Advertisement
Related Articles
Advertisement
ಟಿಪ್ಪು ಕೋಟೆ
ಈ ಕೋಟೆಯ ಆರಂಭದಲ್ಲೇ ಸುಮಾರು ಹದಿನೈದರಿಂದ ಇಪ್ಪತ್ತು ಅಡಿ ಎತ್ತರದ ಬೃಹತ್ ಪ್ರವೇಶ ದ್ವಾರವಿದೆ. ಬಂಡೆಗಲ್ಲನ್ನೇ ಕೆತ್ತಿ ನಿರ್ಮಿಸಿದ ಸುಮಾರು 1,876 ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಬೇಕು. ದಾರಿಯ ಮಧ್ಯೆ ಅಲ್ಲಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಿಶ್ರಾಂತಿ ಗೃಹಗಳನ್ನು ಅರಣ್ಯ ಇಲಾಖೆ ನಿರ್ಮಿಸಿದೆ. ಚಾರಣದ ಕೆಲವೊಂದು ಸ್ಥಳಗಳು ಅತ್ಯಂತ ಅಪಾಯಕಾರಿಯೂ ಆಗಿದೆ. ಚಾರಣಕ್ಕೆ ಹೊರಟವರು ಹೆಚ್ಚಿನ ಮುಂಜಾಗ್ರತೆ ವಹಿಸದೇ ಹೋದರೆ ಪ್ರಾಣಕ್ಕೇ ಸಂಚಕಾರ ಸಂಭವಿಸುವ ಸಾಧ್ಯತೆಗಳಿವೆ. ಕೋಟೆಯ ತಳ ಸುಮಾರು 4 ರಿಂದ 5 ಕಿ.ಮೀಯಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಮೇಲ್ಭಾಗದಲ್ಲಿ ಒಂದರಿಂದ ಎರಡು ಎಕರೆಯಷ್ಟು ವಿಶಾಲವಾದ ಪ್ರಸ್ಥಭೂಮಿಯಂತಿದೆ. ಇಲ್ಲಿ ಬೃಹತ್ ಗಾತ್ರದ ಮರಗಳು, ಕುರುಚಲು ಗಿಡಗಳು ಇವೆ.
ಬೆಟ್ಟದ ಮೇಲೆ ಕಲ್ಲಿನಿಂದಲೇ ನಿರ್ಮಿಸಿರುವ ಕೆರೆ ಇದೆ. ಸುಡು ಬೇಸಿಗೆಯಲ್ಲೂ ಈ ಕೆರೆಯು ಬತ್ತುವುದೇ ಇಲ್ಲ. ಬೆಟ್ಟದ ಮೇಲಾºಗದಲ್ಲಿ ನಿಂತರೆ ಬೆಳ್ತಂಗಡಿ ಮತ್ತು ಉಜಿರೆ ಪಟ್ಟಣಗಳ ವಿಹಂಗಮ ನೋಟ ಕಣ್ಮನಗಳನ್ನು ಸೆಳೆಯುತ್ತದೆ. ಕೋಟೆಯ ಕೊನೆಯ ಭಾಗದಲ್ಲಿ ಸಂಪೂರ್ಣ ಶಿಥಿಲಗೊಂಡ ಫಿರಂಗಿ ಮನೆ ಇನ್ನೇನು ಬೀಳುವ ಸ್ಥಿತಿಯಲ್ಲಿದೆ. ಇಲ್ಲಿಯೇ ಟಿಪ್ಪುಸುಲ್ತಾನ್‌ನ ಸೈನಿಕರು, ಫಿರಂಗಿಗಳಿಗೆ ಅವಶ್ಯವಿರುವ ಮದ್ದು ಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದರೆಂದು ಹೇಳಲಾಗುತ್ತದೆ.
ಫಿರಂಗಿಗಳಿವೆ…
ಕೋಟೆಯ ಪ್ರಮುಖ ಸ್ಥಳಗಳಲ್ಲೆಲ್ಲಾ ಫಿರಂಗಿಗಳನ್ನು ಜೋಡಿಸಿಡಲಾಗಿದೆ. ಕೋಟೆಯೆಡೆಗೆ ಧಾವಿಸುವ ಶತ್ರುಗಳನ್ನು ಇಲ್ಲಿಂದಲೇ ಗುಂಡು ಹಾರಿಸಿ ಟಿಪ್ಪು ಹಿಮ್ಮೆಟ್ಟಿಸುತ್ತಿದ್ದ ಎಂದು ಇತಿಹಾಸ ಹೇಳುತ್ತದೆ. ಈ ಕೋಟೆಗೆ ಪ್ರವೇಶಿಸಲು ಇರುವುದು ಒಂದೇ ದಾರಿ. ಅದು ತುಂಬಾ ಕಡಿದಾಗಿದೆ. ಕ್ರಿ.ಶ 1799ರ ಮೈಸೂರು ಯುದ್ಧದಲ್ಲಿ, ಈ ಕೋಟೆ ಬ್ರಿಟೀಷರ ವಶವಾಯಿತಂತೆ. ಇಲ್ಲಿ ಕಡಿದಾದ ‘ಪಾಶಿಸ್ಥಳ’ವೊಂದಿದೆ. ತೀರಾ ಕೊರಕಲು ಕಂದಕವಾಗಿರುವುದರಿಂದ ಟಿಪ್ಪು ತನ್ನ ಶತ್ರುಗಳು, ಯುದ್ಧ ಕೈದಿಗಳನ್ನು ತಲೆ ಕೆಳಗಾಗಿ ಎಸೆದು ಕೊಲ್ಲುತ್ತಿದ್ದನಂತೆ. ಈ ಕೋಟೆಗೆ ಪ್ರವೇಶ ಹಾಗೂ ತುದಿಯನ್ನು ತಲುಪುವವರೆಗಿನ ಎಲ್ಲಾ ದಾರಿಗಳನ್ನೂ ಕೋಟೆಯ ಆಯಕಟ್ಟಿನ ಸ್ಥಳದಲ್ಲಿ ನಿಂತು ವೀಕ್ಷಿಸುವಂಥ ಚಾಣಾಕ್ಷ ತಂತ್ರಜ್ಞಾನ ಬಳಸಿ ಕಟ್ಟಲಾಗಿದೆ.
