ಬಿ. ರಂಗಸ್ವಾಮಿ
ತಿಪಟೂರು: ಯುಜಿಡಿ ಕಾಮಗಾರಿ, 24×7 ಕುಡಿಯುವ ನೀರು ಸರಬರಾಜು ಯೋಜನೆಗಳ ಅವೈಜ್ಞಾ ನಿಕ ಅನುಷ್ಠಾನದಿಂದ ನಗರದ ಗೋವಿನಪುರ ರಸ್ತೆ ಸೇರಿ ಸಾಕಷ್ಟು ರಸ್ತೆಗಳ ಸುತ್ತಲಿನ ಪ್ರದೇಶ ದೂಳು ಮಯವಾಗಿದೆ. ಕೆಂದೂಳಿನಿಂದ ನಿವಾಸಿಗಳು, ವ್ಯಾಪಾರಿಗಳು ಕೆಮ್ಮು, ಗಂಟಲು ನೋವು ಮತ್ತಿತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಪಿಡಬ್ಲ್ಯೂ ಡಿ ಇಲಾಖೆ ಸೇರಿ ನಗರಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಡಾಂಬರು ರಸ್ತೆಗಳನ್ನೆಲ್ಲಾ ಅಗೆದು ಹಾಳು ಮಾಡಿರುವುದರಿಂದ ವಾಹನಗಳು ಓಡಾಡುವಾಗ ಮುಗಿಲೆತ್ತರಕ್ಕೆ ದೂಳು ಮೇಲೇಳುತ್ತದೆ. ಸವಾರರಂತೂ ವಾಹನ ಚಲಾಯಿಸಲು ಸುಸ್ತೆದ್ದು ಹೋಗುವಂತ ಪರಿಸ್ಥಿತಿ ಇದೆ. ಜೊತೆಗೆ ರಸ್ತೆ ಎಲ್ಲಾ ಗುಂಡಿ ಗೊಟರು ಗಳಾಗಿದ್ದು, ವಾಹನ ಸವಾರರಂತೂ ಶಾಪ ಹಾಕಿ ಕೊಂಡೇ ಓಡಾಡುವಂತಾಗಿದೆ.
ದೂಳಿನಿಂದ ಓಡಾಡುವ ವಾಹನ ಸವಾರರಿಗೆ ತೊಂದರೆಯಾಗಿ ಅಪಘಾತಗಳಾಗುತ್ತಿವೆ. ಜನರಂತೂ ಮೂಗು, ಕಣ್ಣು ಅರೆಬರೆ ಮುಚ್ಚಿ ಓಡಾಡಬೇಕಾದ ಹಿಂಸೆಗೆ ಗುರಿಯಾಗಿದ್ದಾರೆ. ಹಾಕಿರುವ ಬಟ್ಟೆಗಳು, ಮಕ್ಕಳ ಯೂನಿಫಾರಂಗಳಿಗೂ ದೂಳು ಮೆತ್ತಿಕೊಳ್ಳುತ್ತದೆ. ಇದೇ ಸ್ಥಿತಿ ಬಹುತೇಕ ಬಡವಾಣೆಗಳ ಸ್ಥಿತಿಯಾಗಿದ್ದು, ಎಲ್ಲಿ ನೋಡಿದರೂ ದೂಳು ಕಾಣುತ್ತದೆ.
ಕೆಮ್ಮಿದರು, ಉಗಿದರೂ ಕೆಂದೂಳು!: ಕೆಂದೂಳಿಗೆ ಗುರಿಯಾಗಿರುವ ಯಾರೇ ಆಗಲಿ ಕೆಮ್ಮಿ ಉಗುಳಿದರೆ ಸಾಕು ಗಂಟಲು ತುಂಬಾ ಕೆಂಪು ಬಣ್ಣದ ದೂಳು ಮಿಶ್ರಿತ ಉಗುಳೇ ಬರುತ್ತಿದ್ದು, ಉಗಿದರೂ, ಕೆಮ್ಮಿದರೂ ಇದೇ ಗೋಳಾಗಿದೆ. ನಾನಾ ರೋಗಗಳಿಗೆ ಅಮಾಯಕರು ತುತ್ತಾಗಿ ಆಸ್ಪತ್ರೆ ಸಾವಿರಾರು ರೂ. ವ್ಯಯ ಮಾಡುವಂತಾಗಿದೆ. ರಸ್ತೆಗಳ ಸ್ಥಿತಿ ಹೇಗಿದೆ ಎಂದರೆ ದ್ವಿಚಕ್ರ ವಾಹನ ಹೋದರೆ ಸಾಕು ಮೈಮೇಲೆ ಹಾರುವಷ್ಟು ದೂಳಿನ ರಾಶಿ ಏಳುತ್ತದೆ. ನಾಗರಿಕರು ಮನೆಯಿಂದ ಹೊರಗೆ ಬರಲು ಯೋಚಿಸುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಕೆಂದೂಳು ಏಳುವ ರಸ್ತೆಗಳಿಗೆ ನಗರಸಭೆ ಅಥವಾ ಸಂಬಂಧಿದ ಲೋಕೋಪಯೋಗಿ ಇಲಾಖೆ ಜನರ ಆರೋಗ್ಯದ ದೃಷ್ಟಿಯಿಂದ ಲಾದರೂ ದಿನಕ್ಕೆ 3ಬಾರಿಯಾದರೂ ಟ್ಯಾಂಕರ್‌ಗಳ ಮೂಲಕ ರಸ್ತೆಗೆ ನೀರು ಹಾಕಿಸಿದರೂ ದೂಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಆದರೆ ಕನಿಷ್ಠ ಪ್ರಜ್ಞೆಯೂ ಇಲ್ಲದ ಅಧಿಕಾರಿಗಳು ಅಮಾಯಕ ಮಕ್ಕಳ, ಜನರ ಕಾಳಜಿ ಇಲ್ಲದಂತೆ ವರ್ತಿಸುತಿದ್ದು, ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ನಾಗರಿಕರು ನಗರ ಸಭೆ ಸೇರಿ ತಾಲೂಕು ಆಡಳಿತದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿ ನಿಧಿಗಳು ಸಮಸ್ಯೆಗೂ ನಮಗೂ ಯಾವುದೆ ಸಂಬಂಧವಿಲ್ಲ ಎಂದು ಕೈಕಟ್ಟಿ ಕುಳಿತಿದ್ದಾರೆ. ಇದರಿಂದ ರೋಸಿ ಹೋಗಿ ರುವ ನಿವಾಸಿಗಳು ನಗರಸಭೆ ಮತ್ತು ಯುಜಿಡಿ ಅಧಿಕಾರಿಗಳ ವಿರುದ್ದ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.