ಯಾವುದೇ ವಸ್ತು ಕೊಳ್ಳುವಾಗ ಮೊದಲು ಯೋಚನೆಗೆ ಬರುವುದು ನಮ್ಮ ಬಜೆಟ್ ಎಷ್ಟು ಎನ್ನುವುದು. ಆಮೇಲೆ ಉಳಿದದ್ದು. ಆದರೆ ಯೋಚಿಸಬೇಕಾದ್ದು ಅಷ್ಟೇ ಆಗಿರುವುದಿಲ್ಲ. ಇನ್ನೂ ಒಂದಿಷ್ಟು ವಿಚಾರಗಳ ಬಗ್ಗೆ ತಿಳಿದುಕೊಂಡಿರುವುದು ಉತ್ತಮ.
ಕಾರು ಯಾಕೆ ಬೇಕು… ?: ಮೂಲಭೂತವಾಗಿ ನಾವೇ ನಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ ಇದು. ಕಾರು ಕೊಳ್ಳುವುದಕ್ಕೂ ಮೊದಲು ಅದರಿಂದ ನಮಗೆ ಪ್ರಯೋಜನ ಏನು ಎನ್ನುವುದರ ಸ್ಪಷ್ಟತೆ ಇರಬೇಕು. ಕಚೇರಿ ಅಥವಾ ಮನೆ ಬಳಕೆಗೆ ಎಂದಾದರೆ ದಿನದಲ್ಲಿ ಎಷ್ಟು ಸಮಯ ಬಳಕೆ ಮಾಡಿಕೊಳ್ಳಲಾಗುತ್ತೆ? ಎಷ್ಟು ದೂರ ಪ್ರಯಾಣಿಸುತ್ತೇವೆ? ಎಷ್ಟು ಮಂದಿ ಪ್ರಯಾಣಿಸುತ್ತೇವೆ? ಒಬ್ಬನೇ ಓಡಿಸಿಕೊಂಡಿರುವುದಾದರೆ ಯಾವ ಕಾರು ಉತ್ತಮ? ಸುರಕ್ಷತಾ ವ್ಯವಸ್ಥೆ ಹೇಗಿರಬೇಕು? ಇವೆಲ್ಲವೂ ಮುಖ್ಯವಾಗುತ್ತವೆ. ಈ ಬಗ್ಗೆ ಪಕ್ಕಾ ಆದ ಮೇಲೆಯೇ ಕಾರುಕೊಳ್ಳುವುದು ಒಳಿತು.
ಕಾರ್ಯ ಕ್ಷಮತೆ ಹೇಗೆ? ಮೈಲೇಜ್ ಓಕೆನಾ…?: ಸಾಮಾನ್ಯವಾಗಿ ಯಾವುದೇ ವಾಹನ ಕೊಳ್ಳುವಾಗ ಈ ಪ್ರಶ್ನೆ ಮೊದಲು ಮೂಡುತ್ತದೆ. ಅನೇಕ ಸಂದರ್ಭದಲ್ಲಿ ಕಾರಿನ ವಿನ್ಯಾಸ ಬಹಳ ಸೊಗಸಾಗಿದೆ ಎಂದು ಮರುಳಾಗುವುದುಂಟು. ಆದರೆ ಮೈಲೇಜ್ ಇಲ್ಲದಿದ್ದರೆ ಎಷ್ಟು ಚೆಂದ-ಅಂದ ಇದ್ದರೇನು ಪ್ರಯೋಜನ. ಹಾಗಾಗಿ ಕೊಳ್ಳುವುದಕ್ಕೂ ಮೊದಲು ವಿನ್ಯಾಸ ಮುಖ್ಯವೋ, ಮೈಲೇಜ್ ಇರಬೇಕೋ ಎನ್ನುವುದನ್ನು ನಿರ್ಧರಿಸಿಕೊಳ್ಳಬೇಕು. ಎರಡೂ ಇರಬೇಕು ಎನ್ನುವುದಾದರೆ ಕೆಲವೊಂದು ವಿಚಾರಗಳಲ್ಲಿ ಕಾಂಪ್ರಮೈಸ್ ಆಗಲೇಬೇಕು.
ರೀಸೇಲ್ ವ್ಯಾಲ್ಯೂ ಇದೆಯಾ?: ಕೊಳ್ಳುವಾಗಲೇ ರೀಸೇಲ್ ವ್ಯಾಲ್ಯೂ ಇರುವ ಕಾರು ಅದಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ನಾಲ್ಕೈದು ವರ್ಷದ ಬಳಿಕ ಮಾರಾಟ ಮಾಡಿ ಇನ್ನೊಂದು ಕಾರು ಕೊಳ್ಳಬೇಕೆಂದು ನಿರ್ಧರಿಸಿದಾಗ ಹಳೆಯ ಕಾರಿಗೆ ಒಳ್ಳೆಯ ರೇಟ್ ಬರಬೇಕೆಂದರೆ ಮೊದಲೇ ಈ ಬಗ್ಗೆ ತಿಳಿದಿರಬೇಕು.
ಸಾಲ ಸೌಲಭ್ಯ ಬೇಕು/ ಬೇಡ: ಹೆಚ್ಚಿನವರು ಸಾಲ ಮಾಡಿಯೇ ಕಾರುಕೊಳ್ಳುವುದು. ಆದರೆ ಸಾಲ ಸೌಲಭ್ಯವನ್ನು ಹೇಗೆ ಬಳಸಿಕೊಂಡರೆ ಚೆನ್ನ ಅನ್ನೋದನ್ನು ತಿಳಿದಿರಬೇಕು. ಆರ್ಥಿಕ ಸಲಹೆಗಾರರ ಪ್ರಕಾರ, ಕಾರುಕೊಳ್ಳಲು ದೀರ್ಘಾವಧಿ ಸಾಲ ಉತ್ತಮವಲ್ಲ. ಅಲ್ಪಾವಧಿ ಸಾಲವೇ ಉತ್ತಮ ಆಯ್ಕೆ ಎನ್ನುತ್ತಾರೆ. ಬಡ್ಡಿದರ ಯಾವತ್ತೂ ಏರಿಕೆ ಆಗಬಹುದಾದ ಕಾರಣ, ಈ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಬೇಕು. ಹಾಗೇ ಶೇ.100ರಷ್ಟು ಸಾಲ ಒಳಿತಲ್ಲ. ಇದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಹಾಗಾಗಿ ಕನಿಷ್ಠ ಶೇ.20-25ರಷ್ಟಾದರೂ ಡೌನ್‌ಪೇಮೆಂಟ್ ಮಾಡಿ ಕಾರುಕೊಳ್ಳುವುದು ಉತ್ತಮ.
ಸಾಧ್ಯವಾದರೆ ಇದನ್ನೂ ತಿಳಿದಿರಿ: ನೀವು ಕೊಳ್ಳುವ ಕಾರಿನ ಎಂಜಿನ್ ಸಾಮರ್ಥ್ಯ, ತಂತ್ರಜಾnನ ಸೇರಿದಂತೆ ಕಾರಿನಲ್ಲಿ ಬಳಸಿಕೊಳ್ಳಲಾದ ಪಾರ್ಟ್ಸ್ಗಳ ಬಗ್ಗೆಯೂ ತಿಳಿದುಕೊಳ್ಳುವುದು ಒಳ್ಳೆಯದು. ಹಾಗೇ ತೆರಿಗೆ ವ್ಯವಸ್ಥೆ ಏನು ಎನ್ನುವುದರ ಬಗ್ಗೆಯೂ ಮರೆಯದೆ ವಿಚಾರಿಸಿಕೊಳ್ಳಿ.