Advertisement

ತಿಮ್ಮಾಯಣ: ಮಿತ್ರರ ಪರಸಂಗದ ಕಥೆ

07:30 AM Mar 23, 2018 | |

ಹಿರಿಯ ಕಲಾವಿದ ಲೋಕೇಶ್‌ ನಟನೆಯ “ಪರಸಂಗದ ಗೆಂಡೆತಿಮ್ಮ’ ಚಿತ್ರಕ್ಕೆ ಈಗ 40 ವರ್ಷ. ನಟ ಮಿತ್ರ ಅವರಿಗೂ ಈಗ 40 ವರ್ಷ! – ಅರೇ, “ಪರಸಂಗದ ಗೆಂಡೆತಿಮ್ಮ’ ಚಿತ್ರಕ್ಕೂ ಮಿತ್ರ ಅವರಿಗೂ ಎತ್ತಿಂದೆತ್ತಣ್ಣ ಸಂಬಂಧ ಎಂಬ ಪ್ರಶ್ನೆ ಎದುರಾಗಬಹುದು. ವಿಷಯ ಇಷ್ಟೇ. ಮಿತ್ರ ಕೂಡ “ಪರಸಂಗ’ ಎಂಬ ಹೊಸ ಚಿತ್ರದಲ್ಲಿ ನಟಿಸಿದ್ದಾರೆ.

Advertisement

ಅದೀಗ ಬಿಡುಗಡೆಗೂ ಅಣಿಯಾಗಿದೆ. ಲೋಕೇಶ್‌ ಅಭಿನಯದ “ಪರಸಂಗದ ಗೆಂಡೆತಿಮ್ಮ’ ಚಿತ್ರಕ್ಕೀಗ ನಲವತ್ತು ವರ್ಷ ಗತಿಸಿದೆ. ಅಂತೆಯೇ ಮಿತ್ರ ಅವರಿಗೂ ಈಗ ನಲವತ್ತರ ಹರೆಯ. ಅವರಿಲ್ಲಿ  “ತಿಮ್ಮ’ನ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಅದಿರಲಿ, ಈಗ ವಿಷಯಕ್ಕೆ ಬರೋಣ. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲಾಯಿತು. ನಿರ್ದೇಶಕರಾದ ಸಂತೋಷ್‌ ಆನಂದ್‌ರಾಮ್‌, ಎ.ಪಿ.ಅರ್ಜುನ್‌, ಚೇತನ್‌ಕುಮಾರ್‌ ಅಂದಿನ ಹೈಲೈಟ್‌. ಈ ಮೂವರು ಒಟ್ಟಿಗೆ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಹಾರೈಸಿದರು. 

“ಇದು ನಂಬಿಕೆ, ಮೋಸ, ಅನುಮಾನ ವಿಷಯಗಳ ಮೇಲೆ ಹೆಣೆದ ಕಥೆ’ ಎಂದರು ನಿರ್ದೇಶಕ ರಘು. “ಯಾವುದೇ ಫ್ಯಾಮಿಲಿ ಇರಲಿ, ನಂಬಿಕೆ ಮುಖ್ಯವಾಗಿರಬೇಕು. ಎಡವಟ್ಟಾದರೆ ಏನೆಲ್ಲಾ ಅನಾಹುತ ಆಗುತ್ತೆ ಎಂಬುದೇ ಕಥೆ. ಮನರಂಜನೆ ಜತೆಗೆ ದೇಸೀ  ಸೊಗಡಿನ ಚಿತ್ರವಿದು. ಮಿತ್ರ ಹೊರತುಪಡಿಸಿ ಬೇರ್ಯಾರೂ ಈ ಪಾತ್ರಕ್ಕೆ ಹೊಂದಿಕೆ ಆಗುತ್ತಿರಲಿಲ್ಲ. ತಿಮ್ಮನ ಪಾತ್ರಕ್ಕೆ ನೂರರಷ್ಟು ಜೀವ ತುಂಬಿದ್ದಾರೆ. ಸುಮಾರು 15 ನಾಯಕಿಯರು ಕಥೆ ಕೇಳಿ ಮಾಡಲ್ಲ ಅಂದ ಪಾತ್ರವನ್ನು ಅಕ್ಷತಾ ಒಪ್ಪಿ ಮಾಡಿದ್ದಾರೆ. ಮಿತ್ರ ಇಲ್ಲಿ ಬೇರೆ ಮಿತ್ರ ಆಗಿ ಕಾಣಸಿಗುತ್ತಾರೆ. ನೋಡುಗರಿಗೆ ಒಳ್ಳೆಯ ಹೂರಣ ಸಿಗುತ್ತೆ’ ಎಂಬುದು ರಘು ಮಾತು. ಮಿತ್ರ “ರಾಗ’ ನಂತರ ಏನು ಎಂಬ ಪ್ರಶ್ನೆ ಎದುರಾದಾಗ ಬಂದ ಚಿತ್ರವಿದು. “ನಾನು ಮೌನರಾಗವಾಗಿದ್ದೆ. ನನ್ನ ಮೌನಕ್ಕೆ ಮರುಜೀವ ಕೊಟ್ಟಿದ್ದೇ ಈ “ಪರಸಂಗ”. “ಇದು ಶುದ್ಧ ಗ್ರಾಮೀಣ ಸೊಗಡಿನ ಚಿತ್ರ. ಲೋಕೇಶ್‌ ಅವರ “ಪರಸಂಗದ ಗೆಂಡೆತಿಮ್ಮ’ನ ಹೋಲುವ ಪಾತ್ರವಾಗಿದ್ದರೂ, ನಾನು
ಲೋಕೇಶ್‌ ಅವರ ಪಾದ ಧೂಳಿಗೂ ಸಮನಲ್ಲ.

ಯಾವುದೇ ಹೊಡೆದಾಟ, ಬಡಿದಾಟ ಇರದ, ಮಚ್ಚು, ಲಾಂಗು ಹಾವಳಿ ಇಲ್ಲದ ದೇಸಿ ಚಿತ್ರ. ಕಥೆ, ಪಾತ್ರ, ಹಾಡು, ಎಲ್ಲವೂ ನೋಡುಗರಿಗೆ ಹಬ್ಬ. ಈ ಕಥೆ, ಕೇಳಿದ ಹಲವು ನಾಯಕಿಯರು, ಮಿತ್ರ ಹೀರೋನಾ ಅಂತ ಕೇಳಿ ಕೈ ಬಿಟ್ಟ ನಾಯಕಿಯ ಸ್ಥಾನವನ್ನು ಅಕ್ಷತಾ ತುಂಬಿದ್ದಾರೆ. ಪ್ರತಿಯೊಬ್ಬರ ಸಹಕಾರ, ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದರು ಮಿತ್ರ. ನಾಯಕಿ ಅಕ್ಷತಾ ಅವರಿಗಿದು ಕನ್ನಡದ ಮೊದಲ ಚಿತ್ರ. “ಕಥೆ ಕೇಳಿದಾಗ, ಹೊಸತನವಿದೆ ಎನಿಸಿತು. ನನಗಿಲ್ಲಿ ಎರಡು ಶೇಡ್‌ ಇರುವ ಪಾತ್ರ ಸಿಕ್ಕಿದೆ. ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ’ ಅಂದರು ಅವರು. ಸಂಗೀತ ನಿರ್ದೇಶಕ ಹರ್ಷವರ್ಧನ್‌ರಾಜ್‌, ನಾಲ್ಕು ಹಾಡು ಕೊಟ್ಟಿದ್ದಾರೆ. ಕುಮಾರ್‌, ಲೋಕೇಶ್‌, ಮಹದೇವಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುಜಯ್‌ ಕುಮಾರ್‌ ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯ್‌ ಭರಮಸಾಗರ

Advertisement
Advertisement

Udayavani is now on Telegram. Click here to join our channel and stay updated with the latest news.

Next