ಚಾರಣ
ಗಡಾಯಿಕಲ್ಲು, ಚಾರಣ ಪ್ರಿಯರ ಸ್ವರ್ಗ. ಇಲ್ಲಿಗೆ ಹೋಗಬೇಕಾದರೆ ಅರಣ್ಯ ಇಲಾಖೆ ಅನುಮತಿ ಬೇಕು. ಪ್ರವೇಶ ಶುಲ್ಕ 20 ರೂ. ಇದ್ದು, ಬೆಳಗ್ಗೆ 6ರಿಂದ ಸಂಜೆ 6ರ ತನಕ ಚಾರಣ ಮಾಡಬಹುದು. ಕೋಟೆ ಮುಟ್ಟಲು ಎರಡು, ಮೂರು ಗಂಟೆ ಬೇಕಾಗುತ್ತದೆ. ಕೋಟೆಯ ಪ್ರವೇಶ ದ್ವಾರದಲ್ಲಿ ಅರಣ್ಯ ಇಲಾಖೆಯ ಗೇಟ್ ಇದೆ. ಸೂರ್ಯನ ಬೇಗೆಯು ತಣಿಯುತ್ತಿದ್ದಂತೆಯೇ ಗೇಟ್ ಮುಚ್ಚುವುದರೊಳಗಾಗಿ ಕೋಟೆಯಿಂದ ವಾಪಾಸು ಬರಬೇಕು. ಸಂಜೆ ನಾಲ್ಕು ಗಂಟೆಯ ನಂತರ ಚಾರಣಕ್ಕೆ ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಕೋಟೆಯ ಮೇಲ್ಭಾಗದಲ್ಲಿ ರಾತ್ರಿಯ ಹೊತ್ತು ಉಳಿದುಕೊಳ್ಳುವಂತಿಲ್ಲ. ಗಡಾಯಿಕಲ್ ಕೋಟೆ ಇರುವ ಪ್ರದೇಶದಲ್ಲಿ ಚಾರಣಕ್ಕೆ ಬೇಸಿಗೆ ಹೇಳಿ ಮಾಡಿಸಿದ ಕಾಲ. ಮಳೆಗಾಲ, ಚಳಿಗಾಲದಲ್ಲಿ ಮಂಜಿನ ಕಾಟವಿರುವುದರಿಂದ ಆ ಸಂದರ್ಭದಲ್ಲಿ ಚಾರಣ ಮಾಡುವುದು ಯೋಗ್ಯವಲ್ಲ.
ಕೋಟೆಯ ಅಳಿದುಳಿದ ಕೋಣೆಗಳು ಇಂದಿಗೂ ಅತ್ಯಂತ ಬಲಿಷ್ಠವಾಗಿ ಮಳೆಗಾಳಿಯನ್ನೂ ಲೆಕ್ಕಿಸದೇ ನಿಂತಿವೆ. ಇಲ್ಲಿ ಉತ್ತಮವಾದ ಗಾಳಿ ಬೆಳಕಿನ ವ್ಯವಸ್ಥೆಯೂ ಇದೆ. ಕೋಟೆ ಹಾಗೂ ರಕ್ಷಣಾ ವ್ಯವಸ್ಥೆಗೆ ಪ್ರಕೃತಿಯನ್ನು ಬಳಸಿಕೊಂಡಿರುವುದನ್ನು ಇಲ್ಲಿ ಕಾಣಬಹುದು. ಚಾರಣಕ್ಕೆ ಹೋಗುವವರು ಗೋಡೆಗಳ ಮೇಲೆ ಕೆತ್ತುವುದು, ಹುಲ್ಲಿನ ಗುಡ್ಡಕ್ಕೆ ಬೆಂಕಿಯನ್ನು ಹಚ್ಚುವ ಕಿಡಿಗೇಡಿ ಕೆಲಸಗಳನ್ನೂ ಮಾಡಿದ್ದಾರೆ. ಚಾರಣ ಮಾಹಿತಿಗೆ-08256-233189 ಸಂತೋಷ್ ರಾವ್ ಪೆರ್ಮುಡ