Advertisement

ಬಿಜೆಪಿ ಸರ್ಕಾರದ ಅವಧಿಯಲ್ಲಿ ಟಿಪ್ಪು ಆಚರಣೆ

11:51 AM Jun 24, 2018 | Team Udayavani |

ಚನ್ನಪಟ್ಟಣ: ಬಿಜೆಪಿಯವರು ಹಜ್‌ ಭವನಕ್ಕೆ ಟಿಪ್ಪುಸುಲ್ತಾನ್‌ ಹೆಸರನ್ನ ನಾಮಕರಣ ಮಾಡುವ ವಿಚಾರಕ್ಕೆ ವಿರೋಧ ಮಾಡುತ್ತಿದ್ದಾರೆ. ಆದರೆ ಕಳೆದ ಬಿ.ಎಸ್‌.ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ ಅವರೆಲ್ಲ ಟಿಪ್ಪು ಜಯಂತಿ ಆಚರಣೆ ಮಾಡಿಲ್ಲವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್‌ ಅಹಮದ್‌ ಖಾನ್‌ ಪ್ರಶ್ನಿಸಿದರು. 

Advertisement

ಸಚಿವರಾದ ನಂತರ ಪಟ್ಟಣಕ್ಕೆ ಮೊದಲ ಬಾರಿ ಆಗಮಿಸಿ, ಮುಸ್ಲಿಂ ಮುಖಂಡರ ನಿವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಅಧಿಕಾರದಲ್ಲಿದ್ದಾಗ ಆರ್‌.ಅಶೋಕ್‌ ಸೇರಿದಂತೆ ಅನೇಕರು ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದಾರೆ, ಈಗ ಟಿಪ್ಪು ವಿರುದ್ಧ ಮಾತನಾಡುತ್ತಿದ್ದೀರಿ, ತಾವೇ ಜಯಂತಿ ಮಾಡಿದ್ದು ತಮಗೆ ತಿಳಿದಿಲ್ಲವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನಿಸಿದರು.

ಹಜ್‌ ಭವನಕ್ಕೆ ಟಿಪ್ಪು ಹೆಸರನ್ನು ಇಡುವ ಸಂಬಂಧ ನಾವು ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಕಳುಸಿದ್ದೇವೆ. ಯಾವುದೇ ತೀರ್ಮಾನ ಕೈಗೊಂಡಿಲ್ಲ, ಈ ಕುರಿತು ಬಿಜೆಪಿ ನಾಯಕರ ಜತೆಗೂ ಚರ್ಚೆ ಮಾಡುತ್ತೇವೆ. ಅವರು ನಮಗೆ ಸಹಕಾರ ಕೊಡುತ್ತಾರೆಂಬ ವಿಶ್ವಾಸವಿದೆ ಎಂದರು. 

ಇನ್ನು ತಮಗೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಕಾಂಗ್ರೆಸ್‌ನ ಹಿರಿಯ ಮುಸ್ಲಿಂ ನಾಯಕರಿಗೆ ಯಾವುದೇ ಅಸಮಾಧಾನವಿಲ್ಲ, ರೋಷನ್‌ ಬೇಗ್‌, ತನ್ವೀರ್‌ ಎಲ್ಲರು ಕಾಂಗ್ರೆಸ್‌ನಲ್ಲಿ ಹಿರಿಯರು, ಈ ಹಿಂದೆ ಸಚಿವರಾಗಿದ್ದಾರೆ. ನಾನು ಮೊದಲ ಬಾರಿ ಕಾಂಗ್ರೆಸ್‌ನಿಂದ ಮಂತ್ರಿಯಾಗಿದ್ದೇನೆ. ಅವರಿಗೆ ಅವಕಾಶ ತಪ್ಪಿರುವುದಕ್ಕೆ ಬೇಸರವಿರಬಹುದು, ಆದರೆ ನನ್ನ ಬಗ್ಗೆ ಯಾರಿಗೂ ಅಸಮಾಧಾನವಿಲ್ಲ ಎಂದು ಹೇಳಿದರು. 

ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಕಿರುಕುಳ ನೀಡಿದಲ್ಲಿ ತಮ್ಮನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ನಗರಸಭೆ ಸದಸ್ಯ ಭಾವಸ, ಮುಖಂಡರಾದ ಫರೀದ್‌ ಖಾನ್‌ ಘೋರಿ, ಪೈಲ್ವಾನ್‌ ಅಕ್ರಂ ಖಾನ್‌ ಉಸ್ಮಾನಿ, ವಾಸಿಲ್‌ ಆಲಿಖಾನ್‌, ನಗರಸಭಾ ಸದಸ್ಯರಾದ ಬಾವಸಾ, ಲಿಯಾಖತ್‌ ಆಲಿಖಾನ್‌, ಜಕಿ ಅಹಮ್ಮದ್‌ ಖಾನ್‌ ಇದ್ದರು.

Advertisement

ಸಮ್ಮಿಶ್ರ ಸರ್ಕಾರ ಆಗಿರುವುದರಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಭಿನ್ನಮತ ಮರೆತು ಕೆಲಸ ಮಾಡಬೇಕಿದೆ. ಹಾಗಾಗಿ ನಾವಿಬ್ಬರು ಎಲ್ಲವನ್ನು ಮರೆತು ಸ್ನೇಹಿತರಾಗಿದ್ದೇವೆ. ಮಾಜಿ ಶಾಸಕರಾದ ಎಚ್‌.ಸಿ.ಬಾಲಕೃಷ್ಣ, ಚೆಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ ಹಾಗೂ ತಮ್ಮ ಎಲ್ಲ ಸ್ನೇಹಿತರಿಗೂ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಸಿಗುತ್ತದೆ. ಅದಕ್ಕೆ ಸಮಯ ಬರಬೇಕು. 
-ಜಮೀರ್‌ ಅಹಮದ್‌ ಖಾನ್‌, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ  

Advertisement

Udayavani is now on Telegram. Click here to join our channel and stay updated with the latest news.

Next