ಶ್ರೀರಂಗಪಟ್ಟಣ: ಕಾರಿಗೆ ಟಿಪ್ಪರ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ರಸ್ತೆ ಬದಿಯಲ್ಲಿ ಪಲ್ಟಿಯಾಗಿ ನಾಲೆಗೆ ಉರುಳಿದ್ದರೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಪಾಲಹಳ್ಳಿ ನವಗ್ರಹ ದೇವಸ್ಥಾನದ ಸರ್ಕಲ್ನಲ್ಲಿ ಸಂಭವಿಸಿದೆ.
ಗ್ರಾಮಸ್ಥರಿಂದ ರಸ್ತೆತಡೆ: ಅಪಘಾತದಿಂದ ಉದ್ರಿಕ್ತಗೊಂಡ ಗ್ರಾಮಸ್ಥರು, ರಸ್ತೆಯಲ್ಲಿ ಪ್ರತಿನಿತ್ಯ ಡಸ್ಟ್, ಜೆಲ್ಲಿ, ಎಂ.ಸ್ಯಾಂಡ್ ತುಂಬಿಕೊಂಡು ಟಿಪ್ಪರ್ ಲಾರಿಗಳ ವೇಗವಾದ ಓಡಾಟ ಹೆಚ್ಚಾಗಿದೆ. ಇದರಿಂದ ರಸ್ತೆ ಅಪಘಾತಗಳು ಮೇಲಿಂದ ಮೇಲೆ ನಡೆಯುತ್ತಿವೆ. ಹೆದ್ದಾರಿಯಲ್ಲಿ ಟಿಪ್ಪರ್ ಲಾರಿಗಳಿಗೆ ಕಡಿವಾಣ ಹಾಕಬೇಕು. ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಆಗಮಿಸಿ ತಪ್ಪಿತಸ್ಥ ಟಿಪ್ಪರ್ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಶ್ರೀರಂಗಪಟ್ಟಣ- ಕೆಆರ್‌ಎಸ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರಸ್ತೆ ತಡೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದರಿಂದ ಪ್ರವಾಸಿಗರು ಸೇರಿದಂತೆ ಸ್ಥಳೀಯ ವಾಹನ ಸವಾರರು ಪರದಾಡಿದರು. ವಿಷಯ ತಿಳಿದ ಪಟ್ಟಣ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು. ಟಿಪ್ಪರ್ ಲಾರಿಗಳ ಸಂಚಾರದ ಬಗ್ಗೆ ಆರ್‌ಟಿಒ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ ಎಂದು ಸಿಪಿಐ ಕೃಷ್ಣ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಕಾರು ಚಾಲಕ ತಾಲೂಕಿನ ಪಾಲಹಳ್ಳಿಯ ಧನು(25), ಈತನ ಸ್ನೇಹಿತ ಅಪಘಾತದಲ್ಲಿ ಗಾಯಗೊಂಡವರು. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಆರ್‌ಎಸ್ ರಸ್ತೆಯಲ್ಲಿ ಮೈಸೂರಿನಿಂದ ಶ್ರೀರಂಗಪಟ್ಟಣ ಮಾರ್ಗವಾಗಿ ಬರುತ್ತಿದ್ದ ಕಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಪಕ್ಕದಲ್ಲೇ ಇದ್ದ ಕಿರುನಾಲೆಗೆ ಬಿದ್ದಿದೆ. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಸ್ಥಳೀಯರು ಕಾರಿನಿಂದ ಹೊರಕ್ಕೆ ತಂದು ಆಸ್ಪತ್ರೆಗೆ ರವಾನಿಸಿದ್ದಾರೆ.