Advertisement

ಟಿಪ್ಪು ಜಯಂತಿ ಶಾಂತಿ ಸಭೆಯಲ್ಲಿ ವಾಗ್ವಾದ 

07:00 AM Nov 09, 2018 | |

ಮಂಡ್ಯ: ಟಿಪ್ಪು ಜಯಂತಿಗೆ ರಾಜ್ಯಮಟ್ಟದಲ್ಲಿ ಬಿಜೆಪಿಯಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನಗರದಲ್ಲೂ ಇದೇ ವಿಚಾರವಾಗಿ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಗುರುವಾರ ಕರೆದಿದ್ದ ಶಾಂತಿ ಸಭೆಯಲ್ಲಿ ಅಶಾಂತಿ ಸೃಷ್ಟಿಯಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ್‌ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಹಿಂದೂ ಹಾಗೂ ಮುಸ್ಲಿಂ ಪರ ಸಂಘಟನೆಗಳ ಕಾರ್ಯಕರ್ತರಿಂದ ಪರ-ವಿರೋಧ ಚರ್ಚೆಗಳು ನಡೆದವು. ಸಭೆಯಲ್ಲಿದ್ದ ಉಭಯ ಗುಂಪಿನ ಕೆಲವು ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು. 

Advertisement

ಸಭೆ ಗದ್ದಲದಲ್ಲಿ ಮುಳುಗಿತು. ಶಾಂತಿ ಸಭೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸನ್ನಿವೇಶ ಸೃಷ್ಟಿಯಾಯಿತು. ಇದರಿಂದ ಕೋಪಗೊಂಡ ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಿ.ಶಿವಪ್ರಕಾಶ್‌, “ಜಗಳವಾಡುವುದಕ್ಕೋಸ್ಕರ ನಿಮ್ಮನ್ನು ಇಲ್ಲಿಗೆ ಕರೆದಿಲ್ಲ. ಪೊಲೀಸರ ಎದುರು ಜಗಳವಾಡುವ ಉದ್ದೇಶವೇನಾದರೂ ನಿಮಗೆ ಇದ್ದರೆ ಅಂಥವರು
ಮೇಲೆದ್ದು ನಿಲ್ಲಿ, ಎಸ್‌ಪಿ ಕಚೇರಿಗೆ ಬಂದು ಕೂಗಾಡಿದರೆ ಪೊಲೀಸರ ಬೆಲೆ ಏನೆಂದು ತಿಳಿಸಬೇಕಾಗುತ್ತದೆ’ ಎಂದು ಗದ್ದಲ ನಡೆಸುತ್ತಿದ್ದವರಿಗೆ ಖಡಕ್‌ ಎಚ್ಚರಿಕೆ ನೀಡಿದರು. ಸಭೆಯ ನಡುವೆ ಮುಖಂಡ ಮೊಹಮದ್‌ ತಾಹೀರ್‌ ಮಾತನಾಡಿ, ರಾಜ್ಯಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿದೆ. ಶಾಂತಿಯುತವಾಗಿ ಜಯಂತಿ ಆಚರಣೆ ಕುರಿತು ಮಾತಾಡಬೇಕೆ ವಿನಃ ನಿಮ್ಮ ನಿಲುವು ತಿಳಿಸುವ ವೇದಿಕೆಯಲ್ಲ ಎಂದು ಹರಿಹಾಯ್ದರು.

ಈ ಎರಡೂ ಸಂಘಟನೆಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಇದು ಎರಡೂ ಸಮುದಾಯಗಳ ಮುಖಂಡರ ಕೋಪ ಹೆಚ್ಚಿಸಿ ಗದ್ದಲಕ್ಕೆ ಕಾರಣವಾಯಿತು. ವಾಗ್ವಾದ ನಡೆಸುತ್ತಿದ್ದ ಮುಖಂಡರನ್ನು ಸಮಾಧಾನ ಪಡಿಸಲು ಪೊಲೀಸರು ಮತ್ತು ಸಭೆಯಲ್ಲಿದ್ದ ಕೆಲವರು ತೊಡಗಿದ್ದರೂ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿಲ್ಲ. ಉಭಯ ಸಮುದಾಯದ ಮುಖಂಡರ ವರ್ತನೆ ಕಂಡು
ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಿ.ಶಿವಪ್ರಕಾಶ್‌ ಕೋಪೋದ್ರಿಕ್ತರಾದರು. “ಕೂಗಾಡುವುದಕ್ಕೆ ಇದೇನು ಸಂತೆಯಲ್ಲ. ಶಾಂತಿ ಸಭೆ. ಇಲ್ಲಿ ಪ್ರತಿಯೊಬ್ಬರಿಗೂ ಮಾತನಾಡಲು ಅವಕಾಶವಿದೆ. ಎಲ್ಲರ ಅಭಿಪ್ರಾಯವನ್ನು ಕಲೆ ಹಾಕಲಾಗುತ್ತದೆ. ಕೂಗಾಡುವುದರಿಂದ ಏನೂ
ಪ್ರಯೋಜನವಿಲ್ಲ. ಸಭೆಯಲ್ಲಿರುವವರು ಶಾಂತಿಯುತ ವಾಗಿ ಮಾತನಾಡಿ ಗೌರವದಿಂದ ನಡೆದುಕೊಳ್ಳಬೇಕು. ಸಭೆಗೊಂದು ಅರ್ಥ ನೀಡಬೇಕು. ಅದನ್ನೂ ಮೀರಿ ವರ್ತಿಸಿದರೆ ಅಂಥವರಿಗೆ ಪೊಲೀಸರ ಮೌಲ್ಯ ಏನೆಂದು ತಿಳಿಸಬೇಕಾಗುತ್ತದೆ. ಸಮಾಧಾನದಿಂದ ಮಾತನಾಡಲು ಇಷ್ಟವಿಲ್ಲದವರು ಸಭೆಯಿಂದ ಹೊರ ನಡೆಯಿರಿ ಎಂದು ಖಡಕ್‌ ಸೂಚನೆ ನೀಡಿದರು.

ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ
ಮಡಿಕೇರಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನ.9ರ ಸಂಜೆ 6 ಗಂಟೆಯಿಂದ ನ.11 ಬೆಳಗ್ಗೆ 6 ಗಂಟೆವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ನ.8ರ ಮಧ್ಯರಾತ್ರಿ 12 ಗಂಟೆಯಿಂದ ನ. 11ರ ಬೆಳಗ್ಗೆ 8 ಗಂಟೆಯ ವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ನ.10ರಂದು ಟಿಪ್ಪು ಜಯಂತಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಮುಂಜಾಗ್ರತೆ ಕ್ರಮವಾಗಿ ನ.9 ಮತ್ತು 10ರಂದು ಹೋಬಳಿ ಕೇಂದ್ರಗಳಲ್ಲಿ ಕರ್ತವ್ಯ
ನಿರ್ವಹಿಸಲು ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳನ್ನು ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next