Advertisement
9.30ರೊಳಗೆ ತಲುಪಿರಾಜ್ಯ ಪರೀಕ್ಷಾ ಮಂಡಳಿಯು ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವ ನಿಟ್ಟಿನಲ್ಲಿ ಈ ಬಾರಿ ಕೆಲವು ಮಾರ್ಪಾಟುಗಳನ್ನು ಮಾಡಿದೆ. 9.15ರಿಂದ 9.30ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಬೇಕಾಗುತ್ತದೆ. 9.30ರ ಬಳಿಕ ಒಂದು ನಿಮಿಷ ತಡವಾದರೂ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ. 9.30ರಿಂದ 9.45ರವರೆಗೆ ಪ್ರಶ್ನೆ ಪ್ರತ್ರಿಕೆ ಓದಲು ಅವಕಾಶವಿರುತ್ತದೆ.
ಕಳೆದ ವರ್ಷದವರೆಗೆ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆ ಒಂದೇ ಆಗಿ ಬರುತ್ತಿತ್ತು. ಈ ವರ್ಷದಿಂದ ಅದು ಬೇರೆ ಬೇರೆಯಾಗಿ ಬರಲಿದೆ. ಉತ್ತರ ಪತ್ರಿಕೆಯ 2ನೇ ಪುಟದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ನಿಯಮಗಳ ಕುರಿತು ಪೂರ್ಣ ಮಾಹಿತಿ ಇರುತ್ತದೆ. ಮುಖ್ಯ ಉತ್ತರ ಪತ್ರಿಕೆಯನ್ನು ತುಂಬಿದ ಬಳಿಕ ಹೆಚ್ಚುವರಿ ಉತ್ತರ ಪತ್ರಿಕೆ ಪಡೆಯಲು ಅವಕಾಶವಿದೆ. ಉತ್ತರ ಪತ್ರಿಕೆ ಹೀಗಿದೆ
ಗಣಿತವನ್ನು ಹೊರತುಪಡಿಸಿ ಮುಖ್ಯಉತ್ತರ ಪತ್ರಿಕೆ 20 ಪುಟಗಳಿಂದ ಕೂಡಿರುತ್ತದೆ. ಗಣಿತದ ಮುಖ್ಯಉತ್ತರ ಪತ್ರಿಕೆ 28 ಪುಟಗಳಿಂದ ಕೂಡಿರುತ್ತದೆ. ಬಳಿಕ 4 ಪುಟಗಳ ಹೆಚ್ಚುವರಿ ಶೀಟ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಉತ್ತರ ಪತ್ರಿಕೆಯಲ್ಲಿ ಮುಖ್ಯಪ್ರಶ್ನೆ ಸಂಖ್ಯೆ ಹಾಗೂ ಉಪಪ್ರಶ್ನೆ ಸಂಖ್ಯೆಗಳನ್ನು ಉತ್ತರ ಪತ್ರಿಕೆಯ ಎಡಭಾಗದಲ್ಲಿ ಸಮರ್ಪಕವಾಗಿ ಬರೆಯಬೇಕಾಗುತ್ತದೆ.
Related Articles
ಮತ್ತೂಂದು ಮುಖ್ಯವಾದ ವಿಚಾರವೆಂದರೆ ಬಹು ಆಯ್ಕೆಯ ಪ್ರಶ್ನೆಯಲ್ಲಿನ ಉತ್ತರಗಳನ್ನು ಬೇರೆ ಬೇರೆ ಕಡೆ ಬರೆದರೆ ಮೊದಲು ಬರೆದ ಉತ್ತರವನ್ನೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಅದು ತಪ್ಪು ಎಂದೆಣಿಸಿದರೆ ಅದರ ಮೇಲೆ ಒಂದು ಗೆರೆ ಎಳೆದು ಅದನ್ನು ರದ್ದುಗೊಳಿಸಿದರೆ ಮಾತ್ರ ಮುಂದಿನ ಉತ್ತರವನ್ನು ಪರಿಗಣಿಸಲಾಗುತ್ತದೆ.
