Advertisement

ಮಾವಿನಹಣ್ಣನ್ನು ಕದ್ದು ತಿಂದವರಾರು?

03:50 AM Mar 16, 2017 | |

ಒಂದು ಊರಿನಲ್ಲಿ ಒಬ್ಬ ಜಮೀನ್ದಾರನಿದ್ದ. ಆತನಿಗೊಬ್ಬಳು ಮಗಳಿದ್ದಳು. ಅವಳೆಂದರೆ ಅವನಿಗೆ ತುಂಬಾ ಪ್ರೀತಿ, ಮಮತೆ. ಕೊಂಚ ಸಮಯದ ನಂತರ ಜಮೀನ್ದಾರನ ಮಗಳು ಬೇರೆ ಊರಿನಲ್ಲಿ ನೆಲೆಸಿದ್ದಳು. ಅವಳಿಗೆ ಮಾವಿನ ಹಣ್ಣೆಂದರೆ ತುಂಬಾ ಇಷ್ಟ. ಒಂದು ದಿನ ಮಗಳನ್ನು ಖುಷಿ ಪಡಿಸುವ ಸಲುವಾಗಿ ಮಾವಿನ ಹಣ್ಣುಗಳನ್ನು ಅವಳಿಗೆ ಕೊಡುವ ಮನಸ್ಸಾಯಿತು. ಆತ ಮಾವಿನ ಹಣ್ಣುಗಳನ್ನು ಒಂದು ಬುಟ್ಟಿಯಲ್ಲಿಟ್ಟು, ಒಂದು ಪತ್ರದೊಂದಿಗೆ ನಂಬಿಕೆಯುಳ್ಳ ಕೆಲಸದವನ ಕೈಯಲ್ಲಿ ಕೊಟ್ಟು ಮಗಳಿಗೆ ತಲುಪಿಸುವಂತೆ ಹೇಳಿ ಕಳಿಸಿದರು. 

Advertisement

ಆತ ಮಾವಿನ ಹಣ್ಣಿನ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಕೆಲಸದಾತ, ಜಮೀನ್ದಾರರ ಮಗಳ ಊರಿನತ್ತ ಪಯಣಿಸಿದ. ಬಿಸಿಲಲ್ಲಿ ನಡೆದು ಹೋಗುತ್ತಿದ್ದ ಆತನಿಗೆ ತುಂಬಾ ಆಯಾಸ ಮತ್ತು ದಾಹವಾಯಿತು. ಒಂದು ಮರದಡಿ ನೆರಳಿನಲ್ಲಿ ಕುಳಿತುಕೊಂಡನು. ಬುಟ್ಟಿಯಲ್ಲಿ ಮಾವಿನ ಹಣ್ಣಿನ ಘಮಲು ಬರುತ್ತಿತ್ತು. ಒಂದು ಕಡೆ ಆಯಾಸ, ಮತ್ತೂಂದು ಕಡೆ ದಾಹ. ಇನ್ನೊಂದು ಕಡೆ ಬಿಸಿಲು, ಅಕ್ಕಪಕ್ಕ ನೋಡಿದ. ಕುಡಿಯಲು ನೀರೂ ಸಿಗುವುದಿಲ್ಲವೆಂದು ಭಾಸವಾಯಿತು.

