Advertisement

ಅರಣ್ಯ ಇಲಾಖೆ ಹೊರಗುತ್ತಿಗೆ ಚಾಲಕರಿಗೆ ಸಕಾಲಕ್ಕಿಲ್ಲ ವೇತನ

11:07 PM Oct 13, 2019 | Lakshmi GovindaRaju |

ಬೆಂಗಳೂರು: ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಯಡಿ ಕೆಲಸ ಮಾಡುತ್ತಿರುವ 750ಕ್ಕೂ ಹೆಚ್ಚು ವಾಹನ ಚಾಲಕರಿಗೆ ಸಕಾಲಕ್ಕೆ ವೇತನ ದೊರೆಯುತ್ತಿಲ್ಲ. ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ಸೌಲಭ್ಯಕ್ಕಾಗಿ ಸಾವಿರಕ್ಕೂ ಹೆಚ್ಚು ವಾಹನಗಳಿದ್ದರೂ, ಆ ಪೈಕಿ ಅಂದಾಜು 200 ವಾಹನಗಳಿಗೆ ಮಾತ್ರ ಖಾಯಂ ಚಾಲಕರಿದ್ದಾರೆ. ಉಳಿದ 750ರಿಂದ 800 ವಾಹನಗಳ ಚಾಲನೆಗೆ ದಶಕಗಳಿಂದಲೂ ಹೊರಗುತ್ತಿಗೆ ನೌಕರರನ್ನೇ ಅವಲಂಬಿಸಬೇಕಿದೆ.

Advertisement

ಆದರೆ, ಈ ಹೊರಗುತ್ತಿಗೆ ನೌಕರರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳಾಗಲಿ, ಸೇವಾ ಭದ್ರತೆಯಾಗಲಿ, ಸಮಾನ ಕೆಲಸಕ್ಕೆ ಸಮಾನ ವೇತನವಾಗಲಿ ಸಿಗುತ್ತಿಲ್ಲ. ದಿನದ 24 ಗಂಟೆ ಕಾರ್ಯ ನಿರ್ವಹಿಸಿದರೂ ತಿಂಗಳಿಗೆ 8 ರಿಂದ 10 ಸಾವಿರ ರೂ. ಸಂಬಳ ಸಿಗುತ್ತಿದ್ದು ಸಂಬಳವೂ ಮೂರ್‍ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಅದರಲ್ಲೂ ಶೇ.10ರಷ್ಟು ಗುತ್ತಿಗೆ ದಾರಿಗೆ ಕಮಿಷನ್‌ ನೀಡಬೇಕಾಗಿದೆ.

ಇಲಾಖೆಯಿಂದ ಸರಿಯಾಗಿ ಅನುದಾನ ಬಂದಿಲ್ಲ ಎಂಬ ಕಾರಣದಿಂದ ಕಳೆದ ಮೂರು ತಿಂಗಳಿಂದ ಸಂಬಳ ಸಿಗದೇ ಚಾಲಕರು ಹಾಗೂ ಅವರ ಕುಟುಂಬ ಸದಸ್ಯರು ಪರದಾಡುತ್ತಿದ್ದಾರೆ. ಖಾಯಂ ಸರ್ಕಾರಿ ನೌಕರರಿಗೆ ದೊರೆಯುವ ಪ್ರಮುಖ ಸೌಲಭ್ಯಗಳನ್ನು ಗುತ್ತಿಗೆ ನೌಕರರಿಗೂ ನೀಡಬೇಕೆಂಬ ಸರ್ಕಾರದ ಆದೇಶ ಅರಣ್ಯ ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದಿರುವ ವಾಹನ ಚಾಲಕರಿಗೆ ಅನ್ವಯ ಆಗಿಲ್ಲ. ತಾತ್ಕಾಲಿಕ ನೌಕರರು, ಖಾಯಂ ನೌಕರರು ಪಡೆಯುವ ಕನಿಷ್ಠ ವೇತನ ಶ್ರೇಣಿಗೆ ಅರ್ಹರು ಎಂಬ ಆದೇಶವಿದ್ದರೂ ಇದು ಸಮರ್ಪಕವಾಗಿ ಜಾರಿಯಾಗಿಲ್ಲ.

