Advertisement

ಪ್ರಸ್ತಾವನೆಯಲ್ಲಿಯೇ ಉಳಿದ ಕಡಬ ಇಂದಿರಾ ಕ್ಯಾಂಟೀನ್‌

02:40 PM Jun 18, 2024 | Team Udayavani |

ಕಡಬ: ತಾಲೂಕು ಕೇಂದ್ರ ಕಡಬದಲ್ಲಿ ಆರಂಭಗೊಳ್ಳಬೇಕಿದ್ದ ಬಹು ನಿರೀಕ್ಷೆಯ ಇಂದಿರಾ ಕ್ಯಾಂಟೀನ್‌ ಸೌಲಭ್ಯ ಪ್ರಸ್ತಾವನೆಗೇ ಸೀಮಿತವಾಗಿರುವುದು ಸ್ಥಳೀಯ ಜನರ ನಿರಾಸೆಗೆ ಕಾರಣವಾಗಿದೆ. ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಕಡಬವೂ ಸೇರಿ ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್‌ಗಳು ಕಾರ್ಯಾರಂಭಿಸಲಿವೆ ಎಂದು ಪ್ರಕಟಿಸಲಾಗಿತ್ತು.

Advertisement

ಕಡಬ ತಾಲೂಕು ಆಡಳಿತ ಸೌಧದ ಬಳಿ ಎಪಿಎಂಸಿ ಪ್ರಾಂಗಣಕ್ಕೆ ತಾಗಿಕೊಂಡಂತೆ ಇಂದಿರಾ ಕ್ಯಾಂಟೀನ್‌ಗೆ ನಿಗದಿಪಡಿಸಿರುವ 5.5 ಸೆಂಟ್ಸ್‌ ಜಮೀನು ಜಮೀನು ಹಾಗೆಯೇ ಖಾಲಿ ಬಿದ್ದಿದೆ. ಕ್ಯಾಂಟೀನ್‌ ಆರಂಭಿಸಲು ಉದ್ದೇಶಿಸಿರುವ ಜಾಗದ ಆಸು ಪಾಸಿನಲ್ಲಿಯೇ ತಾಲೂಕು ಕಚೇರಿ ಹಾಗೂ ಎಪಿಎಂಸಿ ಪ್ರಾಂಗಣ ಇದ್ದು, ಮುಂದೆ ನ್ಯಾಯಾಲಯ, ಉಪ ನೋಂದಣಾಧಿಕಾರಿಗಳ ಕಚೇರಿ ಗಳೂ
ಕೂಡ ಅದೇ ಪರಿಸರದಲ್ಲಿ ಆರಂಭಗೊಳ್ಳಲಿರುವುದರಿಂದ ಆ ಪ್ರದೇಶ ಜನನಿಬಿಡವಾಗಲಿದೆ. ಅದೇ ಕಾರಣಕ್ಕೆ ಇಂದಿರಾ
ಕ್ಯಾಂಟೀನ್‌ ಅಲ್ಲೇ ತೆರೆಯುವುದು ಸೂಕ್ತ ಎಂದು ನಿರ್ಧರಿಸಲಾಗಿದೆ.

ಶೀಘ್ರ ಆರಂಭಿಸಲು ಆಗ್ರಹ
ಬಡವರ ಜೇಬಿಗೆ ಹೊರೆಯಾಗದಂತೆ ಹಸಿವನ್ನು ತಣಿಸುವ ಇಂದಿರಾ ಕ್ಯಾಂಟೀನ್‌ ಕಡಬದಲ್ಲಿ ಶೀಘ್ರ ತೆರೆಯಲಿ ಎನ್ನುವುದು ಸ್ಥಳೀಯ ಜನ ಆಗ್ರಹ. ತಾಲೂಕು ಕೇಂದ್ರ ಕಡಬಕ್ಕೆ ತಾಲೂಕು ವ್ಯಾಪ್ತಿಯ 42 ಗ್ರಾಮಗಳ ಜನರು ಪ್ರತಿನಿತ್ಯ ತಾಲೂಕು ಕಚೇರಿ ಸೇರಿದಂತೆ ವಿವಿಧ ಕೆಲಸಗಳಿಗೆ ಭೇಟಿ ನೀಡುತ್ತಾರೆ.

ಕಡಬದಲ್ಲಿ ತಾಲೂಕು ಕಚೇರಿಯ ಬಳಿಯೇ ಇಂದಿರಾ ಕ್ಯಾಂಟೀನ್‌ ತೆರೆಯಲು ಉದ್ದೇಶಿಸಿರುವುದರಿಂದ ಬೇರೆ ಬೇರೆ ಗ್ರಾಮಗಳಿಂದ ಕಚೇರಿ ಕೆಲಸಗಳಿಗಾಗಿ ಆಗಮಿಸುವ ಜನರಿಗೆ ಅನುಕೂಲವಾಗಲಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರಾಜಕೀಯ ನಾಯಕರು ಈ ಕುರಿತು ಮುತುವರ್ಜಿ ವಹಿಸಿ ಕಡಬದಲ್ಲಿ ಇಂದಿರಾ ಕ್ಯಾಂಟೀನ್‌ ಶೀಘ್ರ ಕಾರ್ಯಾರಂಭಿಸುವಲ್ಲಿ ಪ್ರಯತ್ನಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಮಂಜೂರಾತಿ ದೊರೆಯಬೇಕಷ್ಟೇ
ಇಂದಿರಾ ಕ್ಯಾಂಟೀನ್‌ ಅನ್ನು ಪ್ರತೀ ತಾಲೂಕು ಕೇಂದ್ರಗಳಲ್ಲಿ ಆರಂಭಿಸಲು ಸರಕಾರ ನಿರ್ಧರಿಸಿರುವುದರಿಂದ ಕಡಬ ಕೂಡಾ ಆಯ್ಕೆಯಾಗಿದೆ. ಈ ಬಗ್ಗೆ ಸ್ಥಳ ನಿಗದಿ ಮಾಡಿ, ಪ್ರಾದೇಶಿಕ ಆಹಾರಗಳ ಪಟ್ಟಿ ತಯಾರಿಸಿ ಸರಕಾರಕ್ಕೆ ವರದಿ ನೀಡಲಾಗಿದೆ.
ಮಂಜೂರಾತಿ ಇನ್ನಷ್ಟೇ ಆಗಬೇಕಿದೆ.

Advertisement

-ಲೀಲಾವತಿ ಇ.,
ಮುಖ್ಯಾಧಿಕಾರಿ, ಪ. ಪಂ.ಕಡಬ.

Advertisement

Udayavani is now on Telegram. Click here to join our channel and stay updated with the latest news.

Next