Advertisement
ಪರೀಕ್ಷಾ ಸಮಯವಿದ್ಯಾರ್ಥಿಗಳು ಪರೀಕ್ಷೆಯ ಸಮಯದ ಕುರಿತು ಎಚ್ಚರ ವಹಿಸಬೇಕಿರುವುದು ಅತಿ ಅಗತ್ಯ. ಎಲ್ಲ ಪರೀಕ್ಷೆಗಳಿಗೂ ಒಂದೇ ಸಮಯಗಳಿಲ್ಲದ ಕಾರಣ ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ಪ್ರಥಮ ಭಾಷೆ ಸಹಿತ ಗಣಿತ, ಸಮಾಜ, ವಿಜ್ಞಾನ ಪರೀಕ್ಷೆಗಳು 9.30ರಿಂದ 12.30ರವರೆಗೆ ನಡೆಯುತ್ತದೆ. ದ್ವಿತೀಯ ಹಾಗೂ ತೃತೀಯ ಭಾಷೆಯ ಪರೀಕ್ಷೆಗಳು 9.30ರಿಂದ 12ರ ವರೆಗೆ ಮಾತ್ರ ಇರುತ್ತದೆ. ಅಂಕಗಳು ಹೀಗೆ
ಎಸೆಸೆಲ್ಸಿಯಲ್ಲಿ ವಿದ್ಯಾರ್ಥಿಗಳ ಒಟ್ಟು ಅಂಕಗಳು 625 ಇದ್ದರೆ ಪರೀಕ್ಷೆಗಳು ಕೇವಲ 500 ಅಂಕಗಳಿಗೆ ಮಾತ್ರ ನಡೆಯುತ್ತದೆ. ಉಳಿದವು ಆಂತರಿಕ ಅಂಕಗಳಾಗಿರುತ್ತವೆ. ಆದರೆ ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳಲಿಲ್ಲದ ಕಾರಣ ಎಲ್ಲ 625 ಅಂಕಗಳಿಗೂ ಪರೀಕ್ಷೆ ಇರುತ್ತದೆ. ರೆಗ್ಯುಲರ್ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ 100 ಅಂಕದ್ದಾದರೆ, ಉಳಿದ ವಿಷಯಗಳಿಗೆ 80 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಸಿಸಿ ಕೆಮರಾ
ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ ಶೇ. 70 ಕೇಂದ್ರಗಳಿಗೆ ಈಗಾಗಲೇ ಸಿಸಿ ಕೆಮರಾ ಅಳವಡಿಸಲಾಗಿದೆ. ಸಿಸಿ ಕೆಮರಾ ಕಡ್ಡಾಯಗೊಳಿಸದ ಹಿನ್ನೆಲೆಯಲ್ಲಿ ಉಳಿದ ಶೇ. 30 ಕೇಂದ್ರಗಳಿಗೆ ಕೆಮರಾ ಅಳವಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರದಲ್ಲಿ ಕಣ್ಗಾವಲು
ಜಿಲ್ಲೆಯ 91 ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಇಲಾಖೆಯ ಎಕ್ಸ್ವಾಟ್‌ಗಳನ್ನು ನೇಮಿಸಲಾಗಿದೆ. ಜತೆಗೆ ಪ್ರತಿ ಕೇಂದ್ರದಲ್ಲಿ ಒಬ್ಬರು ಪ್ರಶ್ನೆಪತ್ರಿಕೆ ಅಧೀಕ್ಷಕರು ಕಾರ್ಯ ನಿರ್ವಹಿಸುತ್ತಾರೆ. ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಯ ರಕ್ಷಣೆ ಇವರ ಜವಾಬ್ದಾರಿ. ಜತೆಗೆ ಒಬ್ಬ ಸ್ಥಾನಿಕ ಜಾಗೃತ ದಳ ಅಧಿಕಾರಿ ಇರುತ್ತಾರೆ. ಪ್ರತಿ ಕೇಂದ್ರದಲ್ಲೂ ಮುಖ್ಯ ಅಧೀಕ್ಷಕರಿದ್ದು, 350ರಿಂದ 550ರೊಳಗೆ ವಿದ್ಯಾರ್ಥಿಗಳಿದ್ದರೆ ಹೆಚ್ಚುವರಿಯಾಗಿ ಉಪ ಮುಖ್ಯಅಧೀಕ್ಷಕರು ಇರುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆ 550ಕ್ಕಿಂತ ಹೆಚ್ಚಿದ್ದರೆ ಇಬ್ಬರು ಉಪಮುಖ್ಯ ಅಧೀಕ್ಷಕರು ಇರುತ್ತಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಗೊಂದಲ ತೊರೆದು ಪರೀಕ್ಷೆ ಬರೆಯಿರಿ
1. ಪರೀಕ್ಷೆ ಬರೆಯಲು ಹೋಗುವಾಗ ಹಾಲ್‌ಟಿಕೆಟ್ ಸಹಿತ ಅಗತ್ಯ ವಸ್ತುಗಳನ್ನು ಕೊಂಡು ಹೋಗಲು ಮರೆಯಬಾರದು. ಅದನ್ನು ಪರೀಕ್ಷೆಯ ಮುಂಚಿನ ದಿನವೇ ಸಿದ್ಧಪಡಿಸಿಟ್ಟುಕೊಳ್ಳಬೇಕು. 2. ಓದಿ ಆಗಿಲ್ಲ ಎಂದು ಕೊನೆಯ ಗಳಿಗೆಯಲ್ಲಿ ನಿದ್ದೆ ಬಿಟ್ಟು ಓದಬೇಡಿ. ನಿದ್ದೆಗೆಟ್ಟರೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. 3.ಪರೀಕ್ಷೆಯ ವೇಳೆ ಸಮಯ ಪರಿಪಾಲನೆಗೆ ಮಹತ್ವ ನೀಡಿ. ಈ ಬಾರಿ 9.30ಕ್ಕೆ ಒಂದು ನಿಮಿಷ ತಡವಾದರೂ ಪರೀಕ್ಷಾ ಕೇಂದ್ರದ ಒಳಗೆ ಹೋಗುವಂತಿಲ್ಲ. ಹೀಗಾಗಿ 9 ಗಂಟೆಗೇ ಪರೀಕ್ಷಾ ಕೇಂದ್ರದ ಬಳಿ ತೆರಳಲು ಆದಷ್ಟು ಪ್ರಯತ್ನಿಸಿ. 4. ಪರೀಕ್ಷಾ ಸಮಯದಲ್ಲಿ ಮೊಬೈಲ್ ಉಪಯೋಗಿಸಬೇಡಿ. ಈ ಕುರಿತು ಪೋಷಕರು ಜಾಗೃತರಾಗಬೇಕು. ವಿದ್ಯಾರ್ಥಿಗಳು ಮೊಬೈಲ್ ಉಪಯೋಗಿದಂತೆ ನೋಡಿಕೊಳ್ಳಬೇಕು. 5. ಮನಸ್ಸಿನಲ್ಲಿ ಒತ್ತಡಗಳು ಬಂದಾಗ ಬೇರೆ ಬೇರೆ ಆಲೋಚನೆಗಳು ಮೂಡುತ್ತವೆ.ಆದ್ದರಿಂದ ಒತ್ತಡಕ್ಕೆ ಒಳಗಾಗಬಾರದು. ಪೋಷಕರು ಕೂಡ ಓದು ಓದು ಎಂದು ಕಿರುಕುಳ ನೀಡಬೇಡಿ. ಗೊಂದಲ ಇಲ್ಲದೆ ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿ. 6. ಪರೀಕ್ಷಾ ಸಮಯದಲ್ಲಿ ಮಕ್ಕಳು ತೀವ್ರ ಒತ್ತಡಕ್ಕೆ ಒಳಗಾದರೆ ಹೆತ್ತವರು ತಡ ಮಾಡದೆ ಅವರನ್ನು ಮಾನಸಿಕ ತಜ್ಞರಲ್ಲಿ ತೋರಿಸಿ. ಅವರ ಕೌನ್ಸಿಲಿಂಗ್ ನಡೆಸಿ ಪರೀಕ್ಷೆ ಸೂಸುತ್ರವಾಗಿ ಬರೆಯುವಂತೆ ಮಾಡುತ್ತಾರೆ. 