Advertisement

ರಾಜ್ಯೋತ್ಸವಕ್ಕಿಂತ ಟಿಪ್ಪು ಜಯಂತಿಯೇ ಹೆಚ್ಚು

07:40 AM Nov 03, 2017 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತರ ತುಷ್ಠಿಕರಣ ನೀತಿ ಅನುಸರಿಸುತ್ತಿದೆ ಎಂದು ಕಿಡಿ ಕಾರಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಈ ಸರ್ಕಾರ ನ.1ರ ಕನ್ನಡ ರಾಜ್ಯೋತ್ಸವಕ್ಕಿಂತ ನ.10ರ ಟಿಪ್ಪು ಜಯಂತಿ ಬಗ್ಗೆಯೇ ಹೆಚ್ಚು ಉತ್ಸುಕವಾಗಿದೆ ಎಂದು ಆರೋಪಿಸಿದ್ದಾರೆ.

Advertisement

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಬಿಜೆಪಿಯ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನ.1ರಂದು ಕರ್ನಾಟಕ ರಾಜ್ಯೋತ್ಸವವನ್ನು ನಾಡಿನುದ್ದಕ್ಕೂ ಜನ ಅದ್ದೂರಿಯಾಗಿ ಆಚರಿಸಿದ್ದಾರೆ. ಆದರೆ, ಕಾಂಗ್ರೆಸ್‌ ಸರ್ಕಾರಕ್ಕೆ ರಾಜ್ಯೋತ್ಸವಕ್ಕಿಂತ ನ.10ರ ಟಿಪ್ಪು ಜಯಂತಿಯೇ ಮುಖ್ಯವಾಗಿದೆ. ಆ ನಿಟ್ಟಿನಲ್ಲೇ ಅದು ಉತ್ಸುಕವಾಗಿದೆ. ಆದರೆ, ಟಿಪ್ಪು ಜಯಂತಿ ಮೂಲಕ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡಬಹುದೇ ಹೊರತು ರಾಜ್ಯದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು. 

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. 10ಕ್ಕೂ ಹೆಚ್ಚು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯ ಕರ್ತರನ್ನು ಹತ್ಯೆ ಮಾಡಲಾಗಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೇಶದ ರಕ್ಷಣೆ, ಸುರಕ್ಷತೆ ಬೇಕಾಗಿಲ್ಲ. ಕ್ರಿಮಿನಲ್‌ ಮೊಕದ್ದಮೆ ಇರುವ ಪಿಎಫ್ಐ, ಎಸ್‌ಡಿಪಿಐ, ಕೆಎಫ್ಡಿ ಮೊದಲಾದ ಸಂಘಟನೆಗಳ ಕಾರ್ಯಕರ್ತರನ್ನು ಆರೋಪ ಮುಕ್ತ ಮಾಡುತ್ತಿದ್ದಾರೆ. ಒಂದು ಸಮುದಾಯವನ್ನು ಸಮಾಧಾನಪಡಿಸಲು ಟಿಪ್ಪು ಜಯಂತಿ ಆಚರಣೆಗೆ ಉತ್ಸಾಹ ತೋರುತ್ತಿರುವ ಸಿದ್ದು ಅವರಲ್ಲಿ ಈ ಹತ್ಯೆಗಳ ಬಗ್ಗೆ, ಹತ್ಯೆಯ ಹಿಂದಿರುವ ಆರೋಪಗಳ ಬಗ್ಗೆ ಉತ್ತರವಿದೆಯೇ ಎಂದು ಪ್ರಶ್ನಿಸಿದರು.

ಕೇಂದ್ರದ ಹಣ ಭ್ರಷ್ಟಾಚಾರಕ್ಕೆ: ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲವೆಂದು ಕಾಂಗ್ರೆಸ್‌ ಸರ್ಕಾರ ಆರೋಪಿಸುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 13ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನಿಗದಿಯಾಗಿದ್ದ 88,583 ಕೋಟಿ ರೂ.ಮೊತ್ತವನ್ನು 14ನೇ ಹಣಕಾಸು ಆಯೋಗದಲ್ಲಿ 2.19 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. ಮುದ್ರಾ ಯೋಜನೆಯಲ್ಲಿ 39 ಸಾವಿರ ಕೋಟಿ ರೂ., ಸ್ಮಾರ್ಟ್‌ಸಿಟಿ 960 ಕೋಟಿ ರೂ., ಅಮೃತ್‌ ಯೋಜನೆಯಡಿ 4,953 ಕೋಟಿ ರೂ.
ಹಾಗೂ ಮೆಟ್ರೋ ಯೋಜನೆಗೆ 2,617 ಕೋಟಿ ರೂ., ರೈಲ್ವೆ ಯೋಜನೆಗೆ 2,197 ಕೋಟಿ ರೂ. ನೀಡಿದೆ. ಈ ಎಲ್ಲಾ ಹಣ ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಬಳಕೆಯಾಗಿದೆ ಎಂದು ಆರೋಪಿಸಿದರು. ಪ್ರತಿಯೊಂದರಲ್ಲೂ ರಾಜಕೀಯ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಕೇಂದ್ರದ ಯೋಜನೆಗಳನ್ನು ಜಾರಿಗೆ ತರಲು ಅಸಹಕಾರ ತೋರಿಸುತ್ತಿದೆ. ಕೇಂದ್ರ ಸರ್ಕಾರ ದಲಿತರು, ಆದಿವಾಸಿಗಳು, ಹಿಂದುಳಿದವರು, ಯುವ ಜನಾಂಗದ ಕಲ್ಯಾಣಕ್ಕಾಗಿ 130 ಯೋಜನೆಗಳನ್ನು ಜಾರಿಗೊಳಿಸಿದೆಯಾದರೂ ರಾಜ್ಯದ ಅಸಹಕಾರದಿಂದ ಈ ಯೋಜನೆಗಳು ಕರ್ನಾಟಕದಲ್ಲಿ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ವಿಧೇಯಕ ಜಾರಿಗೊಳಿಸುತ್ತಿದ್ದು, ಇದಕ್ಕೆ ಕಾಂಗ್ರೆಸ್‌ ಸರ್ಕಾರ ರಾಜ್ಯಸಭೆಯಲ್ಲಿ ಅಡ್ಡಿಪಡಿಸುತ್ತಿದೆ. ತಾವು ಹಿಂದುಳಿದ ವರ್ಗಗಳ ಹಿತೈಷಿ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ, ಈ ವಿಚಾರದಲ್ಲಿ ಮೌನ ಮುರಿಯಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಯವರಿಗೆ ರಾಜ್ಯದ ಇತಿಹಾಸ ತಿಳಿದಿಲ್ಲ. ಇತಿಹಾಸದ ಅರಿವಿಲ್ಲದೆ ಮಾತನಾಡುತ್ತಾರೆ. ಇದನ್ನೆಲ್ಲ ಜನರು ನೋಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನತೆ ಉತ್ತರ ನೀಡುತ್ತಾರೆ.
 ●ಅನಂತ ಕುಮಾರ್‌ ಹೆಗಡೆ, ಕೇಂದ್ರ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next