Advertisement

ಟಿಪ್ಪು ಜಯಂತಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಯತ್ನ

03:27 PM Oct 20, 2017 | Team Udayavani |

ಬೆಂಗಳೂರು: ರಾಜ್ಯ ಸರಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆಗೆ ಮೊದಲಿ ನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ವಿಪಕ್ಷ ಬಿಜೆಪಿ, ಈಗ ಈ ವಿವಾದವನ್ನು ಮುಂಬ ರುವ ವಿಧಾನಸಭೆ ಚುನಾವಣೆಗೆ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದೆ.

Advertisement

ಸರಕಾರದಿಂದ ಟಿಪ್ಪು ಜಯಂತಿ ಆಚರಣೆಗೆ ರಾಜ್ಯದ ಕೆಲವು ಭಾಗಗಳಲ್ಲಿ ವ್ಯಕ್ತವಾಗುತ್ತಿರುವ ಆಕ್ಷೇಪವನ್ನೇ ರಾಜಕೀಯ ಲಾಭವಾಗಿ ಪರಿವರ್ತಿಸಿಕೊಳ್ಳಲು ಮುಂದಾಗಿರುವ ಬಿಜೆಪಿ, ಟಿಪ್ಪು ಜಯಂತಿ ಆಚರಣೆ ಕಾಂಗ್ರೆಸ್‌ನ ಮುಸ್ಲಿಂ ವೋಟ್‌ಬ್ಯಾಂಕ್‌ ರಾಜಕಾರಣ ಎಂದು ಬಿಂಬಿಸಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಅ. 23ರಂದು ಬಿಜೆಪಿ ಸಹಿತ ಸಂಘ ಪರಿವಾರದ ಮುಖಂಡರ ಸಭೆಯನ್ನು ಬೆಂಗಳೂರಿ ನಲ್ಲಿ ಕರೆಯಲಾಗಿದ್ದು, ಇದಕ್ಕೆ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿವಿಧ ಸಂಘಟನೆಗಳನ್ನೂ ಆಹ್ವಾನಿಸಲು ನಿರ್ಧರಿಸಿದೆ. ಈ ಸಭೆಯಲ್ಲಿ ಟಿಪ್ಪು ಜಯಂತಿ ಆಚರಿಸುತ್ತಿರುವ ಕಾಂಗ್ರೆಸ್‌ ಸರಕಾರದ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2014ರಿಂದ ಸರಕಾರದ ವತಿಯಿಂದ ನ.10ರಂದು ಟಿಪ್ಪು ಜಯಂತಿ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದಕ್ಕೆ ಆಗಲೇ ಆಕ್ಷೇಪ ಎದುರಾಗಿತ್ತು. ಆದರೆ, 2015ರಲ್ಲಿ ಈ ಆಕ್ಷೇಪ ಹೋರಾಟದ ಸ್ವರೂಪಕ್ಕೆ ತಿರುಗಿದ್ದು, ಮಡಿಕೇರಿಯಲ್ಲಿ ಹಿಂಸಾಚಾರ ನಡೆದು ಕುಟ್ಟಪ್ಪ ಎಂಬವರು ಬಲಿಯಾಗಿದ್ದರು. 2016ರಲ್ಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತಾದರೂ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ.

ಈಗ ಮುಂದಿನ ನ.10ರಂದು ಮತ್ತೆ ಟಿಪ್ಪು ಜಯಂತಿಯನ್ನು ಆಚರಿಸಲು ಸಿದ್ಧತೆ ಆರಂಭವಾಗುತ್ತಿದೆ. ಕೊಡಗು  ಜಿಲ್ಲಾ ಪಂಚಾಯತ್‌ನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡದೇ ಇರಲು ನಿರ್ಧಾರ ಕೈಗೊಳ್ಳುವ ಮೂಲಕ ಅಲ್ಲಿನ ಬಿಜೆಪಿ ಆಡಳಿತ ಸರಕಾರಕ್ಕೆ ಸಡ್ಡು ಹೊಡೆದಿದೆ. ಆದರೆ, ಟಿಪ್ಪು ಜಯಂತಿ ಆಚರಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದೆ.

Advertisement

ಸರಕಾರದ ಈ ಎಚ್ಚರಿಕೆಯನ್ನೇ ಮುಂದಿಟ್ಟು ಕೊಂಡು ಟಿಪ್ಪು ಜಯಂತಿ ವಿರೋಧಿಗಳೊಂದಿಗೆ ಸೇರಿ ಬಿಜೆಪಿ ವಿವಿಧ ರೀತಿಯ ಹೋರಾಟಗಳನ್ನು ಆಯೋಜಿಸಲು ಚಿಂತನೆ ನಡೆಸಿದೆ. ಟಿಪ್ಪು ಜಯಂತಿಗೆ ವಿರೋಧ ಇರುವ ಭಾಗಗಳಲ್ಲಿ ಟಿಪ್ಪು ಸುಲ್ತಾನ್‌ ಆಳ್ವಿಕೆಯಲ್ಲಿ ವಿವಿಧ ಸಮುದಾಯದ ಮೇಲಾದ ದಾಳಿ, ಜಯಂತಿ ಆಚರಣೆಯ ಹಿಂದೆ ಇರುವ ಕಾಂಗ್ರೆಸ್‌ನ ವೋಟ್‌ಬ್ಯಾಂಕ್‌ ರಾಜಕಾರಣ ಮುಂತಾದ ವಿಚಾರಗಳ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲು ಯೋಚಿಸಿದೆ. ಈ ಮೂಲಕ ಆ ಭಾಗದಲ್ಲೇ ಮುಸ್ಲಿಂಮೇತರ ಮತಗಳನ್ನು ಪಕ್ಷದ ಪರ ಸೆಳೆದುಕೊಳ್ಳಲು ಕಸರತ್ತು ಮಾಡಲಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಸಹಿತ ಟಿಪ್ಪು ಸುಲ್ತಾನ್‌ ಆಡಳಿತ ವ್ಯಾಪ್ತಿಗೆ ಬರುತ್ತಿದ್ದ ಕೆಲವು ಪ್ರದೇಶಗಳಲ್ಲಿ ಸರಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸುತ್ತಿರುವುದಕ್ಕೆ ಆಕ್ಷೇಪಿಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಅ. 23ರಂದು ಕರೆಯಲಾಗಿರುವ ಸಭೆಯಲ್ಲಿ ಚರ್ಚಿಸಿ ಯಾವ ರೀತಿ ವಿರೋಧ ವ್ಯಕ್ತಪಡಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next