ಏಕಾಏಕಿ ಬದಲಾದ ಚಿತ್ರಣ: 2018ಕ್ಕೂ ಪೂರ್ವದಲ್ಲಿ ಅರಣ್ಯ ಇಲಾಖೆ ನೌಕರರು ಇಲಾಖೆಯ ದಿನಗೂಲಿ ನೌಕರರೇ ಆಗಿದ್ದರು. ಮುಂದೆ ಕೆಲಸ ಖಾಯಂ ಆಗಬಹುದು ಎಂಬ ಆಶಾಭಾವನೆಯಿಂದ ಕಳೆದ 15-20 ವರ್ಷಗಳಿಂದಲೂ ನೂರಾರು ಚಾಲಕರು ಇಲಾಖೆಯಲ್ಲಿಯೇ ಕೆಲಸ ನಿರ್ವಹಿಸುತ್ತಾ ಬಂದಿದ್ದರು. ಆದರೆ, 2017ರಲ್ಲಿ ಏಕಾಏಕಿ ಇಲಾಖೆಯು ದಿನಗೂಲಿ ಚಾಲಕರನ್ನು ಹೊರಗುತ್ತಿಗೆ ನಿಯಮದಡಿ ತಂದಿತು. ವಲಯ ಮಟ್ಟದ ಸ್ಥಳೀಯ ಗುತ್ತಿಗೆದಾರರಿಗೆ ಅವರ ನಿರ್ವಹಣೆ, ನೇಮಕಾತಿ ಜವಾಬ್ದಾರಿ ನೀಡಲಾಯಿತು.

ಹೊರಗುತ್ತಿಗೆ ನೌಕರರಾದ ಬಳಿಕ ಚಾಲಕರಿಗೆ ಸೂಕ್ತ ಸೌಲಭ್ಯಗಳು, ಸಂಬಳ ಸಮಸ್ಯೆ ಎದುರಾಗಿದೆ. 1993 -94ರಲ್ಲಿ ಅರಣ್ಯ ಇಲಾಖೆ ವಾಹನ ಚಾಲಕರಿಗೆ ನೇರ ನೇಮಕಾತಿಗೆ ಅವಕಾಶ ನೀಡಲಾಗಿತ್ತು. ಅಂದಿನಿಂದ ಇಲ್ಲಿವರೆಗೂ ಇಂತಹ ಮತ್ತೂಂದು ಪ್ರಕ್ರಿಯೆ ನಡೆದಿಲ್ಲ. ಇತ್ತೀಚೆಗೆ ಮಾವುತ, ಕಾವಾಡಿ, ಜಮೇದಾರರ ಹುದ್ದೆಗಳನ್ನು ನೇರ ನೇಮಕಾತಿ ಮಾಡುತ್ತಿದ್ದು, ಚಾಲಕ ಹುದ್ದೆ ಖಾಲಿ ಇದ್ದರೂ 15-20 ವರ್ಷ ಸೇವೆ ಸಲ್ಲಿಸಿದ ಚಾಲಕರ ನೇಮಕಾತಿ ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಯನ್ನು ನೌಕರರು ಕೇಳುತ್ತಿದ್ದಾರೆ.

Advertisement

20 ವರ್ಷ ಸೇವೆಗೂ ಬೆಲೆ ಇಲ್ಲ: “ಕಳೆದ 15 ವರ್ಷಗಳಿಂದ ಇಲಾಖೆಯಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಮುಂದೆ ಖಾಯಂ ಆಗಬಹುದೆಂಬ ನಂಬಿಕೆ ಇತ್ತು. ಎರಡು ವರ್ಷದ ಹಿಂದೆ ಚಾಲಕರನ್ನು ಹೊರಗುತ್ತಿಗೆ ನೌಕರರು ಎಂದು ಪರಿಗಣಿಸಿದರು. ಈ ಕುರಿತು ಯಾವುದೇ ಮಾಹಿತಿಯಾಗಲಿ, ಚಾಲಕರ ಅಭಿಪ್ರಾಯವಾಗಲಿ ಇಲಾಖೆ ಕೇಳಲಿಲ್ಲ. ಇಲಾಖೆಗೆ 15 ವರ್ಷ ಸೇವೆ ಸಲ್ಲಿಸಿದ ನಂತರವೂ ನಮ್ಮನ್ನು ಖಾಯಂ ಮಾಡಿಕೊಳ್ಳಲಿಲ್ಲ.

