ದೇವನಹಳ್ಳಿ: ಟಿಪ್ಪುಸುಲ್ತಾನ್ ಚರಿತ್ರೆಯನ್ನು ತಿಳಿದುಕೊಂಡು ಮಾತನಾಡಬೇಕು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಟಿಪ್ಪುಸುಲ್ತಾನ್ ತಳಪಾಯ ಹಾಕಿದವರು. ಉತ್ತಮ ಆಳ್ವಿಕೆ ಮಾಡಿದ್ದಾರೆ. ಕೆಲವರು ಟಿಪ್ಪುಸುಲ್ತಾನನ್ನು ವಿರೋಧಿಸುತ್ತಾರೆ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಹೇಳಿದರು. ಪಟ್ಟಣದ ಟಿಪ್ಪುಸುಲ್ತಾನ್ ರಸ್ತೆಯಲ್ಲಿರುವ ಟಿಪ್ಪು ಸುಲ್ತಾನ್ ಪ್ರತಿಮೆ ಹಾಗೂ ಟಿಪ್ಪುಸುಲ್ತಾನ್ ಜನ್ಮಸ್ಥಳದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಹಮ್ಮಿಕೊಂಡಿದ್ದ ಟಿಪ್ಪು ಜಯಂತಿ ಅಂಗವಾಗಿ ಅವರ ಜನ್ಮಸ್ಥಳಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಜಯಂತಿ ಆಚರಣೆ ಮಾಡಲು ನಿರ್ಧಾರ ತೆಗೆದುಕೊಂಡಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದನಂತರ ಜಯಂತಿ ರದ್ದು ಮಾಡಿದೆ. ರದ್ದು ಮಾಡಿದರೂ ಸಹ ರಾಜ್ಯಾದ್ಯಂತ ಎಲ್ಲೆಡೆ ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ. ಟಿಪ್ಪು ಹಾಗೂ ಬ್ರಿಟಿಷರ ನಡುವೆ ನಡೆದ ಆಂಗ್ಲ ಮೈಸೂರು ಯುದ್ಧಗಳೇ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯಾಗಿದೆ. ದೇಶಭಕ್ತನಷ್ಟೇ ಅಲ್ಲದೇ, ಆಗಲೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಂಡು ವೈಜ್ಞಾನಿಕ ಚಿಂತನೆ ಮೂಡಿಸಿದ ವ್ಯಕ್ತಿಯಾಗಿದ್ದಾರೆ ಎಂದು ವರ್ಣಿಸಿದರು.
ಇದನ್ನೂ ಓದಿ:- ವಿಶ್ವಚಾಂಪಿಯನ್ ಶಿಪ್ ಗೆ ಲವ್ಲಿನಾ ನೇರ ಆಯ್ಕೆ ಆಗಿದ್ದೇಕೆ? ದೆಹಲಿ ಹೈಕೋರ್ಟ್ ಪ್ರಶ್ನೆ
ಟಿಪ್ಪು ಮತಾಂಧ ಕನ್ನಡ ವಿರೋಧಿ ಎಂದು ಬಿಜೆಪಿ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಟಿಪ್ಪು ಅನ್ಯಭಾಷಿಗರ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಇತಿಹಾಸ ಓದಬೇಕು. ಆಗ ಅವರಿಗೆ ಅರ್ಥವಾಗುತ್ತದೆ ಎಂದರು. ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಆಸೀಫ್ ಸೇಠ್ ಮಾತನಾಡಿ, ಕಾಂಗ್ರೆಸ್ ಸರ್ಕಾರ 1947ರಿಂದ ಸ್ವಾತಂತ್ರ್ಯ ಬಂದಾಗಿನಿಂದಲೂ ಆಳ್ವಿಕೆ ಮಾಡಿದೆ.
ಆಗ ಟಿಪ್ಪು ಜಯಂತಿಯನ್ನು ಏಕೆ ಮಾಡಿಲ್ಲ. ಸಿದ್ದರಾಮಯ್ಯ ಐದು ವರ್ಷದ ಅವಧಿಯಲ್ಲಿ ಕಡೆಯ ಒಂದು ವರ್ಷದಲ್ಲಿ ಜಯಂತಿ ಘೋಷಿಸಿ ಮುಸ್ಲಿಂ ಮತಬ್ಯಾಂಕ್ ಮಾಡಲು ಹೊರಟಿದ್ದರು. ಯಾವುದೇ ಜಯಂತಿಗಳಲ್ಲಿ ರಾಜಕೀಯ ತರಬಾರದು ಎಂದು ಹೇಳಿದರು. ಕನ್ನಡ ನಾಜೀರ್ ಸೇರಿದಂತೆ ದೇವನಹಳ್ಳಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು ಮತ್ತಿತರರು ಇದ್ದರು.