“ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಸೆನ್ಸಾರ್ ಯು ಸರ್ಟಿಫಿಕೇಟ್ ನೀಡಿದೆ. ಆದರ್ಶ ಅಯ್ಯಂಗಾರ್ ಅವರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರಕ್ಕೆ ರಕ್ಷಿತ್ ತೀರ್ಥಹಳ್ಳಿಯವರ ನಿರ್ದೇಶನವಿದೆ. ನಿರ್ದೇಶಕರೆ ಬರೆದ ಕಾಡಿನ ನೆಂಟರು ಎಂಬ ಕಥಾ ಸಂಕಲನದಿಂದ ಆಯ್ದ ಕಥೆ ತಿಮ್ಮನ ಮೊಟ್ಟೆಗಳು ಸಿನಿಮಾವಾಗಿದೆ.
ಚಿತ್ರದಲ್ಲಿ ಶೃಂಗೇರಿಯ ರಂಗ ಪ್ರತಿಭೆ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ರಾಘು ರಾಮನಕೊಪ್ಪ, ಪ್ರಗತಿ ಪ್ರಭು, ಮಾಸ್ಟರ್ ಹರ್ಷ, ವಿನಯ್ ಕಣಿವೆ ಮುಂತಾದವರು ನಟಿಸಿದ್ದಾರೆ. ಪ್ರವೀಣ್. ಎಸ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜ್ ಅವರ ಸಂಕಲನ ಹಾಗೂ ಹೇಮಂತ್ ಜೋಯ್ಸ… ಸಂಗೀತ ಚಿತ್ರಕ್ಕಿದೆ. ರಕ್ಷಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿರುವ ಮೂರು ಹಾಡುಗಳಿಗೆ ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್, ಆದರ್ಶ್ ಅಯ್ಯಂಗಾರ್ ಮತ್ತು ಚಿನ್ಮಯಿ ಚಂದ್ರಶೇಖರ್ ದನಿಯಾಗಿದ್ದಾರೆ.
ಮನುಷ್ಯನ ನಂಬಿಕೆ ಮತ್ತು ಆತನ ಆಚರಣೆಗಳ ಮೇಲೆ ಕೇಂದ್ರೀಕೃತವಾಗಿರುವ ಕಥಾವಸ್ತುವನ್ನು ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಸುತ್ತಲಿನ ಹಲವು ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. “ತಿಮ್ಮನ ಮೊಟ್ಟೆಗಳು’ ಅಪ್ಪಟ ಮಲೆನಾಡಿನ ವಿಸ್ಮಯಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿರುವ ಚಿತ್ರ. ಮಲೆನಾಡಿನ ಜೀವನ ಶೈಲಿ, ಪ್ರಾಕೃತಿಕ ಸೌಂದರ್ಯ ಮತ್ತು ಮಾನವೀಯ ಮೌಲ್ಯಗಳ ಚಿತ್ರಣ ಸಿನಿಮಾದಲ್ಲಿದೆ.
ಅದರಲ್ಲೂ ಪಶ್ಚಿಮ ಘಟ್ಟದಲಿ ಕಾಣಸಿಗುವ ಅಪರೂಪದ ಕಾಳಿಂಗ ಸರ್ಪದ ಬಗೆಗಿನ ವಿಶೇಷ ಮಾಹಿತಿ ಸಿನಿಮಾದಲ್ಲಿದ್ದು, ಅತ್ಯಂತ ರೋಚಕತೆಯಿಂದ “ತಿಮ್ಮನ ಮೊಟ್ಟೆಗಳು’ ಸಿನಿಮಾ ಸಾಗುತ್ತದೆ.
ಇನ್ನು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ಪಶ್ಚಿಮ ಘಟ್ಟದ ಸುತ್ತಮುತ್ತಲೂ ಒಂದೇ ಹಂತದಲ್ಲಿ “ತಿಮ್ಮನ ಮೊಟ್ಟೆಗಳು’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ ಎಂಬುದು ಚಿತ್ರತಂಡದ ಮಾಹಿತಿ.