Advertisement
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ನಡೆದ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಗೈರುಹಾಜರಿಯಿಂದಾಗಿ ಸರ್ಕಾರದ ಪರವಾಗಿ ಪಾಲ್ಗೊಂಡಿದ್ದ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಆರ್.ರೋಷನ್ ಬೇಗ್, ಸಚಿವ ಜಮೀರ್ ಅಹಮ್ಮದ್ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ವಿರುದ್ಧ ಹರಿಹಾಯ್ದರು.
Related Articles
Advertisement
ಯಾರು ಏನೇ ಮಾತನಾಡಲಿ ಆಚರಣೆ ಮುಂದುವರಿಯಲಿದೆ ಎಂದು ಹೇಳಿದರು. ಮುಸ್ಲಿಂ ನಾಯಕರಿಗೆ ಹೇಗೆಲ್ಲಾ ತೊಂದರೆ ನೀಡಲಾಗುತ್ತಿದೆ ಎಂಬುದು ನನಗೆ ಗೊತ್ತಿದೆ. ಗುಜರಾತ್‌ನಲ್ಲಿ ನಿಮ್ಮ ನಾಯಕರ ರಕ್ಷಣೆಗೆ ಹೋದಾಗ ಏನೆಲ್ಲಾ ಕಿರುಕುಳ ನೀಡಲಾಯಿತು. ನನಗೆ ಹೇಗೆಲ್ಲಾ ಕಷ್ಟ ನೀಡಲಾಯಿತು. ಅದನ್ನೆಲ್ಲಾ ಅನುಭವಿಸಿದ್ದೇನೆ ಎಂದು ಭಾವುಕರಾದ ಡಿ.ಕೆ.ಶಿವಕುಮಾರ್, ಯಾರೂ ಎದೆಗುಂದ ಬೇಕಿಲ್ಲ ಎಂದರು.
ಸಚಿವ ಜಮೀರ್ ಅಹಮ್ಮದ್ ಖಾನ್ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೂರು ಬಾರಿ ಟಿಪ್ಪು ಜಯಂತಿ ಆಚರಿಸಲಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಯಂತಿ ಆಚರಣೆ ನಡೆಯುತ್ತಿದೆ. ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಆಚರಣೆಯನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಮಾಜಿ ಸಚಿವ ಆರ್.ರೋಷನ್ ಬೇಗ್ ಮಾತನಾಡಿ, ಕೆಲ ದಿನಗಳಿಂದ ನಾಟಕ ಶುರು ಮಾಡಿರುವ ಬಿಜೆಪಿಯವರು ಟಿಪ್ಪು ಜಯಂತಿ ಆಚರಿಸಬಾರದು ಎಂದು ಹೇಳುತ್ತಿದ್ದಾರೆ. ನಾವು ಬಿಜೆಪಿಯವರ ಅನುಮತಿ ಪಡೆದು ಜಯಂತಿ ಆಚರಿಸಬೇಕೆ? ಸಮಯ ಬಂದರೆ ದೆಹಲಿಗೆ ತೆರಳಿ ಟಿಪ್ಪು ಜಯಂತಿ ಆಚರಿಸುತ್ತೇವೆ. ಇತರೆ ಜಯಂತಿ ಆಚರಣೆಗೆ ರಜೆ ನೀಡುವಂತೆ ಟಿಪ್ಪು ಜಯಂತಿಗೆ ರಜೆ ಕೇಳಿಲ್ಲ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜಯಂತಿ ಆಚರಿಸಿದರೆ ಹೊಟ್ಟೆಯುರಿಕೊಂಡರೆ ಏನು ಮಾಡುವುದು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಾಗುವುದು ಬಿಜೆಪಿಗೆ ಗೊತ್ತಾಗುತ್ತಿದೆ. ಹಾಗಾಗಿ ಮತಗಳ ಧ್ರುವೀಕರಣಕ್ಕೆ ಮುಂದಾಗಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಹಿಂದೂ- ಮುಸ್ಲಿಮರು ಪರಸ್ಪರ ಕಿತ್ತಾಡುವಂತೆ ಮಾಡುವ ಪ್ರಯತ್ನವಿದು ಎಂದರು. ಸಚಿವೆ ಡಾ.ಜಯಮಾಲಾ ಮಾತನಾಡಿದರು. ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಚಾಲನೆ ಕಾರಣರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭಿಕರು ಜೈಕಾರ ಕೂಗಿದರು.
ಆಮೀರ್- ಎ- ಷರಿಯತ್‌ನ (ಕರ್ನಾಟಕ) ಹಜರತ್ ಮೌಲಾನ ಸಗೀರ್ ಅಹಮ್ಮದ್‌ಖಾನ್ ಸಾಹೇಬ್ ರಷಾದಿ ಅವರು ಆಶೀರ್ವಚನ ನೀಡಿದರು. ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಸದಾಶಿವ ಅವರು ಟಿಪ್ಪು ಕುರಿತು ಉಪನ್ಯಾಸ ನೀಡಿದರು. ಶಾಸಕರಾದ ಎನ್.ಎ.ಹ್ಯಾರಿಸ್, ರಿಜ್ವಾನ್ ಹರ್ಷದ್, ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶು ಕುಮಾರ್ ಇತರರು ಉಪಸ್ಥಿತರಿದ್ದರು.
ಬಿಗಿ ಭದ್ರತೆ: ರಾಜ್ಯ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಪೊಲೀಸ್ ಸರ್ಪಗಾವಲಿನ ಜತೆಗೆ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು (ಆರ್‌ಎಎಫ್) ಭದ್ರತೆಗೆ ನಿಯೋಜಿಸಲಾಗಿತ್ತು. ವಿಧಾನಸೌಧದ ಎಲ್ಲ ಪ್ರವೇಶ ದ್ವಾರಗಳ ಬಳಿಯೂ ಯೋಧರನ್ನು ನಿಯೋಜಿಸಲಾಗಿತ್ತು. ಬ್ಯಾಂಕ್ವೆಟ್ ಹಾಲ್‌ನ ಪ್ರವೇಶದ್ವಾರದಲ್ಲೂ ಆರ್‌ಎಎಫ್ ಯೋಧರನ್ನು ನಿಯೋಜಿಸಲಾಗಿತ್ತು.
ದೇಶದಲ್ಲಿ ಟಿಪ್ಪು ಸುಲ್ತಾನ್‌ಗೆ ತನ್ನದೇ ಆದ ಚರಿತ್ರೆ ಇದ್ದು, ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಕೆಲ ಬಿಜೆಪಿ ಸ್ನೇಹಿತರು ವಿರೋಧಪಡಿಸುತ್ತಿದ್ದಾರೆ. ಹಾಗಿದ್ದರೆ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಯಾಕೆ ಟಿಪ್ಪು ಜಯಂತಿ ಆಚರಿಸಿದರು. ಮುಖ್ಯಮಂತ್ರಿಯಾಗಿದ್ದಾಗ ಜಗದೀಶ್ ಶೆಟ್ಟರ್, ಗೃಹ ಸಚಿವರಾಗಿದ್ದಾಗ ಆರ್. ಅಶೋಕ್ ಟಿಪ್ಪು ಜಯಂತಿ ಆಚರಣೆಯಲ್ಲಿ ಮಾಡಿದ ಭಾಷಣ ಕೇಳಿದ್ದೀರಾ. ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಲೆ. ಸುಮ್ಮನೆ ಯಾಕೆ ರಾಜಕಾರಣ ಮಾಡುತ್ತೀರಿ. -ಡಿ.ಕೆ.ಶಿವಕುಮಾರ್, ಸಚಿವ