ಮೈಸೂರು: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಎಸ್.ಎ.ರಾಮದಾಸ್ ಟಿಪ್ಪುವಿನ ನೈಜ ಇತಿಹಾಸವಿರುವ ಎಪಿಗ್ರಫಿ ಪುಸ್ತಕವನ್ನು ಅಂಚೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಿದರು.
ನಗರದ ಕೆ.ಆರ್.ಕ್ಷೇತ್ರದ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮತದಾರರ ನಡಿಗೆ ಬೂತ್ ಕಡೆಗೆ ಎಂಬ ಜಾಗೃತಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಟಿಪ್ಪು ಜಯಂತಿ ವಿರೋಧಿಸುವವರಿಗೆ ಇತಿಹಾಸ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದು, ಹೀಗಾಗಿ ಟಿಪ್ಪುವಿನ ನೈಜ ಇತಿಹಾಸವಿರುವ ಪುಸ್ತಕವನ್ನು ಕಳುಹಿಸಲಾಗುತ್ತಿದೆ.
ಮೈಸೂರು ವಿವಿ ಪ್ರಕಟಿಸಿರುವ ಎಪಿಗ್ರಫಿ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕ್ರೂರಿ, ಮತಾಂಧ, ಸರ್ವಾಧಿಕಾರಿಯಾಗಿದ್ದ ಎನ್ನುವ ಬಗ್ಗೆಯೇ ಉಲ್ಲೇಖೀಸಲಾಗಿದೆ. ಸ್ವತಃ ಟಿಪ್ಪು ಪರ್ಶಿಯನ್ ಭಾಷೆಯಲ್ಲಿ ಕಲ್ಲಿನಲ್ಲಿ ಕೆತ್ತಿಸಿರುವ ವಿಚಾರವನ್ನು ಮೈಸೂರು ವಿವಿ ಇಂಗ್ಲಿಷ್‌ಗೆ ತರ್ಜುಮೆ ಮಾಡಿದೆ.
ಆ ಪುಸ್ತಕದಲ್ಲಿ ಮೂರ್ತಿ ಪೂಜೆ ಮಾಡುವವರನ್ನು ಕತ್ತರಿಸಿ ಹಾಕಿ, ಹಿಂದೂಗಳ ನಾಶಕ್ಕೆ ಕತ್ತಿ ಸಿದ್ಧ ಮಾಡಿಕೊಳ್ಳಿ ಮತ್ತು ದೇವಾಲಯಗಳ ನಾಶ ಮಾಡಿ, ಮರಗಳ ಕತ್ತರಿಸಿ, ಹರಿಯುವ ನೀರನ್ನು ತಡೆಯಿರಿ ಎಂದು ಬರೆಸಿದ್ದಾನೆ. ಅಯ್ಯಂಗಾರ್‌ಗಳನ್ನು ಕೊಲೆ ಮಾಡಿದ್ದು, ಕೊಡಗಿನಲ್ಲಿ ನಾಯರ್‌ಗಳನ್ನು ಅಮಾನುಷವಾಗಿ ಹತ್ಯೆ ಮಾಡಿದ್ದು, ಚಿತ್ರದುರ್ಗದ ಕೋಟೆಯನ್ನು ನಾಶ ಮಾಡಿದ ವಿಷಯಗಳು ಪುಸ್ತಕದಲ್ಲಿ ದಾಖಲಾಗಿದೆ ಎಂದರು.
ಒಂದೊಮ್ಮೆ ಮುಖ್ಯಮಂತ್ರಿಗಳು ಹಠ ಬಿಡದೆ ಟಿಪ್ಪು ಜಯಂತಿ ಆಚರಿಸಿದ್ದೇ ಆದಲ್ಲಿ, ಮುಂದಿನ ದಿನಗಳಲ್ಲಿ ರಾಜಾದ್ಯಂತ ಟಿಪ್ಪುವಿನ ನೈಜ ಇತಿಹಾಸವನ್ನು ಜನರ ಮುಂದೆ ತೆರೆದಿಡಲಾಗುವುದು ಎಂದು ಹೇಳಿದರು. ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಬಿಜೆಪಿ ಮುಖಂಡ ಜೋಗಿಮಂಜು, ಕೆ.ಆರ್.ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.