ಪಕ್ಕದಲ್ಲಿದ್ದ ಮಾವಿನ ಹಣ್ಣಿನ ಬುಟ್ಟಿ ಮೇಲೆ ಕಣ್ಣು ಸೆಳೆಯಿತು. ಆದರೂ, ನಂಬಿಕೆ ಬಗ್ಗೆ ಒಮ್ಮೆ ಯೋಚನೆ ಮಾಡಿದ. ಜಮೀನ್ದಾರರು ತನ್ನ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿಯನ್ನು ಅವನಿಗೆ ನೀಡಿದ್ದರಲ್ಲ, ಅವರ ನಂಬಿಕೆಗೆ ವಿರುದ್ಧವಾಗಿ ಹೋಗುವುದು ಅವನಿಗೆ ಸರಿತೋರಲಿಲ್ಲ. ಆದರೆ, ಮನಸ್ಸು ತಡೆಯಲಿಲ್ಲ. ಬುಟ್ಟಿಯೊಂದಿಗೆ ಮಗಳಿಗೆ ಜಮೀನ್ದಾರರು ಕೊಟ್ಟಿದ್ದ ಒಂದು ಪತ್ರ ಆತನ ಕೈಯಲ್ಲಿತ್ತು. ಆ ಪತ್ರದಲ್ಲೇನಿತ್ತೆಂದು ಕೆಲಸದವನಿಗೆ ಗೊತ್ತಿರಲಿಲ್ಲ. ಪತ್ರವನ್ನು ತಿರುಗಿಸಿ ನೋಡಿದ. ಓದು ಬಾರದವನಿಗೆ ಅದರಲ್ಲೇನಿದೆ ಎಂದು ಅರ್ಥವಾಗಲಿಲ್ಲ. ಜಮೀನ್ದಾರ ತನ್ನ ಮಗಳಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಆ ಪತ್ರ ಬರೆದಿರುತ್ತಾರೆಂದು ತಿಳಿದ. 

ಪಕ್ಕದಲ್ಲಿದ್ದ ಒಂದು ಕಲ್ಲನ್ನು ತೆಗೆದು ಪತ್ರ ಹಾರಿಹೋಗದಂತೆ ಕಲ್ಲಿನಡಿ ಇಟ್ಟನು. ಬಳಿಕ ಹಣ್ಣಿನ ಬುಟ್ಟಿಯತ್ತ ದೃಷ್ಟಿ ಹಾಯಿಸಿದ. ಮೊದಲಿಗೆ ಒಂದೇ ಒಂದು ಹಣ್ಣು ತಿಂದ. ಹಣ್ಣು ತುಂಬಾ ರುಚಿಯಾಗಿತ್ತು. ಮತ್ತೂಂದು ಬೇಕೆನಿಸಿತು. ಎರಡು ತಿಂದರೆ ಮಾತ್ರ ಅವರಿಗೇನು ತಿಳಿಯುತ್ತೆ ಎಂದುಕೊಂಡು ಮತ್ತೂಂದು ಹಣ್ಣು ತಿಂದ. ಮತ್ತಷ್ಟು ಆಸೆಯಾಯಿತು. ಹೀಗೆ ನಾಲ್ಕು ಹಣ್ಣುಗಳನ್ನು ಒಂದಾದ ಮೇಲೊಂದರಂತೆ ತಿಂದ. ಬಾಯಾರಿಕೆ ಕಳೆದು, ಹೊಟ್ಟೆ ತುಂಬಿದ ನಂತರ ಒಂದು ಸಣ್ಣ ನಿದ್ರೆ ಮಾಡಿ ಎದ್ದ. ಪಕ್ಕಕ್ಕಿಟ್ಟಿದ್ದ ಪತ್ರವನ್ನು ಕಲ್ಲಿನಡಿಯಿಂದ ತೆಗೆದು ಅದನ್ನು ಯಥಾಸ್ಥಾನದಲ್ಲಿ ಏನೇನೂ ಆಗಿಲ್ಲವೆಂಬಂತೆ ಇಟ್ಟನು. ಮತ್ತೆ ಬುಟ್ಟಿ ಹೊತ್ತುಕೊಂಡು ಜಮೀನಾªರರ ಮಗಳ ಊರಿನತ್ತ ಹೆಜ್ಜೆ ಹಾಕಿದ. 

