ವಿಜಯಪುರ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಲಾಭ ಸಾರ್ವಜನಿಕರಿಗೆ ಸಕಾಲದಲ್ಲಿ ದೊರೆಯುವಂತಾಗಬೇಕು. ಇದಕ್ಕಾಗಿ ಅಧಿಕಾರಿಗಳು ಜಿಲ್ಲಾಮಟ್ಟದ ಸಮಿತಿ ರಚಿಸಿ ಹಾಗೂ ವ್ಯವಸ್ಥಿತ ಕ್ರಿಯಾ ಯೋಜನೆ ರೂಪಿಸುವಂತೆ ಜಿಲ್ಲಾ ಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ಮತ್ಸ್ಯ ಯೋಜನೆ ಜಿಲ್ಲಾ ಸಮಿತಿ ಕ್ರಿಯಾ ಯೋಜನೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೀನುಗಾರಿಕೆಗೆ ವಿಫುಲ ಅವಕಾಶಗಳಿವೆ. ಎರಡು ಬೃಹತ್ ಜಲಾಶಯ ಹಾಗೂ 189 ಕೆರೆಗಳು ಮತ್ತು ಕೃಷಿ ಹೊಂಡಗಳಿವೆ. ಈ ಕೊಳಗಳ ಜಲ ಸಂಪನ್ಮೂಲ ಸದ್ಬಳಕೆಗಾಗಿ ಮೀನುಗಾರಿಕೆಗೆ ಮತ್ತಷ್ಟು ಅವಕಾಶಗಳು ದೊರೆಯುವಂತೆ ಕ್ರಿಯಾ ಯೋಜನೆ ರೂಪಿಸಿ ಎಂದರು.
ಮತ್ಸ್ಯ ಸಂಪದ ಯೋಜನೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ವಿಫುಲ ಅವಕಾಶಗಳಿದ್ದು, ಮೀನುಗಾರಿಕೆಗೆ ಸಹಾಯವಾಗಲು ವಾಹನಗಳ ಖರೀದಿಗೆ ಶೇ.60 ರಿಯಾಯತಿ ಹಾಗೂ ಸಾಮಾನ್ಯ ವರ್ಗದವರಿಗೆ ಶೇ.40ರಷ್ಟು ರಿಯಾಯತಿ ಸಿಗಲಿದೆ. ಅನೇಕ ರೈತ ಮೀನುಗಾರರು ದ್ವಿಚಕ್ರ ವಾಹನ ಮೂಲಕವೇ ಮೀನು ಮಾರಾಟ ಮಾಡುತ್ತಿದ್ದು, ಈ ಯೋಜನೆಯಿಂದ ಅನೇಕ ಲಾಭ ಪಡೆದುಕೊಳ್ಳಬಹುದಾಗಿದೆ. ಮೀನುಗಾರರ ಬೇಡಿಕೆಯಂತೆ ಕ್ರಿಯಾ ಯೋಜನೆ ಸಿದ್ಧಪಡಿಸುವುದು ಹಾಗೂ ಅನಿರ್ವಾಯತೆ ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಬೇಕು ಎಂದರು.
ಮೀನುಗಾರಿಕೆ ಸಂಘಗಳನ್ನು ನಿರ್ಮಾಣ ಮಾಡಿ ಮೀನು ಸಂಗ್ರಹ ಮತ್ತು ಮಾರಾಟ ಮಾಡುವ ಸಂಘಗಳು ಹಾಗೂ ವೈಯಕ್ತಿಕವಾಗಿ ಮಾರಾಟ ಮಾಡುವವರಿಗೆ ಮತ್ತು ಸಾಂಪ್ರದಾಯಿಕವಾಗಿ ಕೈಗೊಳ್ಳುತ್ತಿರುವ ಮೀನುಗಾರರಿಗೂ ಅವಕಾಶಗಳಿವೆ. ಇವುಗಳ ಸರಿಯಾದ ಉಪಯೋಗವನ್ನು ಸಾರ್ವಜನಿಕರಿಗೆ ಮುಟ್ಟುವಂತಾಗಬೇಕು ಎಂದು ಹೇಳಿದರು.
ಜಿಪಂ ಸಿಇಒ ಗೋವಿಂದರೆಡ್ಡಿ, ಶ್ರೀಶೈಲ ಗಂಗನಹಳ್ಳಿ, ವಿಜಯಕುಮಾರ ಸೇರಿದಂತೆ ಮೀನುಗಾರರು ಇದ್ದರು.