ಇಂದು ಗುತ್ತಿಗೆದಾರರ ಕೈಕೆಳಗೆ ಕೆಲಸ ಮಾಡಬೇಕಿದೆ. ನಮಗೆ ಯಾವುದೇ ಗುರುತಿನ ಚೀಟಿ ಇಲ್ಲ, ಕಾಡಿನಲ್ಲಿ ರಾತ್ರಿ ಅಲೆದಾಟ ನಡೆಸಿದರೂ ಯಾವುದೇ ಭದ್ರತೆ ಇಲ್ಲ. ವೇತನವೂ ಇತರೆ ಇಲಾಖೆಯ ಚಾಲಕರಿಗೆ ಹೋಲಿಸಿದರೆ ಶೇ.50ರಷ್ಟು ಕಡಿಮೆ ಇದೆ’ ಎನ್ನುತ್ತಾರೆ ಕೊಡಗು ವೃತ್ತದ ಅರಣ್ಯ ಇಲಾಖೆ ವಾಹನ ಚಾಲಕರೊಬ್ಬರು.

ಖಾಯಂ ಚಾಲಕರ ನೇರ ನೇಮಕಾತಿಗೆ ಸರ್ಕಾರ ಅನುಮತಿ ನೀಡಬೇಕಿದೆ. ಸದ್ಯ ಸರ್ಕಾರದ ನಿಯಮದ ಪ್ರಕಾರ ವಾಹನ ಚಾಲಕರನ್ನು ಹೊರಗುತ್ತಿಗೆಗೆ ನೀಡಲಾಗಿದೆ. ಗುತ್ತಿಗೆ ಪಡೆದವರು ಸೂಕ್ತ ಸಂಬಳ, ಸೌಲಭ್ಯ ನೀಡುವ ಕುರಿತು ಸ್ಥಳೀಯ ಅಧಿಕಾರಿಗಳಿಗೆ ಪರಿಶೀಲಿಸಲು ತಿಳಿಸಿದ್ದೇವೆ. ಗುತ್ತಿಗೆದಾರರಿಂದ ಸಮಸ್ಯೆಗೊಳಗಾದವರು ನೇರವಾಗಿ ಬಂದು ಮೇಲಾಧಿಕಾರಿಗಳನ್ನು ಕಾಣಬೇಕು.
-ಪುನಾಟಿ ಶ್ರೀಧರ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ಅರಣ್ಯ ಇಲಾಖೆಯ ಹೊರಗುತ್ತಿಗೆ ವಿಧಾನದಿಂದ 750ಕ್ಕೂ ಹೆಚ್ಚು ವಾಹನ ಚಾಲಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಹೊರಗುತ್ತಿಗೆ ಪಡೆದವರು ಶ್ರೀಮಂತರಾಗುತ್ತಿದ್ದಾರೆ. ನೌಕರರಿಗೆ ಯಾವುದೇ ಸೌಲಭ್ಯವಿಲ್ಲ. ಸೇವಾಭದ್ರತೆಯೂ ಇಲ್ಲ. ಇಲಾಖೆ ಸಂಬಳ ಸಂಬಳವೂ ನೇರವಾಗಿ ಕೈ ಸೇರುತ್ತಿಲ್ಲ. ಇದರಲ್ಲೂ ಅವ್ಯವಹಾರ ನಡೆಸಲಾಗುತ್ತಿದೆ. ಅ.21ರಂದು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದ್ದು, ಎಲ್ಲಾ ಹೊರಗುತ್ತಿಗೆ ಚಾಲಕರೂ ಭಾಗವಹಿಸುತ್ತಿದ್ದಾರೆ.
-ಎ.ಎಂ.ನಾಗರಾಜು, ಅಧ್ಯಕ್ಷರು, ರಾಜ್ಯ ಅರಣ್ಯ ಇಲಾಖೆ ಕ್ಷೇಮಾಭಿವೃದ್ಧಿ ಸಂಘ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next