Advertisement

ಶಾಂತಿ ಕದಡಿದರೆ ಬಂಧನ: ಕೊಡಗು ಎಸ್‌.ಪಿ. ಎಚ್ಚರಿಕೆ

11:58 AM Nov 09, 2018 | |

ಮಡಿಕೇರಿ: ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ತಾಲೂಕು ಕೇಂದ್ರಗಳಾದ ವಿರಾಜಪೆೇಟೆ ಮತ್ತು ಸೋಮವಾರಪೆೇಟೆಗಳಲ್ಲಿ ನ. 10ರಂದು ನಡೆಯಲಿರುವ ಟಿಪ್ಪು ಜಯಂತಿಗೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸುಮನ್‌ ಪನ್ನೇಕರ್‌ ಮನವಿ ಮಾಡಿದ್ದಾರೆ.

Advertisement

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂದರ್ಭದ ದುರ್ಲಾಭ ಪಡೆದು ಶಾಂತಿ ಕದಡುವ  ಪ್ರಯತ್ನಗಳು ಕಂಡು ಬಂದಲ್ಲಿ ಅಂಥವರನ್ನು ಮುಂಜಾಗರೂಕತಾ ಕ್ರಮವಾಗಿ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಸಿ  ಕೆಮರಾಗಳ ಹದ್ದಿನ ಕಣ್ಣು
ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ  ಸಹಿತ ಜನನಿಬಿಢ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ 200 ಸಿಸಿ ಕೆಮ ರಾಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಡಾ| ಸುಮನ್‌ ಅವರು  ಹೇಳಿದರು.

10 ಕಡೆ ಚೆಕ್‌ ಪೋಸ್ಟ್‌
ಜಿಲ್ಲೆಯ ಅಂಚಿನಲ್ಲಿರುವ ಕೇರಳದ ವಯನಾಡು, ಕಾಸರಗೋಡು ಹಾಗೂ  ಕರ್ನಾಟಕದ ಹಾಸನ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗೆ ಹೊಂದಿಕೊಂಡಂತೆ 10 ಕಡೆಗಳಲ್ಲಿ ಚೆಕ್‌ಪೋಸ್ಟ್‌ ಗಳನ್ನು ಮಾಡಲಾಗಿದ್ದು,  ಹೊರ ಜಿಲ್ಲೆಯಿಂದ ಬರುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಲಾಗುವುದು.  ಕಿಡಿಗೇಡಿಗಳು ಜಿಲ್ಲೆಗೆ ಬಂದು ದುಷ್ಕೃತ್ಯಗಳನ್ನು ನಡೆಸಲು ಮುಂದಾಗದಂತೆ ನಿಗಾ ವಹಿಸಲಾಗಿದೆ. ಈ ಚೆಕ್‌ಪೋಸ್ಟ್‌ ಗಳಲ್ಲಿ ತಲಾ 4ರಂತೆ ಒಟ್ಟು 40 ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ ಎಂದರು. ಇದರೊಂದಿಗೆ ಜಿಲ್ಲೆಯ ಒಳಭಾಗದಲ್ಲಿ 40 ಚೆಕ್‌ಪೋಸ್ಟ್‌ ಗಳನ್ನು ಅಳವಡಿಸುವ ಕಾರ್ಯ ಗುರುವಾರ  ಬೆಳಗ್ಗಿನಿಂದ ಆರಂಭವಾಗಿದೆ ಎಂದರು. 

ಇಪ್ಪತ್ತನಾಲ್ಕು ಗಂಟೆ ಗಸ್ತು
ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದ ರೀತಿಯಲ್ಲಿ 75  ಪಟ್ರೋಲಿಂಗ್‌ ವಾಹನಗಳ ಮೂಲಕ ದಿನದ 24 ಗಂಟೆ ಗಸ್ತು ವ್ಯವಸ್ಥೆಯನ್ನು ಮಾಡಲಾಗಿದೆ. ಅರಣ್ಯ ಇಲಾಖೆಯ ಸಹಕಾರದೊಂದಿಗೆ 7 ರ್ಯಾಪಿಡ್‌ ರೆಸ್ಪಾನ್ಸ್‌ ತಂಡವನ್ನು ನಿಯೋಜಿಸಲಾಗಿದೆ ಎಂದು ಎಸ್‌ ಪಿ ಹೇಳಿದರು.

