ಮಂಗಳೂರು: ಕರಾವಳಿಯ ಪ್ರಮುಖ ಜಾನಪದ ಕ್ರೀಡೆಯಾದ ಕಂಬಳ ಸ್ಪರ್ಧೆಯ ಸುಧಾರಣೆ ದೃಷ್ಟಿಯಿಂದ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲು ಜಿಲ್ಲಾ ಕಂಬಳ ಸಮಿತಿ ಹಾಗೂ ಶಿಸ್ತು ಸಮಿತಿ ತೀರ್ಮಾನಿಸಿದೆ.
ಈ ಬಾರಿಯಿಂದ ಕಂಬಳ ಬೆಳಗ್ಗೆ 9ರಿಂದ ಪ್ರಾರಂಭವಾಗಿ ಮರುದಿನ 9ರೊಳಗೆ ಮುಕ್ತಾಯವಾಗಬೇಕು; ಸಂಪ್ರದಾಯ ಕಂಬಳ 10.30ಕ್ಕೆ ಪ್ರಾರಂಭಿಸಿ ಮರುದಿನ 10.30ಕ್ಕೆ ಮುಕ್ತಾಯವಾಗಬೇಕು. ಇದಕ್ಕಾಗಿ ಪ್ರತಿ ಕೋಣಗಳಿಗೆ ಸ್ಪರ್ಧಾ ಸಮಯವನ್ನು ನಿಗದಿ ಮಾಡಲಾಗಿದೆ. ಸಮಯ ಮೀರಿದ್ದನ್ನು ಪರಿಶೀಲಿಸಲು “ಗಂತ್’ನಲ್ಲಿ “ಟೈಮರ್’ ಅಳವಡಿಸಲಾಗುತ್ತದೆ. ಎರಡನೇ ಬಾರಿಯ “ಸೈರನ್’ ಆದ ಕೂಡಲೇ ಇದ್ದ ಸ್ಥಿತಿಯಲ್ಲೇ ಕೋಣಗಳನ್ನು ಬಿಡಲಾಗುತ್ತದೆ! ಅದರಂತೆ, ಹಗ್ಗ ಹಿರಿಯ 10 ನಿಮಿಷ, ನೇಗಿಲು ಹಿರಿಯ 9 ನಿಮಿಷ, ಹಗ್ಗ ಕಿರಿಯ 7 ನಿಮಿಷ, ನೇಗಿಲು ಕಿರಿಯ 5 ನಿಮಿಷ, 16ನೇ ಹಂತದ ಬಳಿಕದ ಸಮಯಗಳಿವು.
16ರ ಮೊದಲಿನ ಸ್ಪರ್ಧೆ ನೇಗಿಲು ಕಿರಿಯ 3 ನಿಮಿಷದ ಮೊದಲೇ ಬಿಡಬೇಕು. ಹಗ್ಗ ನೇಗಿಲು ಹಿರಿಯ ವಿಭಾಗಕ್ಕೆ 8 ನಿಮಿಷಗಳು. ಅಡ್ಡ ಹಲಗೆ ಕೋಣಗಳ ಸ್ಪರ್ಧೆಗೆ 10 ನಿಮಿಷ. “ಚಾನ್ಸ್ʼ ಓಡಿಸಲು 7 ನಿಮಿಷಗಳು ಎಂದು ನಿಗದಿ ಮಾಡಲಾಗಿದೆ. ಕನೆಹಲಗೆ ಕೋಣಗಳು ಕರೆಗೆ ಇಳಿದು 3 ಗಂಟೆ ಸಮಯದೊಳಗೆ ಎಲ್ಲ “ಪಾಸು’ಗಳ ಓಟ ಮುಗಿಸಬೇಕು. ಹಗ್ಗ ವಿಭಾಗದ ಕೋಣಗಳಿಗೆ ಕರೆಗೆ ಇಳಿಯಲು ಹಾಗೂ ಸ್ಪರ್ಧಾ ಸಮಯದ 1 ಗಂಟೆ ಮೊದಲು ಕರೆ ನೀಡಬೇಕು. ಕರೆಗೆ ಇಳಿಯಲು ಪ್ರಾರಂಭಿಸಿ 30 ನಿಮಿಷಗಳ ಕಾಲಾವಕಾಶದಲ್ಲಿ ಇಳಿಯಬೇಕು. ಅನಂತರ ನೇರವಾಗಿ ಗೇಟಿಗೆ ತೆರಳುವಂತೆ ಸೂಚಿಸಬೇಕು.
ಸಾಲು ನಿರ್ಣಯ ಆದ ಮೇಲೆ ಎ, ಬಿ ಕೋಣಗಳ ಸ್ಪರ್ಧೆಗೆ ಹಾಗೂ ಓಟಗಾರ ಒಬ್ಬನೇ ಇದ್ದಲ್ಲಿ ಎರಡು ಸ್ಪರ್ಧೆ (ಸಾಲು) ಮಾತ್ರ ನೀಡುವುದು. ಸೆಮಿಫೈನಲ್ ಬಳಿಕ 1 ಸಾಲು ಮಾತ್ರ ಮಧ್ಯ ಅವಕಾಶ ಸಿಗಲಿದೆ.
ಕೋಣ ಓಟ-ಬಿಡಲು “ಸಂಖ್ಯೆ’ ನಿಗದಿ!
ಕೋಣ ಓಡಿಸುವವರು 3 ವಿಭಾಗದಲ್ಲಿ ಮಾತ್ರ ಓಡಿಸಬಹುದು. (ಎ+ಬಿ ಓಡಿಸಬಹುದು). ಕೋಣ ಬಿಡುವವರು 4 ವಿಭಾಗದಲ್ಲಿ (ಜತೆ) ಮಾತ್ರ ಬಿಡುವಂತೆ ಸೂಚಿಸಲಾಗಿದೆ. (ಕನೆ ಹಲಗೆ, ಅಡ್ಡ ಹಲಗೆ ಹೊರತುಪಡಿಸಿ)