7. ಮನಸ್ಸಿನ ಮೇಲೆ ಹಿಡಿತ ಹೆಚ್ಚಿಸಲು ಪ್ರಾಣಾಯಾಮ, ಶವಾಸನವನ್ನು ಮಾಡಬೇಕು. ಇದು ಮನಸ್ಸನ್ನು ಹಿಡಿತಕ್ಕೆ ತರುತ್ತದೆ. 8. ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಅವರ ಮನಸ್ಸನ್ನು ಹಿಡಿತಕ್ಕೆ ತರುವ ಪ್ರಯತ್ನ ಮಾಡಬೇಕು. ಕೆಲವರಿಗೆ ಗಾರ್ಡನ್ ಸುತ್ತಿದಾಗ ಒತ್ತಡ ನಿವಾರಣೆಯಾದರೆ, ಇನ್ನು ಕೆಲವರಿಗೆ ಮ್ಯೂಸಿಕ್ ಕೇಳಿದಾಗ ಕಡಿಮೆಯಾಗುತ್ತದೆ. ಈ ರೀತಿ ಮಾಡಿ ಅವರನ್ನು ಸರಿದಾರಿಗೆ ತರಬೇಕು. 9. ಪರೀಕ್ಷಾ ಸಮಯದಲ್ಲಿ ಮೆಡಿಟೇಶನ್ ಅಭ್ಯಾಸ ಇರಲಿ. ಇದರಿಂದ ಮನಸ್ಸು ನಿರ್ಮಲವಾಗುತ್ತದೆ. ಜತೆಗೆ ಓದಿದ್ದು ಅರ್ಥವಾಗುತ್ತದೆ. 10. ಹೆತ್ತವರ ಒತ್ತಡದಿಂದಲೇ ವಿದ್ಯಾರ್ಥಿಗಳು ಕೆಲವೊಮ್ಮೆ ಆಶ್ವವಿಶ್ವಾಸ ಕಳೆದುಕೊಳ್ಳುತ್ತಾರೆ. ಹೆತ್ತವರು ಪರೀಕ್ಷಾ ದಿನಗಳು ಹತ್ತಿರವಾದಾಗ ಇಂತಿಷ್ಟೇ ಅಂಕ ತೆಗೆಯಬೇಕು ಎಂಬ ಟಾರ್ಗೆಟ್ ನೀಡಬಾರದು. ಕುಟುಂಬದ ಬೆಂಬಲ ಇದ್ದಾಗಲೇ ಹೆಚ್ಚು ಅಂಕ ತೆಗೆಯಲು ಸಾಧ್ಯ. 11.ವಿದ್ಯಾರ್ಥಿಗಳು ಹೆಚ್ಚು ಒತ್ತಡಕ್ಕೆ ಒಳಗಾದರೆ ಎದೆಬಡಿತ ಜಾಸ್ತಿಯಾಗುವುದು, ಪದೇ ಪದೇ ಶೌಚಕ್ಕೆ ತೆರಳುವುದು ಮೊದಲಾದ ಸಮಸ್ಯೆ ಕಂಡುಬರುತ್ತವೆ. ಈ ಕುರಿತು ಹೆತ್ತವರು ಎಚ್ಚರಿಕೆಯಿಂದಿರಬೇಕು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮನೆಯಲ್ಲೂ ಧನಾತ್ಮಕ ವಾತಾವರಣ ಇರಬೇಕು. ಜತೆಗೆ ಹೆತ್ತವರು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಜತೆಗೆ ವಿದ್ಯಾರ್ಥಿಗಳಲ್ಲೂ ತಾನು ಪರೀಕ್ಷೆಯನ್ನು ಬರೆಯುತ್ತೇವೆ ಎಂಬ ವಿಶ್ವಾಸ ಇರಬೇಕು. ಒಟ್ಟಿನಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದ ಹಾಗೆ ನೋಡಿಕೊಳ್ಳಬೇಕು. ಯಾವುದೇ ರೀತಿಯ ತೊಂದರೆಗಳು ಕಂಡುಬಂದರೆ ನೇರವಾಗಿ ತಜ್ಞರನ್ನು ಕಾಣಬೇಕು.
– ಡಾ | ಕೇಶವ ಪೈ ಕೆ. ಮುಖ್ಯಸ್ಥರು, ಮನೋರೋಗ ವಿಭಾಗ, ಕೆಎಂಸಿ ಮಂಗಳೂರು