ಮಗಳಿಗೆ ಜಮೀನಾªರರು ಕೊಟ್ಟಿದ್ದ ಹಣ್ಣಿನ ಬುಟ್ಟಿ ಮತ್ತು ಪತ್ರವನ್ನು ಕೊಟ್ಟ. ಅದನ್ನು ಓದಿದ ನಂತರ ಜಮೀನ್ದಾರರ ಮಗಳಿಗೆ ಬುಟ್ಟಿಯಲ್ಲಿದ್ದ ಹಣ್ಣುಗಳಲ್ಲಿ ಏನೋ ವ್ಯತ್ಯಾಸವಾಗಿರುವುದು ಗಮನಕ್ಕೆ ಬಂದಿತು. ಅದು ಹೇಗೆಂದರೆ ಜಮೀನ್ದಾರರು ಆ ಪತ್ರದಲ್ಲಿ ಬುಟ್ಟಿಯಲ್ಲಿ ಎಷ್ಟು ಹಣ್ಣುಗಳಿತ್ತು ಎಂಬುದನ್ನು ಬರೆದಿದ್ದರು. ಅದು ಓದಲು ಬಾರದ ಈ ಕೆಲಸದವನಿಗೆ ಗೊತ್ತಿಲ್ಲದೆ ತಿಂದುಬಿಟ್ಟಿದ್ದ. ಮಗಳು ಮತ್ತೆ ಮತ್ತೆ ಬುಟ್ಟಿಯಲ್ಲಿದ್ದ ಹಣ್ಣುಗಳನ್ನು ಎಣಿಸಿದಳು. ನಾಲ್ಕು ಹಣ್ಣುಗಳು ಕಡಿಮೆ ಇದ್ದವು. 

Advertisement

ಕೆಲಸದವನನ್ನು ಉದ್ದೇಶಿಸಿ, “ನೀನೇದರೂ ಹಣ್ಣುಗಳನ್ನು ತಿಂದೆಯಾ?’ ಎಂದು ಕೇಳಿದಳು. ಆಕೆಯ ಪ್ರಶ್ನೆಯಿಂದ ದಂಗು ಬಡಿದರೂ ಸಾವರಿಸಿಕೊಂಡ ಕೆಲಸದಾತ  “ಇಲ್ಲ, ಇಲ್ಲ ನಾನು ತಿಂದೇ ಇಲ್ಲ ತಾಯಿ! ನಾನೇಕೆ ತಿನ್ನಲಿ? ನಿಮಗಾಗಿ ಇಷ್ಟು ದೂರದಿಂದ ಹಣ್ಣಿನ ಬುಟ್ಟಿ ಹೊತ್ತು ತಂದಿದ್ದೇನೆ’ ಎಂದು ತಡಬಡಾಯಿಸಿದ. ಕೆಲಸಗಾರನ ಮುಖಭಾವ ಕಂಡು ಅವಳಿಗೆ ಹಣ್ಣುಗಳನ್ನು ಆತನೇ ತಿಂದಿದ್ದಾನೆ ಎಂದು ತಿಳಿಯಿತು. ಆದರೆ, ತಂದೆ ಕೊಟ್ಟಿದ್ದ ಪತ್ರದಲ್ಲಿ ಎಷ್ಟು ಹಣ್ಣುಗಳಿವೆ ಎಂದು ಬರೆದಿರುವುದು ಅವನಿಗೆ ಗೊತ್ತಿಲ್ಲ. ಆತನಿಗೆ ಓದಲು ಬಂದರೆ ತಾನೆ, ಆ ಉತ್ತರದಲ್ಲಿ ಏನಿದೆ ಎಂದು ತಿಳಿಯಲು. ಅವಳಿಗೆ ಕೆಲಸದವನ ಮೇಲೆ ಕೋಪಕ್ಕಿಂತ ಹೆಚ್ಚಾಗಿ ಕನಿಕರ ಮೂಡಿತು. ಹೋಗಲಿ ಬಿಡು ಎಂದು ಅವಳು ಕೆಲಸದವನನ್ನು ಕ್ಷಮಿಸಿದಳು. ಇನ್ನು ಮುಂದೆ ಇಂತಹ ತಪ್ಪುಗಳು ನಡೆಯದಂತೆ ಈಗಿನಿಂದಲೇ ಓದುವುದು ಕಲಿ ಎಂದು ಬುದ್ದಿ ಹೇಳಿ ಕಳಿಸಿದಳು. 

ಬಿ.ವಿ.ಅನುರಾಧ

Advertisement

Udayavani is now on Telegram. Click here to join our channel and stay updated with the latest news.

Next