Advertisement
ಜಿಲ್ಲೆಯಲ್ಲಿ ಸರಕಾರದ ವತಿಯಿಂದ ಮಾತ್ರ ಟಿಪ್ಪು ಜಯಂತಿಯನ್ನು ಆಚರಿಸಲಾಯಿತು. ನಗರದ ಬೇರೆ ಎಲ್ಲೂ ಆಚರಣೆಗೆ ಅನುಮತಿ ನೀಡಿರಲಿಲ್ಲ. ಮೆರವಣಿಗೆಗೂ ಅವಕಾಶವಿರಲಿಲ್ಲ. ಟಿಪ್ಪು ಜಯಂತಿ ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಕಮಿಷನರೆಟ್ ವ್ಯಾಪ್ತಿಯಲ್ಲಿ 4 ಕೆಎಸ್‌ಆರ್‌ಪಿ, 10 ಸಿಆರ್‌ಪಿ ತುಕುಡಿಗಳು ಸಹಿತ 1,200 ಅಧಿಕಾರಿಗಳು ಹಾಗೂ ಸಿಬಂದಿ ಮತ್ತು 130 ಸಿಬಂದಿಯನ್ನು ಒಳಗೊಂಡ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದವರನ್ನು ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತಿತ್ತು. ವಾಹನಗಳನ್ನು ಗೇಟಿನ ಹೊರಭಾಗದಲ್ಲೇ ನಿಲ್ಲಿಸಿ ತಪಾಸಣೆಗೊಳಪಡಿಸಿದರು. ಕೇವಲ ಸರಕಾರಿ ವಾಹನಗಳಿಗಷ್ಟೇ ಪಂಚಾಯತ್ ಕಟ್ಟಡದ ಆವರಣದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗಿತ್ತು. ಬಿಗಿ ಭದ್ರತೆಯ ಮಧ್ಯೆಯೂ ಕಾರ್ಯಕ್ರಮ ಆರಂಭಕ್ಕೆ ಮುನ್ನ ಜಿ.ಪಂ. ಕಚೇರಿಗೇಟಿನೊಳಗೆ ಪ್ರವೇಶಿಸಿದ ಬಿಜೆಪಿ ಅಲ್ಪ
ಸಂಖ್ಯಾಕ ಘಟಕದ ಮುಖಂಡ ಫ್ರಾಂಕ್ಲಿನ್ ಮೊಂತೆರೋ ಅವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು. ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಉಮಾ ಪ್ರಶಾಂತ್, ಹನುಮಂತರಾಯ, ಎಸಿಪಿ ಉದಯ ನಾಯಕ್, ಮಂಜುನಾಥ ಶೆಟ್ಟಿ ಸಹಿತ ಹಿರಿಯ ಅಧಿಕಾರಿಗಳು ಕೂಡ ಕಾರ್ಯಕ್ರಮ ಆರಂಭದಿಂದ ಕೊನೆಯವರೆಗೆ ಜಿಲ್ಲಾ ಪಂಚಾಯತ್ ಕಚೇರಿಯ ಹೊರಗಡೆ ಬಂದೋಬಸ್ತ್ ನಿರತರಾಗಿದ್ದರು.