ಕೊಂಡು ಹೋಗಬೇಕಾಗಿತ್ತು. ಆದರೆ ಪಟ್ಟಣದ ಕಿರಿದಾದ ರಸ್ತೆಗಳಲ್ಲಿ ಹರಿದ ಮಳೆ ನೀರಲ್ಲಿ ತರಕಾರಿಗಳು ಕೊಚ್ಚಿಕೊಂಡು ಹೋಗುವುದನ್ನು ಕಂಡು ವ್ಯಾಪಾರಿಗಳು ಮರುಗಿದರೆ, ಗ್ರಾಹಕರು ಪರದಾಡುವಂತೆ ಆಗಿತ್ತು.

ಸ್ಥಳಾಂತರ ಆಗದ ವಾರದ ಸಂತೆ: ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿರುವ ಖಾಯಂ ವಾರದ ಸಂತೆಕಟ್ಟೆ ನಿರ್ಮಾಣವಾಗಿ ವರ್ಷಗಳೇ ಗತಿಸಿವೆ. ಈಗ ಪುನಃ ವಾರದ ಸಂತೆ ಕಟ್ಟೆಯಲ್ಲಿ ಜಾಲಿ ಕಂಟಿ ಬೆಳೆದು ಹಾಳಾಗುತ್ತಿದೆ. ಆದರೂ ವಾರದ ಸಂತೆಯನ್ನು ಎಪಿಎಂಸಿ ಯಾರ್ಡ್‌ನಲ್ಲಿರುವ ವಾರದ ಸಂತೆ ಕಟ್ಟೆಗೆ ಸ್ಥಳಾಂತರಿಸಲು
ಸಂಬಂಧಪಟ್ಟವರು ಮುಂದಾಗುತ್ತಿಲ್ಲ. ಆರೋಪ: ಜೆಡಿಎಸ್‌ ಪಕ್ಷದ ವತಿಯಿಂದ ರೈತರೊಡನೆ ಸೇರಿ ವಾರದ ಸಂತೆಯನ್ನು ಎಪಿಎಂಸಿ ಯಾರ್ಡ್‌ ನಲ್ಲಿರುವ ಖಾಯಂ ಸಂತೆ ಕಟ್ಟೆಗೆ ಸ್ಥಳಾಂತರಿಸಬೇಕೆಂದು ಅನೇಕ ಬಾರಿ ಸಂಬಂಧಪಟ್ಟವರಿಗೆ ಮನವಿ ನೀಡಿದ್ದೇವೆ, ಹೋರಾಟಗಳು ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಕುಮಾರ ಬಡದಾಳ ಆರೋಪಿಸಿದ್ದಾರೆ. ನಾವು ನೀರಿನ ಕೊರತೆಯಲ್ಲೂ ಕಷ್ಟ ಪಟ್ಟು ತರಕಾರಿ ಬೆಳೆದು ಪಟ್ಟಣಕ್ಕೆ ಮಾರಾಟಕ್ಕೆ ತಂದರೆ ಮಳೆಯು ನಮ್ಮೊಂದಿಗೆ ಆಟವಾಡಿದಂತಾಯ್ತು. ಮಳೆ ನೀರಲ್ಲಿ ನಾವು ಕಷ್ಟ ಪಟ್ಟು ಬೆಳೆದ ತರಕಾರಿ ಕೊಚ್ಚಿ ಹೋಗುವಾಗ ನಮ್ಮ ಜೀವ ಹೋದಂತಾಯ್ತು.

ಮಲ್ಲಿಕಾರ್ಜುನ ಹಿರೇಮಠ

Advertisement
Advertisement

Udayavani is now on Telegram. Click here to join our channel and stay updated with the latest news.

Next