ಕೊಪ್ಪಳ : ಟಿಪ್ಪು ಚರಿತ್ರೆಯ ವಿಷಯವನ್ನು ಪಠ್ಯದಿಂದ ತೆಗೆದು ಹಾಕುವ ವಿಚಾರ ಬಗ್ಗೆ ಸಾರ್ವಜನಿಕ ಚರ್ಚೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜರೋಹಣ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಶಿಕ್ಷಣ ಸಚಿವರು ಟಿಪ್ಪು ಪಠ್ಯ ಕುರಿತು ಸಮಿತಿಗೆ ವರದಿ ಕೇಳಿದ್ದಾರೆ. ಸಾರ್ವಜನಿಕರ ಅಭಿಪ್ರಾಯ, ಅಹವಾಲು ಸಂಗ್ರಹಿಸಿ ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಎಂದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ನಮ್ಮ ಪಕ್ಷದ ಹಿರಿಯ ಶಾಸಕರು. ಗುರುಗಳ ಸ್ಥಾನದಲ್ಲಿದ್ದಾರೆ. ಅವರು ಏನು ಹೇಳಿದರೂ ನಮಗೆ ಆಶೀರ್ವಾದ ಇದ್ದಂತೆ ಎಂದು ಟಾಂಗ್ ನೀಡಿದರು. ಪಶ್ಚಿಮ ಮಹಾರಾಷ್ಟ್ರದ ಆರು ಜಿಲ್ಲೆಗಳಿಗೆ ನಾನು ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದು, ಅಲ್ಲೆಲ್ಲ ಬಿಜೆಪಿ ಉತ್ತಮ ಮತ ಪಡೆದಿದೆ. ಸರ್ಕಾರ ರಚನೆಯಲ್ಲೂ ಈ ಕ್ಷೇತ್ರಗಳು ಪ್ರಮುಖ ಪಾತ್ರವಹಿಸಿವೆ ಎಂದು ತಮ್ಮ ಉಸ್ತುವಾರಿ ನಿಭಾಯಿಸಿದ ಬಗ್ಗೆ ಸಮರ್ಥಿಸಿಕೊಂಡರು.
ಸಚಿವ ಸಂಪುಟದಲ್ಲಿ ಕೃಷಿ ಇಲಾಖೆಗೆ ನೂರು ಕೋಟಿ ರೂ. ಅನುದಾನ ನೀಡಲಾಗಿದ್ದು ,ಇದರಲ್ಲಿ ಕೊಪ್ಪಳಕ್ಕೆ ೨೪ ಕೋಟಿ ರೂ. ನೀಡಲಾಗಿದೆ ಎಂದರು