Advertisement

2 ಸಾವಿರ ಸಿಬಂದಿ 
ಟಿಪ್ಪು ಜಯಂತಿ ಬಂದೋಬಸ್ತಿಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ 1500ರಿಂದ 2 ಸಾವಿರ ಪೊಲೀಸ್‌ ಸಿಬಂದಿ ಹಾಗೂ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಚಾಮರಾಜನಗರದ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರನ್ನು ಜಿಲ್ಲೆಗೆ ನಿಯುಕ್ತಿ ಮಾಡಲಾಗಿದೆ. 6 ಡಿವೈಎಸ್‌ಪಿ, 20  ಇನ್ಸ್‌ ಪೆಕ್ಟರ್‌, 46 ಸಬ್‌ ಇನ್ಸ್‌ಪೆಕ್ಟರ್‌, 104 ಎಎಸ್‌ಐ, 300 ಹೋಂ ಗಾರ್ಡ್‌, 850 ಪೊಲೀಸ್‌ ಸಿಬಂದಿ, 21 ಡಿಎಆರ್‌ ತುಕಡಿಗಳು, 10 ಕೆಎಸ್‌ಆರ್‌ಪಿ ತುಕಡಿಗಳನ್ನು ಹಾಗೂ ರ್ಯಾಪಿಡ್‌ ಆಕ್ಷನ್‌ ಫೋರ್ಸ್‌ ಅನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಹೇಳಿದರು.

ಐವರ ವಿರುದ್ಧ ಪ್ರಕರಣ
ಪೊನ್ನಂಪೇಟೆಯಲ್ಲಿ ನ. 5ರಂದು ನಡೆದ ಕಾರ್ಯ ಕ್ರಮವೊಂದರಲ್ಲಿ ಕೋಮು ಪ್ರಚೋದಕವಾಗಿ ಮಾತನಾಡಿ ರುವ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿರುವುದಾಗಿ ಡಾ| ಸುಮನ್‌ ಅವರು  ತಿಳಿಸಿದರು.

ಕೊಡಗಿನಲ್ಲಿ ನಿಷೇಧಾಜ್ಞೆ
ಮಡಿಕೇರಿ
: ಟಿಪ್ಪು ಜಯಂತಿಗೆ ಅಪಸ್ವರ ಎದ್ದಿರುವ ಕಾರಣ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನ. 9ರ ಸಂಜೆ 6ರಿಂದ ನ. 11 ಬೆಳಗ್ಗೆ 6 ಗಂಟೆಯ ವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ. ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.  ನ. 8ರ ಮಧ್ಯರಾತ್ರಿ 12ರಿಂದ ನ. 11ರ ಬೆಳಗ್ಗೆ 8 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯದ ಅಂಗಡಿಗಳು, ಬಾರ್‌ ಮತ್ತು ರೆಸ್ಟೋರೆಂಟ್‌ ಮತ್ತು ಕ್ಲಬ್‌, ಹೊಟೇಲ್‌ಗ‌ಳಲ್ಲಿ ಎಲ್ಲ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿರುವುದಾಗಿಯೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ನ. 10ರಂದು ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ನ. 9 ಮತ್ತು 10ರಂದು ಹೋಬಳಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳನ್ನು ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ.

ಆಹ್ವಾನಿತರಿಗೆ ಮಾತ್ರ ಅವಕಾಶ
ಜಿಲ್ಲೆಯ ಮೂರು ಕಡೆಗಳಲ್ಲಿ ನ. 10ರಂದು ಬೆಳಗ್ಗೆ 9 ಗಂಟೆಗೆ ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಆಹ್ವಾನಿತ ಅತಿಥಿಗಳು ಮತ್ತು ಆಮಂತ್ರಣ ಪತ್ರಿಕೆ ಇರುವವರಿಗೆ ಮಾತ್ರ ಪ್ರವೇಶ ಅವಕಾಶವನ್ನು ಒದಗಿಸಲಾಗುತ್ತದೆ ಎಂದು ಎಸ್‌ಪಿ  ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next